ಸಾರಾಂಶ
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರ್ನಾಟಕ ಸೇರಿದಂತೆ ದಕ್ಷಿಣದ ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ.ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಪುನಾರಚನೆ ನಡೆದಿದ್ದು, ಉತ್ತರ ಪ್ರದೇಶದ ಉಸ್ತುವಾರಿಯಿಂದ ಪ್ರಿಯಾಂಕಾ ಅವರನ್ನು ಕೈಬಿಡಲಾಗಿದೆ. ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ಇದನ್ನು ‘ಪ್ರಿಯಾಂಕಾಗೆ ಹಿಂಬಡ್ತಿ’ ಎಂದಿದ್ದರೂ ಕಾಂಗ್ರೆಸ್‌ನ ಅಸಲಿ ಲೆಕ್ಕಾಚಾರವೇ ಬೇರೆ. ಪ್ರಿಯಾಂಕಾರನ್ನು ಮೊದಲ ಬಾರಿ ಲೋಕಸಭೆ ಚುನಾವಣೆಗೆ ತಯಾರಿ ಮಾಡಲು ಅವರನ್ನು ಹೊಣೆಗಾರಿಕೆಯಿಂದ ಮುಕ್ತ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ದಕ್ಷಿಣವೇ ಏಕೆ?:ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಸರಿಯಿಲ್ಲ. ಈ ಹಿಂದೆ ಗಾಂಧಿ ಕುಟುಂಬದ ಭದ್ರಕೋಟೆ ಆಗಿದ್ದ ಅಮೇಠಿ ಹಾಗೂ ರಾಯ್‌ಬರೇಲಿ ಈಗ ಸುರಕ್ಷಿತ ಕ್ಷೇತ್ರವಾಗಿ ಉಳಿದಿಲ್ಲ. ಇನ್ನು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾರನ್ನು ಕಣಕ್ಕಿಳಿಸಬೇಕು ಎಂಬ ಆಗ್ರಹ ಇದೆಯಾದರೂ, ಅವರ ಮೊದಲ ಚುನಾವಣೆಯಲ್ಲೇ ಇಂಥ ರಿಸ್ಕ್ ತೆಗೆದುಕೊಳ್ಳಲು ಪಕ್ಷದ ಮುಖಂಡರಿಗೆ ಇಷ್ಟವಿಲ್ಲ.ಹೀಗಾಗಿ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಅಥವಾ ತೆಲಂಗಾಣದ ಯಾವುದಾದರೂ ಸುರಕ್ಷಿತ ಕ್ಷೇತ್ರದಿಂದ ಕಣಕ್ಕಿಳಿಸಿ ಲೋಕಸಭೆಗೆ ಪದಾರ್ಪಣೆ ಮಾಡಿಸುವುದು ಕಾಂಗ್ರೆಸ್ ಉದ್ದೇಶ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಆದರೆ ಪ್ರಿಯಾಂಕಾ ಸೋದರ ರಾಹುಲ್ ಗಾಂಧಿ ಕೂಡ ದಕ್ಷಿಣ ಭಾರತದ (ಕೇರಳ) ಸಂಸದ. ಸೋದರ-ಸೋದರಿ ಒಂದೇ ಭಾಗ ಪ್ರತಿನಿಧಿಸಿದರೆ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಉತ್ತರ ಭಾರತದ ಕ್ಷೇತ್ರವೇ ಒಳಿತು ಎಂಬ ಮಾತೂ ಕಾಂಗ್ರೆಸ್‌ನಲ್ಲಿದೆ.