ಸಾರಾಂಶ
ನವದೆಹಲಿ : ಕಾಯಂ ನೇಮಕಾತಿಗೂ ಮೊದಲೇ ಅಧಿಕಾರ ದುರ್ಬಳಕೆ ಮಾಡಿ ದರ್ಪ ಮೆರೆದಿದ್ದಲ್ಲದೆ, ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ನೇಮಕ ಆಗಿದ್ದಕ್ಕೆ ಸುದ್ದಿಯಾಗಿದ್ದ ಮಹಾರಾಷ್ಟ್ರದ ವಿವಾದಿತ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಕೊನೆಗೂ ವಜಾಗೊಳಿಸಿದೆ. ಅಲ್ಲದೆ, ಇನ್ನುಮುಂದೆ ಯುಪಿಎಸ್ಸಿಯ ಯಾವುದೇ ಪರೀಕ್ಷೆ ಬರೆಯುವುರಿಂದಲೂ ಅವರನ್ನು ಡಿಬಾರ್ ಮಾಡಿದೆ.
‘ಪೂಜಾ ಖೇಡ್ಕರ್ ನಕಲಿ ದಾಖಲೆಗಳನ್ನು ನೀಡಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಅಕ್ರಮವಾಗಿ ಆಯ್ಕೆಯಾಗಿರುವುದು ಸಾಬೀತಾಗಿದೆ. ಹೀಗಾಗಿ ಅವರ ಪರೀಕ್ಷಾ ಅಭ್ಯರ್ಥಿತ್ವವನ್ನು ನಾಗರಿಕ ಸೇವೆಗಳ ಪರೀಕ್ಷೆ-2022 ಕಾಯ್ದೆಯನ್ವಯ ರದ್ದುಪಡಿಸಲಾಗಿದೆ. ಮುಂದಿನ ಎಲ್ಲಾ ಪರೀಕ್ಷೆಗಳು ಅಥವಾ ಆಯ್ಕೆಗಳಿಂದಲೂ ಡಿಬಾರ್ ಮಾಡಲಾಗಿದೆ’ ಎಂದು ಯುಪಿಎಸ್‌ಸಿ ಪ್ರಕಟಣೆ ತಿಳಿಸಿದೆ.
ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪರೀಕ್ಷೆ ಬರೆದಿದ್ದಕ್ಕೆ ವಿವರಣೆ ಕೇಳಿ ಜು.18ರಂದು ಪೂಜಾಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಜು.25ರೊಳಗೆ ಆಕೆ ವಿವರಣೆ ನೀಡಬೇಕಿತ್ತು. ಆದರೆ, ಅವರು ಅಗತ್ಯ ದಾಖಲೆಗಳನ್ನು ಲಗತ್ತಿಸಿ ವಿವರಣೆ ನೀಡಲು ಆ.4ರವರೆಗೆ ಸಮಯ ಕೇಳಿದ್ದರು. ಅವರಿಗೆ ಅಂತಿಮವಾಗಿ ಜು.30ರ ಮಧ್ಯಾಹ್ನ 3.30ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಕಾಲಮಿತಿಯಲ್ಲಿ ವಿವರಣೆ ನೀಡಲಿಲ್ಲ. ಹೀಗಾಗಿ ವಜಾಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಕಾಯಂ ನೇಮಕಾತಿಗೂ ಮೊದಲೇ ಕೆಂಪು ಗೂಟದ ಕಾರು ಬಳಕೆ, ಕಚೇರಿ ಇತ್ಯಾದಿ ಸೌಕರ್ಯಗಳನ್ನು ಕೇಳಿ ಪೂಜಾ ಸುದ್ದಿಯಾಗಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪವೂ ಅವರ ಮೇಲಿತ್ತು.