ಸಾರಾಂಶ
ಪ್ರಯಾಗ್‌ರಾಜ್: ಹೆಚ್ಚುತ್ತಿರುವ ಜನಸಂಖ್ಯೆ ಭಾರತದ ಪಾಲಿಗೆ ದೊಡ್ಡ ಸವಾಲು ಎಂದು ಪ್ರತಿಪಾದಿಸಿರುವ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ, 1975ರಲ್ಲಿ ದೇಶದ ಮೇಲೆ ಹೇರಲಾದ ತುರ್ತುಪರಿಸ್ಥಿತಿಯ ಸಮಯದ ಬಳಿಕ ಜನಸಂಖ್ಯಾ ನಿಯಂತ್ರಣದ ಬಗ್ಗೆ ಭಾರತೀಯರು ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.
ಇಲ್ಲಿನ ಎನ್‌ಐಟಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೂರ್ತಿ, ‘ಜನಸಂಖ್ಯಾ ಹೆಚ್ಚಳದಿಂದಾಗಿ ಭಾರತ ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಕರ್ಯಗಳ ಸವಾಲು ಎದುರಿಸುತ್ತಿದೆ. ತುರ್ತುಪರಿಸ್ಥಿತಿಯ ಬಳಿಕ ಭಾರತೀಯ ಜನಸಂಖ್ಯಾ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಇದು ಅಮೆರಿಕ, ಬ್ರೆಜಿಲ್, ಚೀನಾ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವನ್ನು ಹೆಚ್ಚು ಸುಸ್ಥಿರವಲ್ಲದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಭಾರತಕ್ಕೆ ಹೋಲಿಸಿದರೆ ಇತರೆ ದೇಶಗಳಲ್ಲಿ ತಲಾ ಭೂಲಭ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ತುರ್ತುಪರಿಸ್ಥಿತಿ ವೇಳೆ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಬಳಿಕ, ಭಾರತ ಜನಸಂಖ್ಯಾ ನಿಯಂತ್ರಣವನ್ನು ಪ್ರಮುಖವಾಗಿ ಪರಿಗಣಿಸಿಲ್ಲ. ಕೆಲವು ರಾಜ್ಯಗಳು ಈ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದರೆ, ಇನ್ನು ಕೆಲ ರಾಜ್ಯಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಮೂರ್ತಿ ಹೇಳಿದ್ದಾರೆ.
1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ವೇಳೆ ಕೇವಲ ಒಂದು ವರ್ಷದಲ್ಲಿ 60 ಲಕ್ಷಕ್ಕೂ ಹೆಚ್ಚು ಪುರುಷರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.