ಸಾರಾಂಶ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಗೊಂದಲದ ಗೂಡಾಗಿದೆ. ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ಐಎಸ್‌ಎಸ್ ಅಧಿಕಾರಿ ಡಾ.ಬಿ. ಬಸವರಾಜ ಅವರು ಸೋಮವಾರ ಬೆಳಗ್ಗೆ ಚುನಾವಣೆಯನ್ನು ಡಿ.30ರ ವರೆಗೂ ಮುಂದೂಡುವುದಾಗಿ ತಿಳಿಸಿ ಹೊರಡಿಸಿದ ಪ್ರಕಟಣೆ ತೀವ್ರ ಹಗ್ಗಜಗ್ಗಾಟ ನಡೆಸುವಂತೆ ಮಾಡಿತು.
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಗೊಂದಲದ ಗೂಡಾಗಿದೆ. ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ಐಎಸ್‌ಎಸ್ ಅಧಿಕಾರಿ ಡಾ.ಬಿ. ಬಸವರಾಜ ಅವರು ಸೋಮವಾರ ಬೆಳಗ್ಗೆ ಚುನಾವಣೆಯನ್ನು ಡಿ.30ರ ವರೆಗೂ ಮುಂದೂಡುವುದಾಗಿ ತಿಳಿಸಿ ಹೊರಡಿಸಿದ ಪ್ರಕಟಣೆ, ಕೆಎಸ್‌ಸಿಎ ಹಾಗೂ ಚುನಾವಣೆಗೆ ಸ್ಪರ್ಧಿಸುತ್ತಿರುವ ವೆಂಕಟೇಶ್ ಪ್ರಸಾದ್ ಮತ್ತು ಬ್ರಿಜೇಶ್ ಪಟೇಲ್ ನೇತೃತ್ವದ ಶಾಂತ್‌ಕುಮಾರ್ ಬಣಗಳು ಇಡೀ ದಿನ ತೀವ್ರ ಹಗ್ಗಜಗ್ಗಾಟ ನಡೆಸುವಂತೆ ಮಾಡಿತು. ಸದ್ಯಕ್ಕೆ ಕೆಎಸ್‌ಸಿಎ, ವೆಂಕಿ ಹಾಗೂ ಶಾಂತ್‌ಕುಮಾರ್‌ರ ಬಣಗಳು ಪೂರ್ವ ನಿಗದಿಯಂತೆ ನ.30ಕ್ಕೇ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಚೆಂಡು ಚುನಾವಣಾ ಅಧಿಕಾರಿಯ ಅಂಗಳದಲ್ಲಿದೆ.
ಚುನಾವಣೆ ಮುಂದೂಡಿದ್ದು ಏಕೆ?
ಕೆಎಸ್‌ಸಿಎ ಚುನಾವಣೆ ಘೋಷಣೆಗೂ ಮೊದಲೇ ವೆಂಕಿ ಬಣದಿಂದ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಈ ನಡುವೆ ಕೆಎಸ್‌ಸಿಎ ಆಡಳಿತ ಸಮಿತಿಯಲ್ಲಿ 9 ವರ್ಷ ಪೂರೈಸಿದ ಸದಸ್ಯರು ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ನಿಯಮವನ್ನು ಕೆಎಸ್‌ಸಿಎ ಅಳವಡಿಸಿಕೊಳ್ಳುತ್ತಿರುವುದಾಗಿ ತಿಳಿದುಬಂತು. ಈ ನಿಯಮ ಕೆಎಸ್‌ಸಿಎ ಬೈಲಾಗೆ ವಿರುದ್ಧವಾಗಿದೆ, ಇದರ ಬಳಕೆ ಆಗಬಾರದು ಎಂದು ವೆಂಕಿ ಬಣ ಜಿಲ್ಲಾ ಕೋರ್ಟ್‌ನಿಂದ ತಾತ್ಕಾಲಿಕ ತಡೆ ತಂದಿತು. ಅದರ ವಿರುದ್ಧ ಕೆಎಸ್‌ಸಿಎ ಹೈಕೋರ್ಟಲ್ಲಿ ರಿಟ್ ಅರ್ಜಿ ಹಾಕಿತು. ಈ ಎಲ್ಲ ಬೆಳವಣಿಗೆಯಿಂದಾಗಿ ಮತದಾನ ಮಾಡಬೇಕಿರುವ ಸದಸ್ಯರಲ್ಲಿ ಗೊಂದಲ ಸೃಷ್ಟಿಯಾಗಿದೆ. ಗೊಂದಲ ಬಗೆಹರಿಯುವ ವರೆಗೂ ನ್ಯಾಯಸಮತವಾಗಿ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸೋಮವಾರ (ನ.17) ಚುನಾವಣಾ ಅಧಿಕಾರಿ, ಡಿ.30ರ ವರೆಗೂ ಚುನಾವಣೆ ಮುಂದೂಡುತ್ತಿರುವುದಾಗಿ ಪ್ರಕಟಣೆ ಹೊರಡಿಸಿದರು.
ಹೈಕೋರ್ಟಲ್ಲಿ ಏನಾಯಿತು?:
ಸೋಮವಾರ ಹೈಕೋರ್ಟ್, ಜಿಲ್ಲಾ ಕೋರ್ಟ್ ನೀಡಿದ್ದ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿತು. ಅಲ್ಲದೇ ಟ್ರಯಲ್ ಕೋರ್ಟಲ್ಲಿ ಸೂಕ್ತ ವಾದ-ಪ್ರತಿವಾದದೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತು.ವೆಂಕಿ ಬಣ ಸಿಟ್ಟು: ಚುನಾವಣೆ ಮುಂದೂಡಲು ಕೆಎಸ್‌ಸಿಎ ಆಡಳಿತ ಸಮಿತಿಯೇ ನೇರ ಕಾರಣ ಎಂದ ವೆಂಕಿ ಬಣ, ಎದುರಾಳಿಗಳು ಸೋಲಿಗೆ ಹೆದರಿ ಈ ರೀತಿ ಕುತಂತ್ರ ನಡೆಸುತ್ತಿದೆ ಎಂದೂ ಆರೋಪಿಸಿತು. ವೆಂಕಟೇಶ್ ಪ್ರಸಾದ್ ಹಾಗೂ ತಂಡ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಕೆಎಸ್‌ಸಿಎ ಮಾಧ್ಯಮ ಪ್ರಕಟಣೆ ಹೊರಡಿಸಿ, ಚುನಾವಣಾ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದಲೇ ಇಷ್ಟೆಲ್ಲಾ ಗೊಂದಲ ಆಗಿದೆ. ಸದ್ಯ ಕೋರ್ಟ್ ಸೂಚನೆಯಿಂದಾಗಿ ಚುನಾವಣೆಗೆ ಯಾವುದೇ ಅಡ್ಡಿಯಿಲ್ಲ. ಚುನಾವಣಾ ಅಧಿಕಾರಿಗಳು ತಮ್ಮ ಪತ್ರವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದೆ. ಚುನಾವಣಾ ಅಧಿಕಾರಿಯ ನಿರ್ಧಾರದ ಮೇಲೆ ಎಲ್ಲರ ಕಣ್ಣಿದೆ.
)
;Resize=(128,128))
;Resize=(128,128))
;Resize=(128,128))