ಅಯೋಧ್ಯೆ: ಇಲ್ಲಿನ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ದೋಚಿದ್ದ ಆರೋಪಿಗಳ ಬ್ರಹ್ಮಾಂಡ ಭ್ರಷ್ಟಾಚಾರ ದಿನೇ ದಿನೇ ಬೆಳಕಿಗೆ ಬರುತ್ತಿದೆ. ಅತ್ಯಂತ ಕಡಿಮೆ ವೇತನ ಹೊಂದಿದ್ದ ದೇಗುಲದ ಕೆಲ ಸಿಬ್ಬಂದಿ, ಹಣ ಎಣಿಕೆಗೆ ನಿಯೋಜಿತ ಗುತ್ತಿಗೆ ಸಿಬ್ಬಂದಿಗಳ ಅತ್ಯಲ್ಪ ಅವಧಿಯಲ್ಲೇ ಐಷಾರಾಮಿ ಬೈಕ್, ಕಾರು, ಫ್ಲ್ಯಾಟ್, ಫಾರ್ಮ್‌ಹೌಸ್ ಖರೀದಿಸಿದ್ದು ಕಂಡುಬಂದಿದೆ.
ಸಿಬ್ಬಂದಿಗಳ ಆದಾಯಕ್ಕೂ ಅವರು ಹೊಂದಿದ ಆಸ್ತಿಗೂ 100 ಪಟ್ಟು ವ್ಯತ್ಯಾಸ
ಜೊತೆಗೆ ಕೆಲ ಸಿಬ್ಬಂದಿಗಳ ಆದಾಯಕ್ಕೂ ಅವರು ಹೊಂದಿದ ಆಸ್ತಿಗೂ 100 ಪಟ್ಟು ವ್ಯತ್ಯಾಸ ಕಂಡುಬಂದಿದೆ.ದೇಗುಲದಲ್ಲಿ ಹುಂಡಿ ಹಣ ಎಣಿಕೆಗೆ ನಿಯೋಜಿತರಾಗಿದ್ದ ಅನುಕಲ್ಪ್ ಮಿಶ್ರಾ ಹಾಗೂ ಆತನ ಭಾವ ಲವಕುಶ ಮಿಶ್ರಾ ಈ ಹಿಂದೆ ಬಡವರಾಗಿದ್ದರು. ರಾಮಮಂದಿರ ದೇಣಿಗೆ ಎಣಿಸುವ ಕೆಲಸಕ್ಕೆ ಸೇರಿಕೊಂಡ ಬಳಿಕ ಐಷಾರಾಮಿ ಜೀವನ ಪ್ರಾರಂಭಿಸಿದ್ದರು ಎಂದು ತಿಳಿದುಬಂದಿದೆ.
ನೆರೆಹೊರೆಯವರು ಈ ಮಾಹಿತಿ
ಈ ಬಗ್ಗೆ ತನಿಖಾಧಿಕಾರಿಗಳಿಗೆ ಅವರ ನೆರೆಹೊರೆಯವರು ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅನುಕಲ್ಪ್ ಮೊದಲು ಮಂದಿರದ ಕೆಲಸಕ್ಕೆ ಸೇರಿದ್ದ. ನಂತರ ಬಂಧು ಲವಕುಶ ಮಿಶ್ರಾನನ್ನೂ ದೇಣಿಗೆ ಎಣಿಕೆ ಕೆಲಸಕ್ಕೆ ಸೇರಿಸಿಕೊಂಡ ಎಂದಿದ್ದಾರೆ.
‘ಅನುಕಲ್ಪ್ ಮಿಶ್ರಾ ಕುಟುಂಬ ಈ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ ಈಗ ಅವರಿಗೆ ಯಾವುದರ ಅಗತ್ಯವೂ ಇಲ್ಲ. ಅಷ್ಟೊಂದು ದಿಢೀರ್ ಸ್ಥಿತಿವಂತರಾಗಿದ್ದಾರೆ. ಅನುಕಲ್ಪ್ ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್‌ಹೌಸ್ ಒಂದನ್ನು ನಿರ್ಮಿಸಿದ್ದಾನೆ. ಕಳೆದ ವರ್ಷ ಅಯೋಧ್ಯೆಯಲ್ಲಿ 65 ಲಕ್ಷ ರು.ಗಳ ಮನೆಯನ್ನೂ ಖರೀದಿಸಿದ್ದಾನೆ. ಅವನ ಬಳಿ ಈಗಾಗಲೇ ಒಂದು ವಾಹನವಿದ್ದರೂ, ಮತ್ತೊಂದು ಸ್ಕಾರ್ಪಿಯೋ ಎಸ್‌ಯುವಿ ಬುಕ್ ಮಾಡಲು ಮುಂದಾಗಿದ್ದ’ ಎಂದು ಗೊತ್ತಾಗಿದೆ.
‘ಇನ್ನು ಅವನ ಭಾವ ಲವಕುಶ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವನು ಇತ್ತೀಚೆಗೆ 1 ಲಕ್ಷ ರು.ಗಳಿಗೂ ಹೆಚ್ಚು ಬೆಲೆಯ ಬೈಕ್ ಖರೀದಿಸಿದ್ದಾನೆ’ ಎಂದು ತಿಳಿಸಿದ್ದಾರೆ.
