ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ 3 ಮಹತ್ವದ ಅಂಶಗಳ ಬಗ್ಗೆ ಕಾಯ್ದಿರಿಸಲಾಗಿರುವ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಹೊರಡಿಸಲಿದೆ.

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ 3 ಮಹತ್ವದ ಅಂಶಗಳ ಬಗ್ಗೆ ಕಾಯ್ದಿರಿಸಲಾಗಿರುವ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಹೊರಡಿಸಲಿದೆ. 

ವಕ್ಫ್‌ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು 3 ದಿನ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ। ಬಿ.ಆರ್‌. ಗವಾಯಿ ಅವರ ಪೀಠ, ಮೇ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದು ಪ್ರಮುಖವಾಗಿ 3 ಗೊಂದಲಗಳ ಕುರಿತಾಗಿದೆ. 

ಮೊದಲನೆಯದು, ವಕ್ಫ್‌ ಆಸ್ತಿಗಳ ಡಿನೋಟಿಫಿಕೇಷನ್‌ ಮಾಡಲು ಅವಕಾಶ ಇದೆಯೇ, ಇಲ್ಲವೇ ಎಂಬ ಬಗ್ಗೆ. ಎರಡನೆಯದು ಕೇಂದ್ರ ಹಾಗೂ ರಾಜ್ಯಗಳ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಒಳಗೊಳ್ಳುವಿಕೆ ಹಾಗೂ ಮೂರನೆಯದು ವಕ್ಫ್ ಆಸ್ತಿಯನ್ನು ಸರ್ಕಾರಿ ಭೂಮಿಯೇ ಎಂದು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದಾಗ, ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬ ನಿಬಂಧನೆಯ ಬಗ್ಗೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸುವ ನಿರೀಕ್ಷೆಯಿದೆ.