ಜ.15ರಂದು ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಮೂಲದ 12ಕ್ಕೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಗೆದ್ದವರು- ಬಂಟ್ವಾಳ ಸಜಿಪ ಮೂಲದ ಸಂತೋಷ್‌ ಜಿ. ಶೆಟ್ಟಿ ನವ ಪನ್ವೇಲ್‌ನಲ್ಲಿ ಗೆಲುವು- ಮೀರಾ ಭಯಂದರ್‌ಗೆ ಅವಿಭಜಿತ ದ.ಕ. ಗೋಪಾಲ್‌ ಶೆಟ್ಟಿ, ಅಕ್ಷತಾ ಶೆಟ್ಟಿ ಆಯ್ಕೆ- ನವಿ ಮುಂಬೈ ಪಾಲಿಕೆಗೆ ಉಡುಪಿಯ ಎರ್ಮಾಳುವಿನ ಸುರೇಶ್‌ ಗೋಪಾಲ್‌ ಶೆಟ್ಟಿ- ಅದೇ ಊರಿನ ಮಲ್ಲೇಶ ಶೆಟ್ಟಿ ಕಲ್ಯಾಣ ನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ- ಉಡುಪಿ ಕಟಪಾಡಿ ಮೂಲದ ಮೀನಾಕ್ಷಿ ರಾಜೇಂದ್ರ ಥಾಣೆ ನಗರ ಪಾಲಿಕೆಗೆ ಆಯ್ಕೆ- ಉಡುಪಿಯ ಮೂಡುಬೆಳ್ಳೆಯ ಸಂತೋಷ್‌, ರಾಜೇಶ್‌ ಶೆಟ್ಟಿ ಸೋದರರು ಭಿವಾಂಡಿಯಿಂದ ಗೆಲುವು

--ಮುಂಬೈ: ಜ.15ರಂದು ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಮೂಲದ 12ಕ್ಕೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಹುಟ್ಟೂರಿಂದ ದೂರದ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲೇ ಬದುಕು ಕಟ್ಟಿಕೊಂಡಿರುವ ಕನ್ನಡಿಗರು ಈ ಬಾರಿಯ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ, ಕಾಂಗ್ರೆಸ್‌ ಸೇರಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ನಾಲ್ಕನೇ ಬಾರಿ ಗೆಲುವು:

ನವ ಪನ್ವೇಲ್‌ ಮುನ್ಸಿಪಲ್‌ ಕಾರ್ಪೊರೇಷನ್‌ನ ಹಾಲಿ ಕಾರ್ಪೊರೇಟರ್‌, ಬಂಟ್ವಾಳದ ಸಜಿಪ ಮೂಲದ ಸಂತೋಷ್‌ ಜಿ.ಶೆಟ್ಟಿ ಅವರು ಬಿಜೆಪಿಯಿಂದ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಇನ್ನು ಮಿರಾ-ಭಯಂದರ್‌ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಗೋಪಾಲ್‌ ಶೆಟ್ಟಿ, ಅಕ್ಷತಾ ಶೆಟ್ಟಿ ಬಿಜೆಪಿಯಿಂದ ಸ್ಪರ್ಧಿಸಿ ವಿಜಯಪತಾಕೆ ಹಾರಿಸಿದ್ದಾರೆ.

ಅದೇ ರೀತಿ ನವಿ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎರ್ಮಾಳು ಮೂಲದ ಉದ್ಯಮಿ ಸುರೇಶ್‌ ಗೋಪಾಲ್‌ ಶೆಟ್ಟಿ ಅವರು 8,837 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಎರ್ಮಾಳ್‌ ಮೂಲದ ಮತ್ತೊಬ್ಬ ಉದ್ಯಮಿ ಮಲ್ಲೇಶ ಶಿವಣ್ಣ ಶೆಟ್ಟಿ ಅವರು ಕಲ್ಯಾಣ್‌ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ ಶಿವಸೇನೆ(ಏಕಾಂತ ಶಿಂಧೆ)ಯಿಂದ ಗೆದ್ದಿದ್ದಾರೆ.

ಥಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ನ ಮಾಜಿ ಮೇಯರ್‌ ಕೂಡ ಆಗಿರುವ ಮೀನಾಕ್ಷಿ ರಾಜೇಂದ್ರ ಶಿಂಧೆ(ಪೂಜಾರಿ) ಥಾಣೆ ಪಶ್ಚಿಮದಿಂದ ಶಿವಸೇನೆ(ಏಕಾಂತ ಶಿಂಧೆ) ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಇವರು ಮೂಲತಃ ಉಡುಪಿ ಜಿಲ್ಲೆ ಕಟಪಾಡಿ ಮೂಲದವರು. ಇದು ಅವರ ಪಾಲಿಗೆ ಸತತ ನಾಲ್ಕನೇ ಗೆಲುವಾಗಿದೆ.

ಸೋದರರ ಗೆಲುವು:

ಭಿವಂಡಿ-ನಿಝಾಂಪುರ ಸಿಟಿ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎನ್‌ಎಂಸಿ)ಗೆ ಸಂತೋಷ್‌ ಮಂಜಯ್ಯ ಶೆಟ್ಟಿ ಮತ್ತು ರಾಜೇಶ್‌ ಮಂಜಯ್ಯ ಶೆಟ್ಟಿ ಸೋದರರು ಅಕ್ಕಪಕ್ಕದ ವಾರ್ಡ್‌ಗಳಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಮೂಲತಃ ಉಡುಪಿಯ ಮೂಡುಬೆಳ್ಳೆ ಮೂಲದವರು.