ಪಿಟಿಐ ನವದೆಹಲಿ
ಬೀದಿ ನಾಯಿಗಳಿಂದ ಮನುಷ್ಯರಿಗೆ ಆಗುವ ಅನಾನುಕೂಲತೆ ಮತ್ತು ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಅವುಗಳ ಸಂತಾನಹರಣ ಮತ್ತು ಸ್ಥಳಾಂತರಕ್ಕೆ ಕಳೆದ ವರ್ಷ ತಾನು ನೀಡಿದ್ದ ಆದೇಶವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜತೆಗೆ, ‘ಘನತೆಯಿಂದ ಬದುಕುವ ಹಕ್ಕು, ಬೀದಿ ನಾಯಿಗಳ ದಾಳಿಯ ಭಯವಿಲ್ಲದೆ ಸ್ವತಂತ್ರವಾಗಿ ಓಡಾಡುವ ಹಕ್ಕನ್ನೂ ಒಳಗೊಂಡಿದೆ’ ಎಂದು ಹೇಳಿದೆ.
ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣದಂತಹ ಜನನಿಬಿಡ ಪ್ರದೇಶಗಳಲ್ಲಿ ಬೀದಿನಾಯಿ ಕಡಿತ ಪ್ರಕರಣಗಳು ಹೆಚ್ಚಿದ್ದನ್ನು ಗಮನಿಸಿದ್ದ ಪೀಠ, ಅವುಗಳ ಸಂತಾನಹರಣ ಮಾಡಿ, ಲಸಿಕೆ ನೀಡಿ, ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಲ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.ಜ.29ರಂದು ಕಾಯ್ದಿರಿಸಲಾಗಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದ ನ್ಯಾ। ವಿಕ್ರಂ ನಾಥ್, ಸಂದೀಪ್ ಮೆಹ್ತಾ, ಎನ್.ವಿ. ಅಂಜಾರಿಯಾ ಅವರ ಪೀಠ, ‘ಮಕ್ಕಳು, ವಿದೇಶಿಗರು ಮತ್ತು ವೃದ್ಧರು ನಾಯಿ ಕಡಿತದ ಘಟನೆಗಳಿಗೆ ಬಲಿಯಾದ ಕಠೋರ ಘಟನೆಗಳನ್ನು ನ್ಯಾಯಾಲಯವು ನಿರ್ಲಕ್ಷಿಸಲಾಗದು’ ಎಂದು ಕಟುವಾಗಿ ಹೇಳಿತು.
ರಾಜ್ಯಗಳಿಗೆ ಚಾಟಿ:
ನಾಯಿಗಳ ದಾಳಿ ತಡೆಯಲು ಭಾರತೀಯ ಪಶು ಕಲ್ಯಾಣ ಮಂಡಳಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪ್ರಶ್ನಿಸಿದ್ದ ಅರ್ಜಿಗಳನ್ನೂ ಪೀಠ ತಿರಸ್ಕರಿಸಿತು. ಜತೆಗೆ, ಅದರಲ್ಲಿ ಸೂಚಿಸಿದ್ದ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತಗಳು ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ಗಮನಿಸಿ ಅಸಮಾಧಾನ ಹೊರಹಾಕಿತು.
‘ಶ್ವಾನ ಜನನ ನಿಯಂತ್ರಣ ಕ್ರಮಗಳನ್ನು ಕೆಲವೇ ಕಡೆಗಳಲ್ಲಿ ಜಾರಿಗೆ ತರಲಾಗಿದೆ. ಅದಕ್ಕೆ ಬೇಕಾಗುವಷ್ಟು ನಿಧಿಯನ್ನು ನಗರಾಡಳಿತಗಳು ಮತ್ತು ನಾಗರಿಕ ಸಂಸ್ಥೆಗಳು ಹಂಚಿಕೆ ಮಾಡುತ್ತಿಲ್ಲ. ಇದರಿಂದಾಗಿ ಸಮಸ್ಯೆ ಉಲ್ಬಣಿಸಿದ್ದು, ತುರ್ತು ಮತ್ತು ವ್ಯವಸ್ಥಿತ ಹಸ್ತಕ್ಷೇಪದ ಅಗತ್ಯ ಸೃಷ್ಟಿಯಾಗಿದೆ’ ಎಂದು ಕೋರ್ಟ್ ಹೇಳಿತು. ‘ಸಂವಿಧಾನದ 21ನೇ ವಿಧಿಯಡಿ ಎಲ್ಲಾ ನಾಗರಿಕರಿಗೆ ದಾಳಿಯ ಆತಂಕ, ಜೀವಭಯದಿಂದ ಮುಕ್ತವಾಗಿ ಬದುಕುವ ಮತ್ತು ಎಲ್ಲೆಡೆ ಸ್ವತಂತ್ರವಾಗಿ ಓಡಾಡುವ ಹಕ್ಕಿದೆ. ಸಾರ್ವಜನಿಕರಲ್ಲಿ ಇಂತಹ ತಡೆಗಟ್ಟಬಹುದಾದ ಆತಂಕಗಳು ಹೆಚ್ಚುತ್ತಿರುವಾಗ ರಾಜ್ಯಗಳು ಸುಮ್ಮನೆ ಅದನ್ನು ನೋಡಿಕೊಂಡು, ಯಾವುದೇ ಕ್ರಮ ಕೈಗೊಳ್ಳದೆ ಇರಲಾಗದು. ಜನರ ಸಾಂವಿಧಾನಿಕ ಹಕ್ಕಿನ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಬದ್ಧವಾಗಿರಬೇಕು’ ಎಂದು ಪಾಠ ಮಾಡಿತು. ‘ಸಮಸ್ಯೆಯನ್ನು ಪೂರ್ವಭಾವಿಯಾಗಿ ತಡೆಗಟ್ಟಲು ಇರುವ ವಿಧಾನವನ್ನು ಅಳವಡಿಸಿಕೊಳ್ಳುವಲ್ಲಿನ ವೈಫಲ್ಯವು ಅದರ ಉಲ್ಬಣಕ್ಕೆ ಕಾರಣವಾಗಿದೆ. ಇಂತಹ ವರ್ತನೆಯಿಂದ ಸಾರ್ವಜನಿಕ ಆರೋಗ್ಯ, ಮಾನವ ಸುರಕ್ಷತೆ ಮತ್ತು ಪರಿಸರ ಸಮತೋಲನದಂತಹ ವಿಷಯಗಳಲ್ಲಿ ಸಮರ್ಥ ಹಾಗೂ ದೀರ್ಘಕಾಲೀನ ಕ್ರಮ ಸಾಧ್ಯವಾಗದು’ ಎಂದೂ ಪೀಠ ಬುದ್ಧಿವಾದ ಹೇಳಿತು.