ಟೆರರ್‌ ಡಾಕ್ಟರ್‌ ನಬಿ ‘ಶೂ ಬಾಂಬರ್‌’ ?

| Published : Nov 18 2025, 02:15 AM IST

ಸಾರಾಂಶ

ದಿಲ್ಲಿ ಕಾರು ಸ್ಫೋಟ ಪ್ರಕರಣಕ್ಕೆ ಸೋಮವಾರ ಮತ್ತೊಂದು ತಿರುವು ಸಿಕ್ಕಿದೆ. ಹ್ಯುಂಡೈ ಐ20 ಕಾರಿನಲ್ಲಿ ಉಗ್ರ ಡಾ. ನಬಿಯ ಶೂ ಪತ್ತೆಯಾಗಿದ್ದು, ಅದರೊಳಗೆ ‘ಮದರ್‌ ಆಫ್‌ ಸೈತಾನ್’ ಎಂದೇ ಕರೆಯಲ್ಪಡುವ ಟಿಎಟಿಪಿ ಬಾಂಬ್‌ ಪತ್ತೆಯಾಗಿದೆ ಎನ್ನಲಾಗಿದೆ. ಇದು ಶೂ ಬಾಂಬರ್‌ ರೀತಿ ನಬಿ ಕಾರ್ಯ ನಿರ್ವಹಿಸಲು ಯೋಜಿಸಿದ್ದನೇ ಎಂಬ ಸಂದೇಹ ಸೃಷ್ಟಿಸಿದೆ.

- ಕಾರಿನಲ್ಲಿ ನಬಿಯ ಶೂ ಒಳಗೆ ಲೋಹದ ಅಂಶ ಪತ್ತೆ

- ‘ಮದರ್‌ ಆಫ್‌ ಸೈತಾನ್‌’ ಬಾಂಬ್‌ ಬಳಕೆ ಶಂಕೆ

- ಅತಿ ತೀವ್ರತೆ, ಅನಿಯಂತ್ರಿತ ಗುಣವಿರುವ ಸ್ಫೋಟಕ

ನವದೆಹಲಿ: ದಿಲ್ಲಿ ಕಾರು ಸ್ಫೋಟ ಪ್ರಕರಣಕ್ಕೆ ಸೋಮವಾರ ಮತ್ತೊಂದು ತಿರುವು ಸಿಕ್ಕಿದೆ. ಹ್ಯುಂಡೈ ಐ20 ಕಾರಿನಲ್ಲಿ ಉಗ್ರ ಡಾ. ನಬಿಯ ಶೂ ಪತ್ತೆಯಾಗಿದ್ದು, ಅದರೊಳಗೆ ‘ಮದರ್‌ ಆಫ್‌ ಸೈತಾನ್’ ಎಂದೇ ಕರೆಯಲ್ಪಡುವ ಟಿಎಟಿಪಿ ಬಾಂಬ್‌ ಪತ್ತೆಯಾಗಿದೆ ಎನ್ನಲಾಗಿದೆ. ಇದು ಶೂ ಬಾಂಬರ್‌ ರೀತಿ ನಬಿ ಕಾರ್ಯ ನಿರ್ವಹಿಸಲು ಯೋಜಿಸಿದ್ದನೇ ಎಂಬ ಸಂದೇಹ ಸೃಷ್ಟಿಸಿದೆ.

ನಬಿಯ ಕಾರಿನ ಪರಿಶೀಲನೆ ವೇಳೆ ಬಲ ಭಾಗದ ಕುರ್ಚಿಯ ಕೆಳಗೆ ಶೂ ಪತ್ತೆಯಾಗಿದ್ದು, ಅದರೊಳಗೆ ಲೋಹದ ಅಂಶದಲ್ಲಿ ರಾಸಾಯನಿಕ ಪತ್ತೆಯಾಗಿದೆ. ವಿಧಿವಿಜ್ಞಾನ ತಜ್ಞರ ಪ್ರಕಾರ ಇದು ಟಿಎಟಿಪಿ ಬಾಂಬ್‌ನ ಅಂಶವೇ ಇರಬಹುದು ಎನ್ನಲಾಗಿದೆ.

ಏನಿದು ಮದರ್‌ ಆಫ್‌ ಸೈತಾನ್‌?:

ಟ್ರೈಅಸಿಟೋನ್‌ ಟ್ರೈಪೆರಾಕ್ಸೈಡ್‌ (ಟಿಎಟಿಪಿ) ಎಂಬ ಸ್ಫೋಟಕ ಅಂಶಕ್ಕೆ ಜಾಗತಿಕವಾಗಿ ‘ಮದರ್‌ ಆಫ್‌ ಸೈತಾನ್‌’ ಎಂದು ಕರೆಯಲಾಗುತ್ತದೆ. ಇದು ಅತಿ ಹೆಚ್ಚು ತೀವ್ರತೆಯ ಮತ್ತು ಅನಿಯಂತ್ರಿತ ಗುಣಗಳನ್ನು ಹೊಂದಿದೆ. ಉಷ್ಣ ಹೆಚ್ಚಳ, ಘರ್ಷಣೆ, ಒತ್ತಡ ಮತ್ತು ಮತ್ಯಾವುದೇ ಸುತ್ತಮುತ್ತಲಿನ ಬದಲಾವಣೆಯು ಟಿಎಟಿಪಿ ಸ್ಫೋಟಕ್ಕೆ ಕಾರಣವಾಗುತ್ತದೆ. ಹೆಚ್ಚು ತೀವ್ರತೆ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಕಾರಣ ಉಗ್ರರು ಹೆಚ್ಚು ಅವಲಂಬಿಸುತ್ತಾರೆ.

==

ದಿಲ್ಲಿ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 15ಕ್ಕೇರಿಕೆ

ನವದೆಹಲಿ: ನ.10 ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಕಾರು ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 15ಕ್ಕೇರಿಕೆ ಯಾಗಿದೆ. ದುರಂತದಲ್ಲಿ ಗಾಯಗೊಂಡು ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಸೋಮವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರನ್ನು ಲುಕ್ಮಾನ್ ಮತ್ತು ವಿನಯ್ ಪಾಠಕ್‌ ಎಂದು ಗುರುತಿಸಲಾಗಿದೆ.

==

ದಿಲ್ಲಿ ಸ್ಫೋಟದ ಕರ್ತೃಗಳು ಪಾತಾಳದಲ್ಲಿದ್ದರೂ ಹುಡುಕಿ ತಂದು ಶಿಕ್ಷೆ: ಶಾ ಗುಡುಗು

ಫರೀದಾಬಾದ್: ‘ದೆಹಲಿ ಸ್ಫೋಟಕ್ಕೆ ಕಾರಣರಾದ ಅಪರಾಧಿಗಳು ಪಾತಾಳದಲ್ಲಿದ್ದರೂ ಎಳೆದು ತಂದು, ಕಠಿಣಾತಿಕಠಿಣ ಶಿಕ್ಷೆ ವಿಧಿಸುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಡುಗಿದ್ದಾರೆ.ಫರೀದಾಬಾದ್‌ನಲ್ಲಿ ನಡೆದ ಉತ್ತರ ವಲಯ ಮಂಡಳಿಯ (ಎನ್‌ಝಡ್‌ಸಿ) 32ನೇ ಸಭೆಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆಯನ್ನು ಅದರ ಬೇರುಗಳಿಂದಲೇ ನಿರ್ಮೂಲನೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸಾಮೂಹಿಕ ಬದ್ಧತೆಯಾಗಿದೆ. ದೆಹಲಿ ಬಾಂಬ್ ಸ್ಫೋಟದ ಅಪರಾಧಿಗಳನ್ನು ಪಾತಾಳದಲ್ಲಿದ್ದರೂ ಪತ್ತೆ ಹಚ್ಚಿ, ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರುಪಡಿಸಲಾಗುವುದು ಮತ್ತು ಸಾಧ್ಯವಾದಷ್ಟು ಕಠಿಣ ಶಿಕ್ಷೆಯನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

==

ದಿಲ್ಲಿ ಸ್ಫೋಟದ ವಿಚಾರಣೆ ಎದುರಿಸಿದ್ದ ವ್ಯಾಪಾರಿ ಬೆಂಕಿ ಹಚ್ಚಿಕೊಂಡು ಸಾವು

ಶ್ರೀನಗರ: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದ ಕಾಶ್ಮೀರದ ಒಣಹಣ್ಣು ವ್ಯಾಪಾರಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸ್ಥಳೀಯ ಖಾಜಿಗುಂಡ್‌ ನಿವಾಸಿ ಬಿಲಾಲ್‌ ಅಹ್ಮದ್‌ ವಾನಿ ಮೃತ ವ್ಯಕ್ತಿ. ಭಾನುವಾರ ಬೆಂಕಿ ಹಚ್ಚಿಕೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಬಿಲಾಲ್ ಹಾಗೂ ಟೆರರ್‌ ಡಾಕ್ಟರ್ಸ್‌ ಕೇಸ್‌ನ ಬಂಧಿತ ಡಾ. ಮಜಫ್ಫರ್‌ ರಾಥರ್ ಅಕ್ಕ ಪಕ್ಕದ ಮನೆಯವರು. ಹೀಗಾಗಿ ಬಿಲಾಲ್‌ ಮತ್ತು ಅವರ ಪುತ್ರನನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ಬಿಲಾಲ್ ಬಿಟ್ಟು ಕಳುಹಿಸಿದ್ದರು. ಆದರೆ ಅವರ ಪುತ್ರ ಕಸ್ಟಡಿಯಲ್ಲಿದ್ದಾನೆ.