ದೃಶ್ಯ ಸೆರೆಯಾಗದಂತೆ ಒಬ್ಬ ಸಿಸಿಟೀವಿಗೆ ಅಡ್ಡಲಾಗಿ ನಿಂತರೆ, ಮತ್ತೊಬ್ಬ ಹುಂಡಿಯಿಂದ ಎಣಿಕೆಗೆಂದು ತೆಗೆದಿದ್ದ ಹಣ ಎಗರಿಸುತ್ತಿದ್ದ; ಮತ್ತೊಂದು ತಂಡ ನೋಟಿನ ಬಂಡಲ್‌ನೊಳಗೆ ಹೆಚ್ಚುವರಿ ನೋಟು ಸಿಕ್ಕಿಸಿ ಅದನ್ನು ಬ್ಯಾಂಕಿಗೆ ಜಮೆ ಮಾಡುವ ಮುನ್ನ ಲಪಟಾಯಿಸುತ್ತಿತ್ತು

ಅಯೋಧ್ಯೆ: ದೃಶ್ಯ ಸೆರೆಯಾಗದಂತೆ ಒಬ್ಬ ಸಿಸಿಟೀವಿಗೆ ಅಡ್ಡಲಾಗಿ ನಿಂತರೆ, ಮತ್ತೊಬ್ಬ ಹುಂಡಿಯಿಂದ ಎಣಿಕೆಗೆಂದು ತೆಗೆದಿದ್ದ ಹಣ ಎಗರಿಸುತ್ತಿದ್ದ; ಮತ್ತೊಂದು ತಂಡ ನೋಟಿನ ಬಂಡಲ್‌ನೊಳಗೆ ಹೆಚ್ಚುವರಿ ನೋಟು ಸಿಕ್ಕಿಸಿ ಅದನ್ನು ಬ್ಯಾಂಕಿಗೆ ಜಮೆ ಮಾಡುವ ಮುನ್ನ ಲಪಟಾಯಿಸುತ್ತಿತ್ತು. ಇನ್ನೊಂದು ತಂಡ, ದೇಗುಲ ಶೌಚಾಲಯದೊಳಗೇ ಹಣ ಬಚ್ಚಿಟ್ಟು ಬಳಿಕ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿತ್ತು!

ಇದು ಕೋಟ್ಯಂತರ ಹಿಂದೂಗಳ ಶತಮಾನದ ಕನಸಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ 8 ವಂಚಕರ ತಂಡ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ ರೀತಿ!

ಹೌದು. ಇಲ್ಲಿನ ರಾಮಮಂದಿರಕ್ಕೆ ಭಕ್ತರು ಹುಂಡಿ ಮೂಲಕ ಸಲ್ಲಿಸಿದ ಕಾಣಿಕೆಯನ್ನು ಯಾವ ರೀತಿ ಕಳ್ಳತನ ಮಾಡಲಾಗುತ್ತಿತ್ತು ಎಂಬ ಬಗ್ಗೆ ವಿಶೇಷ ತನಿಖಾ ದಳದ ಪ್ರಾಥಮಿಕ ವರದಿಯು ಇಂಥ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ವರ್ಷದ ಏ.27 ಮತ್ತು ಜೂ.5ರ ನಡುವೆ 70 ಬಾರಿ ಹಣ ಕದ್ದಿರುವುದು ಪತ್ತೆಯಾಗಿದೆ. ಇದುವರೆಗೆ ಅಂದಾಜು 7.5 ಕೋಟಿ ರು. ನಗದು ಮತ್ತು ಚಿನ್ನಾಭರಣದ ದೋಚಿದ ಸಂಶಯವಿದೆ.

3 ವಿಧದಲ್ಲಿ ಕನ್ನ:

ಹುಂಡಿಯ ಹಣ ಎಣಿಕೆ ಶುರುವಾದಾಗ ಒಬ್ಬ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿ ಕ್ಯಾಮೆರಾಗೆ ಅಡ್ಡಲಾಗಿ ನಿಂತು, ಲೆಕ್ಕ ಮಾಡುತ್ತಿರುವುದು ಕಾಣದಂತೆ ಮರೆ ಮಾಡುತ್ತಿದ್ದರು. ಆಗ ಎಣಿಕೆಯಲ್ಲಿ ತೊಡಗಿದ್ದ ಸಿಬ್ಬಂದಿ ಕೆಲ ನೋಟುಗಳನ್ನು ತಮ್ಮ ಉಡುಪುಗಳನ್ನು ಮುಚ್ಚಿಟ್ಟುಕೊಳ್ಳುತ್ತಿದ್ದರು.

ಕೆಲವೊಮ್ಮೆ ಸಿಬ್ಬಂದಿ, ಬಂಡಲ್‌ಗೆ ಒಂದಿಷ್ಟು ಹೆಚ್ಚುವರಿ ನೋಟುಗಳನ್ನು ಸೇರಿಸುತ್ತಿದ್ದರು. ಬಳಿಕ ಅದನ್ನು ಬ್ಯಾಂಕ್‌ಗೆ ಜಮೆ ಮಾಡಲು ಒಯ್ಯುವಾಗ, ತಾವು ಸೇರಿಸಿದ್ದ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರು.

ಕದ್ದ ಹಣವನ್ನು ನೇರವಾಗಿ ದೇವಸ್ಥಾನದಿಂದ ಹೊರಗೆ ಒಯ್ಯಲಾಗದ ಕಾರಣ, ಅದನ್ನು ದೇವಳದ ಆವರಣದಲ್ಲೇ ಇರುವ ಶೌಚಾಲಯದಲ್ಲಿ ಇಡಲಾಗುತ್ತಿತ್ತು. ಬಳಿಕ ಸಮಯ ಸಾಧಿಸಿ, ಅಲ್ಲಿಂದ ಸಾಗಿಸಲಾಗುತ್ತಿತ್ತು. ಆ ಮೊತ್ತವನ್ನು, ಕಳ್ಳತನದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಸಿಬ್ಬಂದಿ ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರು.

ಆಭರಣ ಕೂಡ ಕಳವು:

ಕಾಣಿಕೆಯಾಗಿ ಬಂದ ನಗದಿನ ಜತೆಗೆ ದಾನವಾಗಿ ಕೊಡಲಾದ ಚಿನ್ನ-ಬೆಳ್ಳಿಯ ಆಭರಣಗಳನ್ನೂ ಸಿಬ್ಬಂದಿ ಕದಿಯುತ್ತಿದ್ದರು. ಭಕ್ತರು ಬಾಲರಾಮನಿಗೆಂದು ಅರ್ಪಿಸುತ್ತಿದ್ದ ಓಲೆ, ನತ್ತು, ಬಳೆ, ಗೆಜ್ಜೆ ಇತ್ಯಾದಿಗಳನ್ನು ಕಳವು ಮಾಡಲಾಗಿದೆ.

ಅಧಿಕಾರಿಗಳ ನಿರ್ಲಕ್ಷ:

ಭದ್ರತೆಯ ದೃಷ್ಟಿಯಿಂದ, ದೇವಸ್ಥಾನದಿಂದ ಹೊರಹೋಗುವ ವೇಳೆ ಸಿಬ್ಬಂದಿಯ ತಪಾಸಣೆ ನಡೆಸುವುದು ಕಡ್ಡಾಯ. ಮೊದಮೊದಲು ಇದರ ಪಾಲನೆಯಾಗುತ್ತಿತ್ತಾದರೂ, ಬಳಿಕ ಅನುದಿನದ ತಪಾಸಣೆಯನ್ನು ಸರಿಯಾಗಿ ನಡೆಸಲಾಗುತ್ತಿರಲಿಲ್ಲ. ಇದನ್ನು ಕಂಡುಕೊಂಡ ಸಿಬ್ಬಂದಿ, ತಮ್ಮ ವಸ್ತ್ರಗಳೊಳಗೇ ನಗದನ್ನು ಇಟ್ಟುಕೊಂಡು ಹೋಗುತ್ತಿದ್ದರು.

ಸಂಶಯ ಬಂದಿದ್ದು ಹೇಗೆ?:

ನಿಯಮಿತವಾಗಿ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತಿದ್ದ ಕಾಣಿಕೆ ಹಣದ ಕಡತಗಳ ಪರಿಶೀಲನೆ ವೇಳೆ, ಲೆಕ್ಕಾಚಾರದಲ್ಲಿ ಲೋಪವಾಗಿರುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಸಂಶಯ ಬಂದಿತ್ತು. 6ರಿಂದ 7 ಲಕ್ಷ ರು. ವರೆಗೆ ಸಂಗ್ರಹಿಸಬಹುದಾದ ಹುಂಡಿಯಲ್ಲಿ 500 ಮುಖಬೆಲೆಯ ನೋಟುಗಳ ಸಂಖ್ಯೆ ನಿರೀಕ್ಷೆಗಿಂತ ತುಂಬಾ ಕಡಿಮೆ ಇರುತ್ತಿದ್ದವು. ಅನುಮಾನ ಗಾಢವಾಗುತ್ತಿದ್ದಂತೆ ವಂಚನೆಯ ಪತ್ತೆಗಾಗಿ, ಹಣ ಲೆಕ್ಕ ಮಾಡಲಾಗುತ್ತಿದ್ದ ಕೋಣೆಯಲ್ಲಿ ಗೌಪ್ಯ ಕ್ಯಾಮೆರಾಗಳನ್ನು ಅಳವಡಿಸಲಾಯಿತು.

ತಿಂಗಳಲ್ಲಿ 70 ಬಾರಿ ಕಳ್ಳತನ

ಹೀಗೆ ರಹಸ್ಯವಾಗಿ ಅಳವಡಿಸಿದ್ದ ಸಿಸಿಟೀವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಈ ವರ್ಷದ ಏ.27 ಮತ್ತು ಜೂ.5ರ ನಡುವೆ 70 ಬಾರಿ ಹಣ ಕದ್ದಿರುವುದು ಪತ್ತೆಯಾಗಿದೆ. ಇದುವರೆಗೆ ಅಂದಾಜು 7.5 ಕೋಟಿ ರು. ನಗದು ಮತ್ತು ಚಿನ್ನಾಭರಣದ ದೋಚಿದ ಸಂಶಯವಿದೆ. ಈ ಪೈಕಿ ಸದ್ಯ 80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಕಳ್ಳಾಟ, 2024ರ ಜನವರಿಯಲ್ಲಿ ದೇವಾಲಯ ಸಾರ್ವಜನಿಕರಿಗೆ ತೆರೆದ ಹಂತದಲ್ಲೇ ಆರಂಭವಾಗಿತ್ತು ಎಂದು ಎಸ್‌ಐಟಿ ತನ್ನ ವರದಿಯಲ್ಲಿ ತಿಳಿಸಿದೆ.

ಕಳ್ಳರು ಇವರೇ:

ಸಿಸಿಟೀವಿ ಪರಿಶೀಲಿಸಿದಾಗ, 8 ಸಿಬ್ಬಂದಿ ಕಳ್ಳತನದಲ್ಲಿ ತೊಡಗಿದ್ದು ಕಂಡುಬಂದಿದೆ. ಆದರೆ ಇವರನ್ನೆಲ್ಲಾ ನಿಯಂತ್ರಿಸುತ್ತಿದ್ದ ಕಾಣದ ಕೈಗಳು ಟಿನ್ನು ಯಾದವ್‌ ಮತ್ತು ಸುಭಾಶ್‌ ಶ್ರೀವಾಸ್ತವರದ್ದು ಎನ್ನಲಾಗಿದೆ. ಕಾಣಿಕೆ ಎಣಿಕೆಗೆ ಸಿಬ್ಬಂದಿಯನ್ನು ನೇಮಿಸುವ ಜವಾಬ್ದಾರಿ ಹೊತ್ತಿದ್ದ ಇವರು, ತಮ್ಮೊಂದಿಗೆ ಕೈಜೋಡಿಸಲು ಒಪ್ಪಿಕೊಂಡವರನ್ನು ಆ ಕೆಲಸಕ್ಕೆ ನಿಯೋಜಿಸುತ್ತಿದ್ದರು ಎಂದು ತಿಳಿದುಬಂದಿದೆ.

ನಗದು, ಚಿನ್ನ, ಬೆಳ್ಳಿ ಕದ್ದ 8 ಆರೋಪಿಗಳು ಅರೆಸ್ಟ್‌ 

ಅಯೋಧ್ಯಾ: ಇಲ್ಲಿನ ರಾಮ ಮಂದಿರದ ದೇಣಿಗೆ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಎಲ್ಲ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ ಜೂ.29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ.

ಬಂಧಿತರ ಪೈಕಿ ದೇಣಿಗೆ ಎಣಿಕೆ ಕೆಲಸ ಮಾಡುತ್ತಿದ್ದ ರಾಮಶಂಕರ್ ಮಿಶ್ರಾ ಅಲಿಯಾಸ್ ತಿನ್ನು ಯಾದವ್‌, ರಾಮಶಂಕರ್ ಮಿಶ್ರಾ ಅಲಿಯಾಸ್ ರವಿ ಮಿಶ್ರಾ, ಈತನ ಪುತ್ರ ಅನುಕಲ್ಪ್ ಮಿಶ್ರಾ ಹಾಗೂ ಅಳಿಯ ಲವಕುಶ ಮಿಶ್ರಾ, ಸೋದರಳಿಯ ಮನೀಶ್ ಕುಮಾರ್ ಯಾದವ್, ದೇವಸ್ಥಾನದ ಅಟೆಂಡೆಂಟ್‌ ಅವಿನಾಶ್‌ ಶುಕ್ಲಾ, ಮಾಜಿ ಬ್ಯಾಂಕ್ ಉದ್ಯೋಗಿ ಹಾಗೂ ಕಾಣಿಕೆ ಎಣಿಕೆ ಸಿಬ್ಬಂದಿಯ ಉಸ್ತುವಾರಿ ವಹಿಸಿದ್ದ ಸುಭಾಷ್ ಶ್ರೀವಾಸ್ತವ ಹಾಗೂ ಹಣದ ರಸೀದಿಗಳನ್ನು ತಿರುಚಿರುವ ಆರೋಪ ಎದುರಿಸುತ್ತಿರುವ ಕರುಣೇಶ್ ಪಾಂಡೆ ಸೇರಿದ್ದಾರೆ.

ದೇಗುಲದ ಹುಂಡಿ ಹಣ ಎಣಿಸುವ ಹೊಣೆಯನ್ನು ಪ್ರಮುಖ ಬ್ಯಾಂಕೊಂದು ಹೊತ್ತುಕೊಂಡಿತ್ತು, ಇದಕ್ಕೆ ವಿವಿಧ ಏಜೆನ್ಸಿಗಳ ಮೂಲಕ ಜನರನ್ನು ನೇಮಕ ಮಾಡಿತ್ತು. ಇದೀಗ ಬಂಧಿತರ ಪೈಕಿ 6 ಜನರು ಇದೇ ಬ್ಯಾಂಕ್‌ನಿಂದ ನಿಯೋಜಿತರಾಗಿದ್ದರು. ಅವರಿಗೆ ಬ್ಯಾಂಕ್‌ ಮೂಲಕವೇ ವೇತನ ಪಾವತಿಯಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಇನ್ನು ತಿನ್ನು ಯಾದವ್‌ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ಮಾಜಿ ಕಾರು ಚಾಲಕ ಎಂದು ಖಚಿತವಾಗಿದೆ.

ಕಳವು ಹೇಗೆ?

1. ಹುಂಡಿ ತೆಗೆಯುವಾಗ ಅದರ ಬಳಿ ಸಿಸಿಟೀವಿಗೆ ಅಡ್ಡಲಾಗಿ ಒಬ್ಬ ನಿಂತರೆ ಮತ್ತೊಬ್ಬ ಹಣ ಎಗರಿಸುತ್ತಿದ್ದ

2. ನೋಟಿನ ಕಂತೆ ಹೆಚ್ಚುವರಿ ನೋಟು ಸೇರಿಸಿ, ಕಡಿಮೆ ಲೆಕ್ಕ ತೋರಿಸುತ್ತಿದ್ದರು. ಬಳಿಕ ಅದನ್ನು ಎಳೆದುಕೊಳ್ಳುತ್ತಿದ್ದರು

3. ಬೇರೆ ವಿಧಾನದಲ್ಲಿ ಕದ್ದ ಹಣವನ್ನು ದೇಗುಲದ ಶೌಚಾಲಯದೊಳಗೆ ಹಣ ಬಚ್ಚಿಟ್ಟು ಬಳಿಕ ಹಂಚಿಕೊಳ್ಳಲಾಗುತ್ತಿತ್ತು