ಸಾರಾಂಶ
ಪಿಟಿಐ ಮುಂಬೈ
ರಾಜಕಾರಣಿಗಳು ಮತ್ತು ಕಾರ್ಪೊರೇಟ್ ನಾಯಕರು ಸೇರಿದಂತೆ ದೇಶದ ವಿವಿಧ ಸ್ತರಗಳ ಸಾವಿರಾರು ಜನರು ಗುರುವಾರ ಮುಂಬೈನ ಎನ್‌ಸಿಪಿಎ, ಅವರ ನಿವಾಸ ಹಾಗೂ ವರ್ಲಿ ಚಿತಾಗಾರದಲ್ಲಿ ಜಮಾಯಿಸಿ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.ಬುಧವಾರ ರಾತ್ರಿ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದ ರತನ್ ಟಾಟಾ ಅವರ ದೇಹವನ್ನು ನಸುಕಿನಲ್ಲಿ ಅವರ ಕೊಲಾಬಾದಲ್ಲಿನ ನಿವಾಸಕ್ಕೆ ತರಲಾಗಿತ್ತು. ಅಲ್ಲಿ ಮನೆಯವರು ಮೊದಲು ಅಂತಿಮ ಗೌರವ ಸಲ್ಲಿಸಿದರು. ಈ ವೇಳೆ ನಸುಕಿನಲ್ಲೇ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಆಗಮಿಸಿ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.
ಬಳಿಕ ಮನೆಯಿಂದ ಬಿಳಿ ಹೂವುಗಳಿಂದ ಅಲಂಕರಿಸಿದ ಚಿಕ್ಕ ಶವವಾಹನದಲ್ಲಿ ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್‌ಸಿಪಿಎ) ಗೆ ತರಲಾಯಿತು. ಟಾಟಾ ಅವರ ಪಾರ್ಥಿವ ಶರೀರವನ್ನು ಹೊತ್ತ ಶವ ವಾಹನವು ಮನೆಯಿಂದ ಎನ್‌ಸಿಪಿಎಗೆ ಸಾಗುವ ಮುನ್ನ ಮುಂಬೈ ಪೊಲೀಸ್ ಬ್ಯಾಂಡ್, ಅವರಿಗೆ ಗೌರವಾರ್ಥವಾಗಿ ರಾಗ ನುಡಿಸಿತು.ಎನ್‌ಸಿಪಿಎಯಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಎನ್‌ಸಿಪಿಎಯಲ್ಲಿ ತ್ರಿವರ್ಣ ಧ್ವಜವನ್ನು ಆವರಿಸಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಭಾರತ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಪೀಯೂಶ್ ಗೋಯಲ್, ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್, ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಉದ್ಯಮಿ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ, ಹಣಕಾಸು ಉದ್ಯಮದ ದಿಗ್ಗಜ ದೀಪಕ್ ಪರೇಖ್ ಮತ್ತು ರಿಸರ್ವ್ ಬ್ಯಾಂಕ್ ಆಫ್. ಭಾರತದ ಗವರ್ನರ್ ಶಕ್ತಿಕಾಂತ ದಾಸ್- ಮೊದಲಾದವರು ಅಂತಿಮ ದರ್ಶನ ಪಡೆದರು.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್, ವಿಧಾನಸಭಾ ಸ್ಪೀಕರ್ ಮತ್ತು ಸ್ಥಳೀಯ ಶಾಸಕ ರಾಹುಲ್ ನಾರ್ವೇಕರ್, ಟಾಟಾ ಸಮೂಹದ ಉದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳು, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ವಿಶೇಷ ಆಯುಕ್ತ ದೇವೆನ್ ಭಾರತಿ ಮತ್ತು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ ಚೌಧರಿ ಸೇರಿದಂತೆ ಉನ್ನತ ಅಧಿಕಾರಿಗಳು ಎನ್‌ಸಿಪಿಎ ಲಾನ್‌ಗಳಲ್ಲಿ ಟಾಟಾಗೆ ಗೌರವ ಸಲ್ಲಿಸಿದರು.ಟಾಟಾ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಎನ್‌ಸಿಪಿಎಗೆ ತರುವುದಕ್ಕೆ ಮುಂಚೆಯೇ, ಟಾಟಾ ಅವರ ಬಗ್ಗೆ ತಮ್ಮ ಹೃದಯದಲ್ಲಿ ಅಪಾರ ಗೌರವ ಇರಿಸಿಕೊಂಡಿದ್ದ ಜನರು ಅಂತಿಮ ನೋಟವನ್ನು ಪಡೆಯಲು ಜನರು ಸರದಿಯಲ್ಲಿ ತಾಳ್ಮೆಯಿಂದ ಕಾಯುತ್ತಿದ್ದರು. ಅವರು ಕೂಡ ಪಾರ್ಥಿವ ಶರೀರ ಬರುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಅಂತಿಮ ದರ್ಶನ ಪಡೆದರು.
ಇದಾದ ನಂತರ ಕೊನೆಗೆ ಟಾಟಾ ಅವರ ಪಾರ್ಥಿವ ಶರೀರವನ್ನು ವರ್ಲಿ ಚಿತಾಗಾರದಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ಕೊಂಡೊಯ್ಯಲಾಯಿತು ಹಾಗೂ ಅಂತಿಮ ವಿಧಿ ವಿಧಾನಗಳನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ನಟ ಅಮೀರ್ ಖಾನ್ ಸೇರಿ ಅನೇಕರು ಉಪಸ್ಥಿತರಿದ್ದರು.ಭಾರಿ ಭದ್ರತೆ:
ಟಾಟಾ ಶವ ಹೊತ್ತು ಸಾಗುವ ಮಾರ್ಗದಲ್ಲಿ ಹಾಗೂ ಅಂತಿಮ ದರ್ಶನ ಸ್ಥಳಗಳಲ್ಲಿ ಭಾರಿ ಜನಸಂದಣಿ ಇದ್ದ ಕಾರಣ ಮುಂಬೈ ಪೊಲೀಸರು ಭದ್ರತಾ ವ್ಯವಸ್ಥೆ ಮಾಡಿದ್ದರು ಮತ್ತು ನಾರಿಮನ್ ಪಾಯಿಂಟ್‌ನ ಭಾಗಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದರು.ಇದಕ್ಕೂ ಮುನ್ನ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಟಾಟಾ ಕೊನೆಯುಸಿರು ಎಳೆದ ಸುದ್ದಿ ಕೇಳುತ್ತಿದ್ದಂತೆಯೇ ಆಸ್ಪತ್ರೆಗೆ ಸಿಎಂ ಶಿಂಧೆ, ಡಿಸಿಎಂ ಫಡ್ನವಿಸ್, ಮಹಾರಾಷ್ಟ್ರದ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಆಗಮಿಸಿ ಆಸ್ಪತ್ರೆಯಲ್ಲೇ ಟಾಟಾಗೆ ಗೌರವ ಸಲ್ಲಿಸಿದರು. ಟಾಟಾ ನಿವಾಸದ ಮುಂದೆ ಕೂಡ ಶ್ರದ್ಧಾಂಜಲಿ ಸಲ್ಲಿಸಲು ಬೆಳಗ್ಗೆಯಿಂದಲೇ ಅವರ ಮನೆಯ ಹೊರಗೆ ಹಲವಾರು ಮಂದಿ ಜಮಾಯಿಸಿದ್ದರು.
1 ದಿನದ ಶೋಕಾಚರಣೆ:ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಗುರುವಾರ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿತ್ತು. ಇದರ ಸಂಕೇತವಾಗಿ ಗುರುವಾರ ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿತ್ತು.