ಸಾರಾಂಶ
ಮುಂಬೈ: ಟಾಟಾ ಗ್ರೂಪ್ ಕಂಪನಿಗಳ ಷೇರುಗಳು ಗುರುವಾರ ಏರಿಕೆ ಕಂಡಿವೆ. ಇದರಲ್ಲಿ ಟಾಟಾ ಕೆಮಿಕಲ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಟಾಪ್ ಸಾಧಕ ಕಂಪನಿಗಳಾಗಿ ಹೊರಹೊಮ್ಮಿವೆ ಹಾಗೂ ಶೇ.10ರಷ್ಟು ಏರಿಕೆಯಾಗಿದೆ. ಟಾಟಾ ಗ್ರೂಪ್ ಅನ್ನು ಜಾಗತಿಕ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉದ್ಯಮಿ ರತನ್ ಟಾಟಾ ಅವರು ಬುಧವಾರ ತಡರಾತ್ರಿ ನಿಧನರಾದರು. ಇದರಿಂದ ಭಾವುಕರಾಗಿದ್ದ ಹೂಡಿಕೆದಾರರು ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಟಾಟಾ ಸಮೂಹದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು. ಹೀಗಾಗಿ ಷೇರುಗಳು ಏರಿಕೆ ಆದವು ಎಂದು ತಜ್ಞರು ಹೇಳಿದ್ದಾರೆ.ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ನಲ್ಲಿ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳು ಶೇ.10.47ರಷ್ಟು ಏರಿಕೆಯಾಗಿ 7,235.80 ರು.ಗೆ ತಲುಪಿವೆ. ಟಾಟಾ ಕೆಮಿಕಲ್ಸ್ ಶೇ.6.26ರಷ್ಟು ಏರಿಕೆಯಾಗಿ 1,174.85 ರು,ಗೆ ತಲುಪಿವೆ. ಟಾಟಾ ಟೆಲಿಸರ್ವೀಸಸ್ ಶೇ.5.84ರಷ್ಟು ಏರಿಕೆ ಕಂಡು 83.77 ರು.ಗೆ, ಮತ್ತು ಟಾಟಾ ಪವರ್ ಶೇ. 2.56 ರಷ್ಟು ಏರಿಕೆಯಾಗಿ 472.70 ರು.ಗೆ ಏರಿವೆ.