ಗೃಹ ಸಚಿವ ಅಮಿತ್‌ ಶಾ ವಿರುದ್ಧ ಆರೋಪ ಸುಳ್ಳು : ಕೆನಡಾ ಸಚಿವ ಡೇವಿಡ್‌ ಮಾರಿಸನ್‌ ಹೇಳಿಕೆಗೆ ಭಾರತ ಎಚ್ಚರಿಕೆ

| Published : Nov 04 2024, 12:20 AM IST / Updated: Nov 04 2024, 06:02 AM IST

ಸಾರಾಂಶ

‘ಕೆನಡಾದಲ್ಲಿನ ಸಿಖ್ಖರನ್ನು ಟಾರ್ಗೆಟ್‌ ಮಾಡುವಂತೆ ಸೂಚಿಸಿದ್ದೇ ಭಾರತದ ಗೃಹ ಸಚಿವ ಅಮಿತ್‌ ಶಾ’ ಎಂಬ ಕೆನಡಾ ಸಚಿವ ಡೇವಿಡ್‌ ಮಾರಿಸನ್‌ ಹೇಳಿಕೆಗೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.  

ನವದೆಹಲಿ: ‘ಕೆನಡಾದಲ್ಲಿನ ಸಿಖ್ಖರನ್ನು ಟಾರ್ಗೆಟ್‌ ಮಾಡುವಂತೆ ಸೂಚಿಸಿದ್ದೇ ಭಾರತದ ಗೃಹ ಸಚಿವ ಅಮಿತ್‌ ಶಾ’ ಎಂಬ ಕೆನಡಾ ಸಚಿವ ಡೇವಿಡ್‌ ಮಾರಿಸನ್‌ ಹೇಳಿಕೆಗೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂಥ ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆಗಳಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗಲಿದೆ ಎಂದು ಭಾರತ ಕೆನಡಾಕ್ಕೆ ಎಚ್ಚರಿಕೆ ನೀಡಿದೆ.

ಅಲ್ಲದೆ, ‘ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಸಂಭಾಷಣೆ ಕದ್ದಾಲಿಕೆ ಮತ್ತು ಚಲನವಲನಗಳ ಮೇಲೆ ನಿಗಾ ಇಡುವ ಮೂಲಕ ಅವರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಇದು ರಾಜತಾಂತ್ರಿಕ ಒಪ್ಪಂದಗಳಿಗೆ ಪೂರ್ಣ ವಿರುದ್ಧವಾದುದು’ ಎಂಬ ಎಚ್ಚರಿಕೆಯ ಸಂದೇಶವನ್ನೂ ಕೆನಡಾಕ್ಕೆ ರವಾನಿಸಿದೆ.

ಕೆನಡಾ ಸಚಿವ ಮಾರಿಸನ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಸಚಿವ ಡೇವಿಡ್‌ ಮಾರಿಸನ್‌ ಇತ್ತೀಚೆಗೆ ಕೆನಡಾದ ಸಾರ್ವಜನಿಕ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿ ಮುಂದೆ ಹಾಜರಾಗಿ ಭಾರತದ ಗೃಹ ಸಚಿವ ಅಮಿತ್‌ ಶಾ ವಿರುದ್ಧ ನೀಡಿದ ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆಯನ್ನು ಭಾರತ ಸರ್ಕಾರ ತೀಕ್ಷ್ಣ ನುಡಿಗಳಲ್ಲಿ ಖಂಡಿಸುತ್ತದೆ. ಜೊತೆಗೆ ಭಾರತದ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಕೆನಡಾ ಅಧಿಕಾರಿಗಳು ಇಂಥ ಸುದ್ದಿಯನ್ನು ಸೋರಿಕೆ ಮಾಡಿದ್ದಾರೆ. ಇದು ಹಾಲಿ ಕೆನಡಾ ಸರ್ಕಾರ ರಾಜಕೀಯ ಕಾರ್ಯಸೂಚಿಸ ಬಗ್ಗೆ ಭಾರತ ಸರ್ಕಾರ ಹೊಂದಿರುವ ನಿಲುವನ್ನು ಮತ್ತಷ್ಟು ಖಾತರಿಪಡಿಸಿದೆ. ಇಂಥ ಬೇಜಾವಾಬ್ದಾರಿ ವರ್ತನೆಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ‘ಕಳೆದ ಕೆಲ ದಿನಗಳಿಂದ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಅವರ ಚಲನವಲನಗಳ ಮೇಲೆ ಕಾನೂನುಬಾಹಿರವಾಗಿ ನಿಗಾ ಇಡಲಾಗುತ್ತಿದೆ’ ಎಂದೂ ಜೈಸ್ವಾಲ್‌ ಆರೋಪ ಮಾಡಿದರು.

ಮಾರಿಸನ್‌ ಹೇಳಿದ್ದೇನು?:

ಇತ್ತೀಚೆಗೆ ಕೆನಡಾದ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಸಚಿವ ಮಾರಿಸನ್‌, ‘ಕೆನಡಾದಲ್ಲಿನ ಸಿಖ್ಖರ ಗುರಿಯಾಗಿಸಿ ಹಿಂಸಾಚಾರ ನಡೆಸುವಂತೆ, ಅವರನ್ನು ಬೆದರಿಸುವಂತೆ ಮತ್ತು ಅವರ ಕುರಿತ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇ ಭಾರತದ ಗೃಹ ಸಚಿವ ಅಮಿತ್‌ ಶಾ. ಈ ವಿಷಯ ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾಗಲು ನಾನು ನೀಡಿದ್ದ ಮಾಹಿತಿಯೇ ಕಾರಣ’ ಎಂದು ಹೇಳಿದ್ದರು.

ಭಾರತದ ಜತೆಗಿನ ಸಂಘರ್ಷ ನಡುವೆಯೇ ಟ್ರುಡೋ ದೀಪಾವಳಿ

ನವದೆಹಲಿ: ಭಾರತದ ಜತೆಗಿನ ಸಂಘರ್ಷದ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾನುವಾರ ದೀಪಾವಳಿ ಆಚರಿಸಿದ್ದು, ಅದರ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.ವೀಡಿಯೊದಲ್ಲಿ, ಟ್ರೂಡೋ ಅವರು ಕೆನಡಾದ 3 ಹಿಂದೂ ದೇವಾಲಯಗಳು ನೀಡಿರುವ ಧಾರ್ಮಿಕ ದಾರಗಳನ್ನು ಕಟ್ಟಿರುವುದು ಕಂಡುಬರುತ್ತದೆ.ಈ ನಡುವೆ, ‘ಕಳೆದ ಕೆಲವು ತಿಂಗಳುಗಳಲ್ಲಿ ನಾನು 3 ವಿಭಿನ್ನ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದಾಗ ಕೈಕಡಗ ನೀಡಿದ್ದರು. ಅವುಗಳು ರಕ್ಷಣೆ ನೀಡುತ್ತವಂತೆ. ಅವು ತಾವಾಗೇ ಬೀಳುವವರೆಗೆ ನಾನು ತೆಗೆಯಲ್ಲ’ ಎಂದು ಟ್ರುಡೋ ಹೇಳಿದ್ದಾರೆ.

ದೀಪಾವಳಿ ವೇಳೆ ಅವರಿಗೆ ತಟ್ಟೆಯಲ್ಲಿ ಜಿಲೇಬಿ ನೀಡಲಾಯಿತು. ಆಗ ಅವರು, ‘ಎಲ್ಲವನ್ನೂ ತಿನ್ನಲ್ಲ. ನನ್ನ ಆಪ್ತರಿಗೂ ಕೆಲವು ಜಿಲೇಬಿ ಒಯ್ಯುವೆ’ ಎಂದು ತಮಾಷೆ ಮಾಡಿದರು.

ಭಾರತದಿಂದ ಸೈಬರ್‌ ದಾಳಿ ಅಪಾಯ: ಕೆನಡಾ ಹೊಸ ಕ್ಯಾತೆ

ಒಟ್ಟಾವಾ/ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಭಾರತ ಕಾರಣ, ಎಂದು ಆರೋಪಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸರ್ಕಾರ, ಇದೀಗ ಭಾರತದ ಸರ್ಕಾರಿ ಪ್ರಾಯೋಜಿತ ಸೈಬರ್‌ ದಾಳಿಕೋರರು ಗೂಢಚರ್ಯೆ ಉದ್ದೇಶಕ್ಕಾಗಿ ಕೆನಡಾದ ಮೇಲೆ ದಾಳಿ ನಡೆಸಬಹುದು ಎಂಬ ಹೊಸ ಆರೋಪ ಮಾಡಿದೆ.ಆದರೆ ಕೆನಡಾದ ಈ ಹೊಸ ಆರೋಪವನ್ನು ಭಾರತ ಸಾರಸಗಟಾಗಿ ತಿರಸ್ಕರಿಸಿದೆ. ಭಾರತದ ಮೇಲೆ ದಾಳಿಗೆ ಇದು ಮತ್ತೊಂದು ಉದಾಹರಣೆ ಅಷ್ಟೇ. ಭಾರತದ ವಿರುದ್ಧ ಜಾಗತಿಕ ನಿಲುವನ್ನು ತಿರುಚಲು ನಾವು ಯತ್ನಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಕೆನಡಾ ಅಧಿಕಾರಿಗಳು ಹೇಳಿದ್ದ ಮಾತುಗಳಿಗೆ ಈ ಹೊಸ ಆರೋಪ ಮತ್ತೊಂದು ಉದಾಹರಣೆಯಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ತಿರುಗೇಟು ನೀಡಿದ್ದಾರೆ.

ಹೊಸ ಆರೋಪ:ಕೆನಡಾ ಸರ್ಕಾರ ಇತ್ತೀಚೆಗೆ ‘ರಾಷ್ಟ್ರೀಯ ಸೈಬರ್‌ ಅಪಾಯ ಅಂದಾಜು ವರದಿ 2025-26’ ಬಿಡುಗಡೆ ಮಾಡಿದೆ. ಅದರಲ್ಲಿ ‘ಚೀನಾ, ರಷ್ಯಾ, ಇರಾನ್‌, ಉತ್ತರ ಕೊರಿಯಾ ಮತ್ತು ಭಾರತದ ಸರ್ಕಾರಿ ಪ್ರಾಯೋಜಿತ ದಾಳಿಕೋರರು, ಕೆನಡಾ ವ್ಯಕ್ತಿಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೇಲೆ ಗೂಢಚರ್ಯೆ ಉದ್ದೇಶದಿಂದ ದಾಳಿ ಮಾಡಬಹುದು’ ಎಂದು ಎಚ್ಚರಿಸಲಾಗಿದೆ.

ಅಲ್ಲದೆ ಭೌಗೋಳಿಕ-ರಾಜಕೀಯವಾಗಿ ಸರ್ಕಾರೇತರ ದಾಳಿಕೋರರ ಪಟ್ಟಿಯಲ್ಲೂ ಭಾರತದ ಹೆಸರನ್ನು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ ಇದಕ್ಕೆ ಉದಾಹರಣೆಯಾಗಿ ನಿಜ್ಜರ್‌ ಹತ್ಯೆಗೆ ಭಾರತ ಕಾರಣ ಎಂದು ತಾನು ಟೀಕಿಸಿದ ಬಳಿಕ ಕೆಲ ಸೈಬರ್‌ ದಾಳಿಕೋರರು, ಕೆನಡಾದ ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಿದ್ದನ್ನು ಪ್ರಸ್ತಾಪಿಸಲಾಗಿದೆ.ಜೊತೆಗೆ, ಭಾರತೀಯ ನಾಯಕತ್ವವು ಸ್ವದೇಶಿ ಸೈಬರ್‌ ಸಾಮರ್ಥ್ಯದ ಮೂಲಕ ಸುಧಾರಿತ ಸೈಬರ್‌ ಯೋಜನೆಯ ಗುರಿ ಹೊಂದಿದೆ. ಈ ಸೈಬರ್‌ ಯೋಜನೆಯ ಮೂಲಕ ಭಾರತ ತನ್ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ಗೂಢಚರ್ಯೆ, ಉಗ್ರ ನಿಗ್ರಹ, ಜಾಗತಿಕವಾಗಿ ದೇಶದ ಸ್ಥಾನಮಾನ ಹೆಚ್ಚಿಸುವ, ಭಾರತದ ವಿರುದ್ಧ ಶಕ್ತಿಗಳ ವಿರುದ್ಧ ಅಭಿಪ್ರಾಯ ರೂಪಿಸಲೂ ಈ ಸೈಬರ್‌ ಯೋಜನೆಯನ್ನು ಬಳಸಿಕೊಳ್ಳುವ ಗುರಿ ಹೊಂದಿದೆ’ ಎಂದು ವರದಿ ಹೇಳಿದೆ.

ಅಲ್ಲದೆ ‘ತನ್ನ ಸೈಬರ್‌ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತ, ವಾಣಿಜ್ಯ ಸೈಬರ್‌ ದಾಳಿಕೋರರ ನೆರವನ್ನು ಪಡೆಯುವ ಸಾಧ್ಯತೆ ಇದೆ. ಇಂಥ ಶಕ್ತಿಗಳನ್ನು ಬಳಸಿಕೊಂಡು ಭಾರತ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಗೂಢಚರ್ಯೆ ಉದ್ದೇಶದಿಂದ ಕೆನಡಾದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಜಾಗತಿಕವಾಗಿ ಶಕ್ತಿಕೇಂದ್ರವಾಗಲು ಬಯಸುತ್ತಿರುವ ಭಾರತದಂಥ ದೇಶಗಳು ವಿವಿಧ ಸ್ತರಗಳಲ್ಲಿ ಕೆನಡಾದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಉಭಯ ದೇಶಗಳ ನಡುವಿನ ಅಧಿಕೃತ ದ್ವಿಪಕ್ಷೀಯ ಸಂಬಂಧವು ಇಂಥ ದಾಳಿ ಚಟುವಟಿಕೆಯನ್ನು ಅವಲಂಬಿಸಿರುತ್ತದೆ’ ಎಂದು ವರದಿ ಹೇಳಿದೆ.