ಐಎಎಸ್‌ಗಳ ಖಾಸಗೀಕರಣ ಮೋದಿ ಗ್ಯಾರಂಟಿ : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿ

| Published : Aug 19 2024, 12:52 AM IST / Updated: Aug 19 2024, 04:46 AM IST

ಸಾರಾಂಶ

‘ಕೇಂದ್ರ ಸರ್ಕಾರವು ನಾಗರಿಕ ಸೇವೆಗಳಿಗೆ ಖಾಸಗಿ ವಲಯದ ವ್ಯಕ್ತಿಗಳನ್ನು ನೇರವಾಗಿ ನೇಮಿಸಿಕೊಳ್ಳುವುದಕ್ಕೆ ಮುಂದಾಗಿರುವುದು ದೇಶ ವಿರೋಧಿ ಹೆಜ್ಜೆಯಾಗಿದೆ. ಮೀಸಲಾತಿಗಳನ್ನು ಕಸಿಯಲು ಐಎಎಸ್‌ಗಳ ಖಾಸಗೀಕರಣ ಮೋದಿ ಗ್ಯಾರಂಟಿ’ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ನವದೆಹಲಿ: ‘ಕೇಂದ್ರ ಸರ್ಕಾರವು ನಾಗರಿಕ ಸೇವೆಗಳಿಗೆ ಖಾಸಗಿ ವಲಯದ ವ್ಯಕ್ತಿಗಳನ್ನು ನೇರವಾಗಿ ನೇಮಿಸಿಕೊಳ್ಳುವುದಕ್ಕೆ ಮುಂದಾಗಿರುವುದು ದೇಶ ವಿರೋಧಿ ಹೆಜ್ಜೆಯಾಗಿದೆ. ಮೀಸಲಾತಿಗಳನ್ನು ಕಸಿಯಲು ಐಎಎಸ್‌ಗಳ ಖಾಸಗೀಕರಣ ಮೋದಿ ಗ್ಯಾರಂಟಿ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರದ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರರು ಸೇರಿದಂತೆ 45 ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

ಎಕ್ಸ್‌ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿರುವ ರಾಹುಲ್, ‘ಲ್ಯಾಟರಲ್ ಎಂಟ್ರಿ ಮೂಲಕ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ನೇಮಕಾತಿಯನ್ನು ಕೇಂದ್ರ ಸರ್ಕಾರ ನೇರವಾಗಿ ಕಸಿಯಲು ಪ್ರಯತ್ನಿಸಿದೆ. ಅವಕಾಶ ವಂಚಿತರನ್ನು ದೇಶದ ಉನ್ನತ ಹುದ್ದೆಗಳಿಂದ ಮತ್ತಷ್ಟು ದೂರ ತಳ್ಳಲಾಗುತ್ತಿದೆ. ಇದು ಯುಪಿಎಸ್ಸಿ ಪರೀಕ್ಷೆಗೆ ತಯಾರಾದ ದೇಶದ ಪ್ರತಿಭಾವಂತ ಯುವಕರ ಹಕ್ಕುಗಳ ಕಳ್ಳತನ ಮತ್ತು ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯಗಳನ್ನು ಕಸಿತಯುವ ಪ್ರಯತ್ನ. ಮೀಸಲಾತಿ ಅಂತ್ಯಗೊಳಿಸಲು ಐಎಎಸ್‌ಗಳ ಖಾಸಗೀಕರಣ ಮೋದಿಯ ಗ್ಯಾರಂಟಿ’ ಎಂದಿದ್ದಾರೆ.

ಜೊತೆಗೆ‘ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಲೋಕಸೇವಾ ಆಯೋಗದ ಬದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಮೂಲಕ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.