‘ಪುಷ್ಪ-2’ ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವು : ನಟ ಅಲ್ಲು ಅರ್ಜುನ್‌ ಸೆರೆ, ಬೇಲ್‌

| Published : Dec 14 2024, 12:46 AM IST / Updated: Dec 14 2024, 04:53 AM IST

‘ಪುಷ್ಪ-2’ ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವು : ನಟ ಅಲ್ಲು ಅರ್ಜುನ್‌ ಸೆರೆ, ಬೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

 ನಟ ಅಲ್ಲು ಅರ್ಜುನ್‌ ಅವರನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದು   ಸಂಜೆ ವೇಳೆಗೆ ಅವರಿಗೆ ತೆಲಂಗಾಣ ಹೈಕೋರ್ಟ್‌ ಶುಕ್ರವಾರ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಬಿಡುಗಡೆ ಹೊಂದಿದ್ದಾರೆ.  

 ಹೈದರಾಬಾದ್‌ : ‘ಪುಷ್ಪ-2’ ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲಿನಿಂದ ಮಹಿಳೆಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣ ಭಾರಿ ಹೈಡ್ರಾಮಾಗೆ ಕಾರಣವಾಗಿದೆ. ಈ ಸಂಬಂಧ ಖ್ಯಾತ ತೆಲುಗು ನಟ ಅಲ್ಲು ಅರ್ಜುನ್‌ ಅವರನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದರು. ಆದರೆ ಸಂಜೆ ವೇಳೆಗೆ ಅವರಿಗೆ ತೆಲಂಗಾಣ ಹೈಕೋರ್ಟ್‌ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 

ಆದಾಗ್ಯೂ ಜೈಲಿಗೆ ಜಾಮೀನು ಆದೇಶ ತಲುಪದ ಕಾರಣ ಅವರು ರಾತ್ರಿ ಜೈಲಲ್ಲೇ ಉಳಿಯುವಂತಾಗಿದೆ. ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 105 ಹಾಗೂ 118(1)ರ ಅಡಿಯಲ್ಲಿ ನಟ, ಆವರ ಭದ್ರತಾ ತಂಡ ಹಾಗೂ ಥೇಟರ್‌ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ಅವರನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬಂಧಿಸಿದ್ದರು. 

ಜತೆಗೆ ಇಬ್ಬರು ಥೇಟರ್ ಮಾಲೀಕರನ್ನೂ ಬಂಧಿಸಲಾಗಿತ್ತು. ನಂತರ ಸ್ಥಳೀಯ ನಾಂಪಲ್ಲಿ ನ್ಯಾಯಾಲಯ ಮಧ್ಯಾಹ್ನದ ವೇಳೆಗೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಅವರನ್ನು ಒಪ್ಪಿಸಿತ್ತು. ಆದರೆ ಇದರ ವಿರುದ್ಧ ಅಲ್ಲು ಅರ್ಜುನ್‌ ಮತ್ತು ಥೇಟರ್ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು ಹಾಗೂ ಜಾಮೀನು ಕೋರಿದ್ದರು. ಆಗ ಕೋರ್ಟು, ‘ಕೇವಲ ಪ್ರೀಮಿಯರ್‌ ನೋಡಲು ಹೋದರೆಂಬ ಕಾರಣಕ್ಕೆ ಅವರು ಕಾಲ್ತುಳಿತಕ್ಕೆ ಕಾರಣ ಎನ್ನಲಾಗದು. ನಟನಿಗೂ ಬದುಕುವ ಹಕ್ಕಿದೆ. ನಟನೆಂಬ ಮಾತ್ರಕ್ಕೆ ಅವರನ್ನು ಬಂಧಿಸಿದ್ದು ಸರಿಯಲ್ಲ’ ಎಂದು ಹೇಳಿ ಜಾಮೀನು ನೀಡಿದೆ.

ಬಂಧನದ ಬಗ್ಗೆ ವಾಕ್ಸಮರ:ಅರ್ಜುನ್‌ ಬಂಧನ ಪ್ರಕರಣ ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್‌ ವಿರೋಧಿ ಪಕ್ಷಗಳು, ಚಿತ್ರರಂಗದ ಗಣ್ಯರು ಈ ಬಂಧನ ವಿರೋಧಿಸಿದ್ದರು. ಸಿಎಂ ರೇವಂತ ರೆಡ್ಡಿ ವಿರುದ್ಧ ಕಿಡಿಕಾರಿದ್ದ ಅವರು, ‘ಸಾವಿಗೆ ಅರ್ಜುನ್‌ ಒಬ್ಬರನ್ನೇ ಹೊಣೆ ಮಾಡುವುದು ಸಲ್ಲದು’ ಎಂದು ವಾದಿಸಿದ್ದರು.

ಬಳಿಕ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಪೊಲೀಸರು, ‘ಸಿನಿಮಾದ ಪ್ರೀಮಿಯರ್‌ ಪ್ರದರ್ಶನಕ್ಕೆ ಚಿತ್ರದ ತಾರಾಗಣ ಬರುವ ಬಗ್ಗೆ ನಟ ಅಥವಾ ಥೇಟರ್‌ನವರು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಅಲ್ಲದೆ ಜನಜಂಗುಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ನಟರ ಆಗಮನ ನಿರ್ಗಮನಕ್ಕೂ ಪ್ರತ್ಯೇಕ ದ್ವಾರದ ವ್ಯವಸ್ಥೆ ಇರಲಿಲ್ಲ. ಇದರಿಂದ ಕಾಲ್ತುಳಿತ ಸಂಭವಿಸಿತ್ತು. ಇದಕ್ಕೆ ಚಿತ್ರತಂಡ, ಥೇಟರ್‌ನವರೇ ಹೊಣೆ’ ಎಂದು ಹೇಳಿದ್ದರು. ಆದರೆ ಅಲ್ಲು ಆಗಮನದ ಬಗ್ಗ ಥೇಟರ್ ವತಿಯಿಂದ ಪೊಲೀಸರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಥೇಟರ್‌ ವಾದಿಸಿತ್ತು.

ಸಿಎಂ ರೇವಂತ ರೆಡ್ಡಿ ಕೂಡ ಪ್ರತಿಕ್ರಿಯಿಸಿ, ‘ಈ ಕೇಸಿನಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರ ಹಸ್ತಕ್ಷೇಪವೂ ಇಲ್ಲ. ಈ ಹಿಂದೆ ಸಲ್ಮಾನ್‌ ಖಾನ್‌, ಸಂಜಯ ದತ್ ಬಂಧನ ಆಗಿರಲಿಲ್ಲವೇ? ಅನುಮತಿ ಇಲ್ಲದೇ ಅಲ್ಲು ಬಂದಿದ್ದರಿಂದ 1 ಸಾವಾಗಿದೆ. ಅನೇಕರಿಗೆ ತೊಂದರೆಯಾಗಿದೆ. ಅದಕ್ಕೆ ಕೇಸು ದಾಖಲಿಸಲೇಬಾರದೇ?’ ಎಂದಿದ್ದರು.

ಜಾಮೀನು ನೀಡಿದ ಹೈಕೋರ್ಟ್‌:

ಇದೆಲ್ಲದರ ಬಳಿಕ ಸಂಜೆ 5.30ಕ್ಕೆ ಜಾಮೀನು ಆದೇಶ ಹೊರಡಿಸಿದ ತೆಲಂಗಾಣ ಹೈಕೋರ್ಟ್‌, ‘ಅಲ್ಲುಗೆ ಮಧ್ಯಂತರ ಜಾಮೀನು ನೀಡಬೇಕು.ಕೇವಲ ಪ್ರೀಮಿಯರ್‌ ನೋಡಲು ಹೋದರೆಂಬ ಕಾರಣಕ್ಕೆ ಅವರು ಕಾಲ್ತುಳಿತಕ್ಕೆ ಕಾರಣ ಎನ್ನಲಾಗದು’ ಎಂದು ಹೇಳಿ 4 ವಾರ ಕಾಲ ವಿಚಾರಣೆ ಮುಂದೂಡಿದೆ. ಜತೆಗೆ ಇಬ್ಬರು ಥೇಟರ್ ಮಾಲೀಕರಿಗೂ ಜಾಮೀನು ನೀಡಿದ್ದು, ಅಲ್ಲಿಯವರೆಗೆ ಪೊಲೀಸರಿಗೆ ತನಿಖೆ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ ಹಾಗೂ ವಿಚಾರಣೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ನಿರ್ದೇಶಿಸಿದೆ.ಜೈಲಲ್ಲೇ ಅಲ್ಲು ಮೊದಲ ರಾತ್ರಿ:ಆದರೆ ಜಾಮೀನು ಆದೇಶ ಪ್ರತಿ ಶುಕ್ರವಾರ ಸಂಜೆ 5ಕ್ಕೆ ತಲುಪದ ಕಾರಣ ಅಲ್ಲು ಚಂಚಲ್‌ಗುಡ ಜೈಲ್ಲೇ ಉಳಿಯುವಂತಾಗಿದೆ. ಶನಿವಾರ ಆದೇಶ ಪ್ರತಿ ತಲುಪಿದರೆ ಬಿಡುಗಡೆ ಹೊಂದುವ ನಿರೀಕ್ಷೆಯಿದೆ.

ಏನಿದು ಪ್ರಕರಣ?:

ಡಿ.4ರ ರಾತ್ರಿ ಹೈದರಾಬಾದ್‌ನ ‘ಸಂಧ್ಯಾ 70ಎಂಎಂ’ ಥೇಟರ್‌ನಲ್ಲಿ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ಏರ್ಪಡಿಸಲಾಗಿತ್ತು. ಆಗ ನಟ ಅಲ್ಲು ಅರ್ಜುನ್‌ ಅಲ್ಲಿಗೆ ಆಗಮಿಸಿದ್ದು, ಅವರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಮಗ ಉಸಿರುಗಟ್ಟಿ, ಪ್ರಜ್ಞಾಹೀನರಾದರು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ನಟನ ವಿರುದ್ಧ ಮಹಿಳೆ ಕುಟುಂಬದವರು ದೂರು ದಾಖಲಿಸಿದ್ದರು. ಘಟನೆ ಬಳಿಕ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಿದ್ದರು.

--ಅಲ್ಲು ಮೇಲೆ ಆರೋಪವೇನು?ಸಾಕಷ್ಟು ಜನಜಂಗುಳಿ ಸೇರಿದಾಗ ಪೊಲೀಸರಿಗೆ ಹಾಗೂ ಸಂಬಂಧಿಸಿದವರಿಗೆ ಮುನ್ಸೂಚನೆ ನೀಡದೇ ಥೇಟರ್‌ಗೆ ಅಲ್ಲು ಬಂದರು. ಇದರಿಂದಾಗಿಯೇ ನೂಕುನುಗ್ಗಲು ಏರ್ಪಟ್ಟು ಮಹಿಳೆಯ ಸಾವು ಸಂಭವಿಸಿತು. ಈ ಘಟನೆಗೆ ಅಲ್ಲು ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಬಂಧುಗಳು ದೂರಿದ್ದರು. ಅದರಂತೆ ಅಲ್ಲು ಹಾಗೂ ಥೇಟರ್‌ ವಿರುದ್ಧ ‘ಉದ್ದೇಶಪೂರ್ವಕವಲ್ಲದ ಕೊಲೆ’ ಕೇಸು ದಾಖಲಿಸಲಾಗಿತ್ತು.