ಇಸ್ರೋ ಮಹಾ ಸಾಹಸ: ಬಾಹ್ಯಾಕಾಶದಲ್ಲಿ 2 ಉಪಗ್ರಹಗಳನ್ನು ಪರಸ್ಪರ ಕೂಡಿಸಿ, ಬೇರ್ಪಡಿಸುವ ಕಸರತ್ತು

| Published : Dec 30 2024, 06:55 AM IST

ISRO

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಯೋಜನೆ ಭಾಗವಾಗಿ 2 ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ.

ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಯೋಜನೆ ಭಾಗವಾಗಿ 2 ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ. ಇದರಲ್ಲಿ ಯಶಸ್ವಿಯಾದರೆ ಸ್ಪೇಡೆಕ್ಸ್‌ನಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಎನ್ನಿಸಿಕೊಳ್ಳಲಿದೆ. ಸ್ಪೇಡೆಕ್ಸ್‌ ಯೋಜನೆ ಮೂಲಕ ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಹಾಗೂ ಅನ್‌ಡಾಕಿಂಗ್‌ ನಡೆಸುವ ಭಾರತದ ಸಾಮರ್ಥ್ಯ ಪ್ರದರ್ಶಿಸಲಿದೆ. ಅಂದರೆ ಇದು 2 ನೌಕೆಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗವಾಗಿದೆ.

ಏನಿದು ಪ್ರಯೋಗ?: ಪಿಎಸ್‌ಎಲ್‌ವಿ ರಾಕೆಟ್‌ ಸಹಾಯದಿಂದ ಬಾಹ್ಯಾಕಾಶಕ್ಕೆ ಟಾರ್ಗೆಟ್‌ ಮತ್ತು ಚೇಸರ್‌ ಎಂಬ 2 ಉಪಗ್ರಹಗಳನ್ನು ಉಡಾವಣೆ ಮಾಡುವುದು. ಅವುಗಳಲ್ಲಿರುವ ವ್ಯವಸ್ಥೆಯ ಸಹಾಯದಿಂದ ಪರಸ್ಪರ ಸಂಧಿಸುವಂತೆ ಮಾಡುವುದು, ಸೆನ್ಸರ್‌ಗಳನ್ನು ಬಳಸಿ ಎರಡೂ ಉಪಗ್ರಹಗಳು ಒಂದಕ್ಕೊಂದು ಜೋಡಣೆ (ಡಾಕಿಂಗ್‌) ಆಗುವಂತೆ ಮಾಡುವುದು. ಬಳಿಕ ಪರಸ್ಪರ ಬೇರೆ (ಅನ್‌ಡಾಕಿಂಗ್‌) ಆಗುವಂತೆ ಮಾಡುವುದು ಇಸ್ರೋ ನಡೆಸುತ್ತಿರುವ ಪ್ರಯೋಗ. ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇದಕ್ಕೆ ಇಟ್ಟಿದೆ.

ಏಕೆ ಈ ಪ್ರಯೋಗ?: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇಸ್ರೋ ಕೂಡ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ಪರಿಣತಿ ಬೇಕು. ಜತೆಗೆ ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಈ ತಂತ್ರಜ್ಞಾನ ಬೇಕು.

ವಿಶ್ವದ 3 ದೇಶಗಳ ಬಳಿಮಾತ್ರ ಈ ತಂತ್ರಜ್ಞಾನ: ಸದ್ಯ ಸ್ಪೇಸ್‌ ಡಾಕಿಂಗ್‌ ತಂತ್ರಜ್ಞಾನವನ್ನು ಕೇವಲ ಅಮೆರಿಕ, ರಷ್ಯಾ, ಚೀನಾ ಹೊಂದಿವೆ. ಭಾರತ ಯಶಸ್ವಿಯಾದರೆ ವಿಶ್ವದ 4ನೇ ದೇಶವಾಗಲಿದೆ.

ಡಾಕಿಂಗ್‌ ಯಾವಾಗ?: ಇಂದು ಉಪಗ್ರಹ ಉಡಾವಣೆಯಾದರೂ ಡಾಕಿಂಗ್‌ ಕಸರತ್ತು ನಡೆಯುವುದು ಇನ್ನು ಕೆಲವೇ ದಿನಗಳಲ್ಲಿ. ಅಂದರೆ ಜನವರಿಯಲ್ಲಿ.