ಶ್ವಾನ ಪ್ರಿಯರಾದ ರತನ್‌ ಟಾಟಾ - ತಾಜ್‌ ಹೋಟೆಲ್‌ಗಳಿಗೆ ಬೀದಿ ನಾಯಿಗಳಿಗೂ ಪ್ರವೇಶ

| Published : Oct 11 2024, 10:08 AM IST / Updated: Oct 11 2024, 10:09 AM IST

TATA

ಸಾರಾಂಶ

ರತನ್‌ ಟಾಟಾ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಶ್ವಾನಪ್ರಿಯರಾದ ಟಾಟಾ ಅವರು ತಮ್ಮ ಬಳಿ ಇದ್ದ 3-4 ನಾಯಿಗಳೊಂದಿಗೆ ಸುತ್ತಾಡುವುದು, ಪ್ರವಾಸ ಹೋಗುವುದನ್ನು ಮಾಡುತ್ತಿದ್ದರು.

ರತನ್‌ ಟಾಟಾ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಶ್ವಾನಪ್ರಿಯರಾದ ಟಾಟಾ ಅವರು ತಮ್ಮ ಬಳಿ ಇದ್ದ 3-4 ನಾಯಿಗಳೊಂದಿಗೆ ಸುತ್ತಾಡುವುದು, ಪ್ರವಾಸ ಹೋಗುವುದನ್ನು ಮಾಡುತ್ತಿದ್ದರು. ಅಂತಹ ರತನ್‌ ಟಾಟಾ ಅವರು ತಮ್ಮ ಟಾಟಾ ಸಮೂಹ ತಾಜ್‌ ಗ್ರೂಪ್‌ ಹೋಟೆಲ್‌ಗಳಿಗೆ ಬೀದಿ ನಾಯಿಗಳನ್ನು ಪ್ರವೇಶಿಸಲು ಅನುಮತಿಸಿದ್ದರು. ಪ್ರಮುಖವಾಗಿ ಭಾರತದಾದ್ಯಂತ ಈ ಐಷಾರಾಮಿ ತಾಜ್‌ ಹೋಟೆಲ್‌ಗಳು ಇದ್ದು, ಹೋಟೆಲ್‌ನ ಆವರಣದಲ್ಲಿ ಬೀದಿ ನಾಯಿಗಳೇನಾದರೂ ಬಂದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೋಟೆಲ್‌ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದರು.

ಅಸ್ವಸ್ಥ ಮಾಜಿ ಉದ್ಯೋಗಿ ಭೇಟಿಯಾಗಿ ಸಾಂತ್ವನ

ಟಾಟಾ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಷಯ ಒಮ್ಮೆ ರತನ್‌ ಅವರ ಕಿವಿಗೆ ಬಿದ್ದಿತ್ತು. ಕೂಡಲೇ ಮುಂಬೈನಿಂದ ಪುಣೆಯ ಉದ್ಯೋಗಿ ಮನೆಗೆ ತೆರಳಿದ ರನತ್‌ ಟಾಟಾ ಮಾಜಿ ಉದ್ಯೋಗಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅವರ ಸರಳತೆ ಕಂಡು ಮಾಜಿ ಉದ್ಯೋಗಿಯ ಕುಟುಂಬ ಅಚ್ಚರಿಪಟ್ಟಿತ್ತು.

ಮುಂಬೈ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳ ಭೇಟಿ

ಮುಂಬೈನ 2008 ನ.26 ರಂದು ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳನ್ನು ರತನ್‌ ಟಾಟಾ ಅವರು ಖುದ್ದಾಗಿ ಭೇಟಿ ನೀಡಿ, ಸಂತಾಪ ಸೂಚಿಸಿದ್ದರು.

ಕೋವಿಡ್‌ ವೇಳೆ ಸಿಬ್ಬಂದಿ ಉಳಿಸಲು 500 ಕೋಟಿ ರು.

ಕೋವಿಡ್‌-19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಲ್ಲಾ ಕಂಪನಿಗಳು ತಮ್ಮ ಸಿಬ್ಬಂದಿಯಿಂದ ತೆಗೆದುಹಾಕುವ ಸಂದರ್ಭದಲ್ಲಿ ಯಾವುದೇ ಉದ್ಯೋಗಿಯನ್ನು ತೆಗೆಯದಂತೆ ರತನ್‌ ಟಾಟಾ ಅವರು ತನ್ನ ಕಂಪನಿಗಳಿಗೆ ಸೂಚಿಸಿದ್ದರು. ಇದಕ್ಕಾಗಿ 500 ಕೋಟಿ ರು. ಮೌಲ್ಯದ ನಿಧಿ ನೀಡಿದ್ದರು.

ಭಾರತ ರತ್ನಕ್ಕೆ ಒತ್ತಾಯಿಸದಂತೆ ಮನವಿ

ಟಾಟಾ ಟ್ರಸ್ಟ್‌ ಮೂಲಕ ಸಾವಿರಾರು ಕೋಟಿ ರು.ಗಳನ್ನು ದಾನ ಮಾಡಿದ್ದ ರತನ್‌ ಟಾಟಾ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಬೇಕೆಂದು ಜನರು ಒತ್ತಾಯಿಸಿ ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ ರತನ್‌ ಟಾಟಾ ಈ ಒತ್ತಾಯವನ್ನು ನಿಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿದ್ದರು.

ಛೋಟು ಎಂದ ಮಹಿಳೆಯ ಹುಡುತನ ಮೆಚ್ಚಿದ್ದ ರತನ್‌

ರತನ್‌ ಟಾಟಾ ಅವರು 2020ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದಕ್ಕೆ ರಿಯಾ ಜೈನ್‌ ಎಂಬ ಮಹಿಳೆ ‘ಥ್ಯಾಂಕ್ಯೂ ಛೋಟು’ ಎಂದು ಕಾಮೆಂಟ್‌ ಮಾಡಿದ್ದರು. ಈ ರೀತಿ ಕಾಮೆಂಟ್‌ ಮಾಡುವ ಮೂಲಕ ರತನ್‌ ಟಾಟಾ ಅವರನ್ನು ಛೋಟು ಎಂದು ಕರೆದಿದ್ದರು. ಇದಕ್ಕೆ ಇತರೆ ನೆಟ್ಟಿಗರು ತೀವ್ರವಾಗಿ ಕಿಡಿಕಾರಿದ್ದರು. ಆದರೆ ಈ ಬಗ್ಗೆ ಕಿಂಚಿತ್‌ ಕೂಡಾ ಕೋಪಗೊಳ್ಳದ ರತನ್‌ ಟಾಟಾ, ಎಲ್ಲರಲ್ಲೂ ಒಂದು ಮಗುವಿನ ಮನಸ್ಸು ಇರುತ್ತದೆ. ಅದಕ್ಕೆ ಕೋಪಿಸಿಕೊಳ್ಳಬಾರದು ಎಂದು ಮಹಿಳೆಯ ಕೀಟಲೆಯನ್ನು ಎಂಜಾಯ್‌ ಮಾಡಿದ್ದರು.