ಕಳೆದ ಕೆಲವು ವರ್ಷಗಳ ಹಿಂದೆ ಟೀವಿ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದ್ದ ಐಕಾನಿಕ್ ಮ್ಯೂಸಿಕ್‌ ಚಾನೆಲ್ ಆದ ಎಂಟೀವಿ ತನ್ನ ಪ್ರಸಾರವನ್ನು ಡಿ.31ರಿಂದ ನಿಲ್ಲಿಸಿದೆ.

ಮನೆಮಾತಾಗಿದ್ದ ಸಂಗೀತ ಚಾನೆಲ್ ಪ್ರಸಾರ ಸ್ಥಗಿತನವದೆಹಲಿ: ಕಳೆದ ಕೆಲವು ವರ್ಷಗಳ ಹಿಂದೆ ಟೀವಿ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದ್ದ ಐಕಾನಿಕ್ ಮ್ಯೂಸಿಕ್‌ ಚಾನೆಲ್ ಆದ ಎಂಟೀವಿ ತನ್ನ ಪ್ರಸಾರವನ್ನು ಡಿ.31ರಿಂದ ನಿಲ್ಲಿಸಿದೆ.

ವಿವಿಧ ದೇಶಗಳಲ್ಲಿ ಪ್ರಸಾರ ಆಗುತ್ತಿದ್ದ ಎಂಟೀವಿ ಮ್ಯೂಸಿಕ್‌, ಎಂಟೀವಿ 80, ಎಂಟೀವಿ 90, ಕ್ಲಬ್ ಎಂಟೀವಿ ಮತ್ತು ಎಂಟೀವಿ ಲೈವ್‌ಗೆ ವಿದಾಯ ಹೇಳಲಾಗಿದೆ.

ಭಾರತ ಮಾತ್ರವಲ್ಲ, ಬ್ರಿಟನ್‌, ಐರ್ಲೆಂಡ್. ಫ್ರಾನ್ಸ್, ಪೋಲೆಂಡ್, ಆಸ್ಟ್ರೇಲಿಯಾ ಮತ್ತು ಬ್ರೆಜಿಲ್‌ನಂತಹ ಇತರ ದೇಶಗಳಲ್ಲಿ ಕೂಡ ಎಂಟೀವಿಯ ವಿವಿಧ ಸಂಗೀತ ಚಾನೆಲ್‌ನಳು ಪ್ರಸಾರವಾಗುತ್ತಿದ್ದವು. ಅವು ಎಲ್ಲ ಬಂದ್ ಆಗಿವೆ.

ಭಾರತದಲ್ಲಿ ಕೇಬಲ್‌ ಚಾನೆಲ್‌ಗಳು ಪರಿಚಯವಾದಾಗ 24 ತಾಸೂ ಸಿನಿಮಾ ಸಂಗೀತ ಪ್ರಸಾರ ಮಾಡುತ್ತಿದ್ದ ಎಂಟೀವಿ, ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಬಳಿಕ ‘ಎಂಟೀವಿ ರೋಡೀಸ್‌‘ ಹಾಗೂ ‘ಎಂಟೀವಿ ಬಕರಾ’ದಂಥ ಕಾರ್ಯಕ್ರಮಗಳು ಮನೆಮಾತಾಗಿದ್ದವು.

ಎಂಟೀವಿ 1981ರಲ್ಲಿ ಅಮೆರಿಕದಲ್ಲಿ ಆರಂಭವಾಗಿತ್ತು. ನಂತರ ವಿವಿಧ ದೇಶಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿತ್ತು.

==

ಫೆ.1ರಿಂದ ಎಲ್ಲಾ ಪಾನ್‌ ಮಸಾಲಾ ಉತ್ಪಾದಕರ ನೋಂದಣಿ ಕಡ್ಡಾಯ

ನವದೆಹಲಿ: ಫೆ.1ರಿಂದ ಜಾರಿಗೆ ಬರುತ್ತಿರುವ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾನೂನಿನ ಅಡಿಯಲ್ಲಿ ಎಲ್ಲಾ ಪಾನ್‌ ಮಸಾಲ ಉತ್ಪಾದಕರ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಒಂದಕ್ಕಿಂತ ಹೆಚ್ಚು ಕಾರ್ಖಾನೆ ಹೊಂದಿರುವವರು ಪ್ರತಿಯೊಂದು ಫ್ಯಾಕ್ಟರಿಯನ್ನೂ ಪ್ರತ್ಯೇಕವಾಗಿ ನೋಂದಾಯಿಸಬೇಕು ಹಾಗೂ ಇದಕ್ಕಾಗಿ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಯ ಯಾಂತ್ರೀಕರಣ(ಎಸಿಇಎಸ್‌) ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ನೋಂದಣಿಯಾದ 7 ದಿನಗಳ ಒಳಗಾಗಿ ಉದ್ಯಮಿಗಳು, ತಮ್ಮ ಯಂತ್ರೋಪಕರಣಗಳ ಗರಿಷ್ಠ ವೇಗ, ತೂಕದಂತಹ ವಿವರಣೆಗಳುಳ್ಳ ಘೋಷಣೆಯನ್ನು ಸಲ್ಲಿಸಬೇಕು. ಅದಾದ 90 ದಿನಗಳಲ್ಲಿ ತೆರಿಗೆ ಅಧಿಕಾರಿಗಳು ಕಾರ್ಖಾನೆಗೆ ತೆರಳಿ ಯಂತ್ರಗಳ ಪರಿಶೀಲನೆ ನಡೆಸುತ್ತಾರೆ. ಒಂದೊಮ್ಮೆ ಅರ್ಜಿ ಸಲ್ಲಿಸಿದ 7 ಕೆಲಸದ ದಿನಗಳೊಳಗಾಗಿ ತೆರಿಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ, ಅದು ಅನುಮೋದನೆಗೊಂಡಿದೆ ಎಂದೇ ಪರಿಗಣಿಸಲಾಗುವುದು.

==

ಎಚ್‌-1ಬಿ ಕಗ್ಗಂಟು: ವರ್ಕ್‌ಫ್ರಂ ಹೋಂಗೆ ಅಮೆಜಾನ್‌ ಅವಕಾಶ

ನವದೆಹಲಿ: ಭಾರತದಲ್ಲಿ ಎಚ್‌-1ಬಿ ವೀಸಾ ಸಿಗದೆ ಕಾಯುತ್ತಿರುವ ತನ್ನ ಉದ್ಯೋಗಿಗಳಿಗೆ ಅಮೆಜಾನ್‌ ಕಂಪನಿಯು ಸಿಹಿ ಸುದ್ದಿ ನೀಡಿದೆ. ವೀಸಾ ಸಂದರ್ಶನ ಮುಂದೂಡಿಕೆಯಾಗಿದ್ದರಿಂದ ಮಾ.3ರ ತನಕ ಭಾರತದಿಂದಲೇ ವರ್ಕ್‌ಫ್ರಂ ಹೋಂ ಮಾಡುವಂತೆ ಅಮೆಜಾನ್‌ ತನ್ನ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ತನ್ನ ಕಟ್ಟುನಿಟ್ಟಾದ ಕಚೇರಿ ಹಾಜರಿ ನೀತಿಯನ್ನು ಕೊಂಚ ಸಡಿಲಿಸಿದೆ.ಅಮೆರಿಕದ ಡೊನಾಲ್ಡ್‌ ಟ್ರಂಪ್ ಸರ್ಕಾರವು ಎಚ್‌1ಬಿ ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣ ಪರಿಶೀಲನೆಗಾಗಿ ವೀಸಾ ಸಂದರ್ಶನವನ್ನು ಮುಂದೂಡಿತ್ತು. ಹೀಗಾಗಿ ಸಾವಿರಾರು ಭಾರತೀಯರು ಅತಂತ್ರತೆಗೆ ಸಿಲುಕಿದ್ದರು.

==

₹500 ಮುಖಬೆಲೆ ನೋಟು ಮಾರ್ಚ್‌ನಿಂದ ರದ್ದು ಎಂಬುದು ಸುಳ್ಳು: ಸರ್ಕಾರ ಸ್ಪಷ್ಟನೆ

ನವದೆಹಲಿ: ಮಾರ್ಚ್‌ನಿಂದ 500 ಮುಖಬೆಲೆಯ ನೋಟುಗಳು ಅಮಾನ್ಯವಾಗಲಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ‘ಸುಳ್ಳು’ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.‘500 ಮುಖಬೆಲೆಯ ನೋಟುಗಳು ಮಾರ್ಚ್‌ನಿಂದ ಎಟಿಎಂನಲ್ಲಿ ಸಿಗುವುದಿಲ್ಲ. ಅವುಗಳನ್ನು ಹಿಂಪಡೆಯಲಾಗುತ್ತಿದೆ ಎಂದೆಲ್ಲಾ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ಆರ್‌ಬಿಐ ಇಂತಹ ಯಾವುದೇ ಘೋಷಣೆ ಮಾಡಿಲ್ಲ. ಹಾಗಾಗಿ ಆ ನೋಟುಗಳು ಕಾನೂನು ಪ್ರಕಾರ ಚಲಾವಣೆಯಲ್ಲಿ ಇರಲಿವೆ’ ಎಂದು ಪಿಬಿಐ ಹೇಳಿದೆ. ಜತೆಗೆ, ‘ಇಂತಹ ಸುದ್ದಿಗಳನ್ನು ನಂಬುವ ಮುನ್ನ ಅಧಿಕೃತ ಮೂಲಗಳನ್ನು ಪರಿಶೀಲಿಸಿ’ ಎಂದು ಸಾರ್ವಜನಿಕರಿಗೆ ಎಚ್ಚರಿಕೆಯನ್ನೂ ನೀಡಿದೆ.ಈ ಹಿಂದೆ ಸುಮಾರು ಬಾರಿ ಇಂತಹ ಸುದ್ದಿ ಹರಿದಾಡಿದ್ದವು ಹಾಗೂ ಅದನ್ನು ಆರ್‌ಬಿಐ ತಳ್ಳಿಹಾಕಿತ್ತು.