ಭಾರತಕ್ಕೆ ನಾವು ತಕ್ಕ ಪಾಠ ಕಲಿಸಬೇಕಿದೆ : ಟ್ರಂಪ್‌ ಆಪ್ತ

| N/A | Published : Sep 29 2025, 01:02 AM IST

ಸಾರಾಂಶ

ತೆರಿಗೆ ದಾಳಿಯ ಹೊರತಾಗಿಯೂ ತಗ್ಗಿ ಬಗ್ಗಿ ನಡೆಯದ ಭಾರತದ ವಿರುದ್ಧ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ವಾಣಿಜ್ಯ ಸಚಿವ ಹಾರ್ವರ್ಡ್‌ ಲುಟ್ನಿಕ್‌, ಭಾರತಕ್ಕೆ ನಾವು ಸೂಕ್ತ ಪಾಠ ಕಲಿಸಬೇಕಿದೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

 ವಾಷಿಂಗ್ಟನ್‌: ತೆರಿಗೆ ದಾಳಿಯ ಹೊರತಾಗಿಯೂ ತಗ್ಗಿ ಬಗ್ಗಿ ನಡೆಯದ ಭಾರತದ ವಿರುದ್ಧ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ವಾಣಿಜ್ಯ ಸಚಿವ ಹಾರ್ವರ್ಡ್‌ ಲುಟ್ನಿಕ್‌, ಭಾರತಕ್ಕೆ ನಾವು ಸೂಕ್ತ ಪಾಠ ಕಲಿಸಬೇಕಿದೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲುಟ್ನಿಕ್‌, ‘ವ್ಯಾಪಾರ ವಹಿವಾಟು ವಿಚಾರದಲ್ಲಿ ಭಾರತ, ಬ್ರೆಜಿಲ್‌, ಸ್ವಿಜರ್‌ಲೆಂಡ್‌ನಂಥ ಕೆಲ ದೇಶಗಳನ್ನು ನಾವು ಸರಿಮಾಡಬೇಕಿದೆ. ಈ ದೇಶಗಳು ತಮ್ಮ ಮಾರುಕಟ್ಟೆಯನ್ನು ಮುಕ್ತಗೊಳಿಸಬೇಕು. ಅಮೆರಿಕಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಬೇಕು ಹಾಗೂ ನಮ್ಮ ದೇಶದ ಹಿತಾಸಕ್ತಿಗೆ ಹಾನಿಯಾಗುವಂಥ ನೀತಿಗಳಿಂದ ದೂರವುಳಿಯಬೇಕು’ ಎಂದು ಆಗ್ರಹಿಸಿದ್ದಾರೆ.

ನ್ಯೂಸ್‌ನೇಷನ್‌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಸ್ವಿಜರ್‌ಲೆಂಡ್‌ನಂಥ ಸಣ್ಣ ದೇಶ ಕೂಡ ನಮ್ಮ ಜತೆಗೆ 354 ಕೋಟಿ ರು.ನಷ್ಟು ವ್ಯಾಪಾರ ಕೊರತೆ ಹೊಂದಿದೆ. ಸ್ವಿಜರ್‌ಲೆಂಡ್‌ ಶ್ರೀಮಂತ ಆಗಿದ್ದು ಯಾಕೆಂದರೆ ಆ ದೇಶ ಅಮೆರಿಕದಿಂದ ಖರೀದಿಸುವುದಕ್ಕಿಂತ 354 ಕೋಟಿ ರು.ನಷ್ಟು ಹೆಚ್ಚಿನ ವಸ್ತುಗಳನ್ನು ಅಮೆರಿಕಕ್ಕೆ ಮಾರಾಟ ಮಾಡುತ್ತಿದೆ ಎಂದರು.

ಇಂಥ ವ್ಯಾಪಾರ ಅಸಮತೋಲನಗಳನ್ನು ಸರಿ ಮಾಡಬೇಕಿದೆ. ಈ ವಿಚಾರಗಳು ಇತ್ಯರ್ಥ ಆಗುವ ವಿಶ್ವಾಸವಿದೆ. ಆದರೆ ಇದಕ್ಕೆ ಒಂದಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ಹಾಗೂ ಬ್ರೆಜಿಲ್‌ನಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ್ದಾರೆ. ಭಾರತ ಮತ್ತು ಬ್ರೆಜಿಲ್‌ ದೇಶಗಳು ತಮ್ಮ ವಸ್ತುಗಳನ್ನು ಅಮೆರಿಕದ ಗ್ರಾಹಕರಿಗೆ ಮಾರಾಟ ಮಾಡಬೇಕೆಂದಿದ್ದರೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಜತೆಗೆ ಸಹಕರಿಸಬೇಕು ಎಂದು ಲುಟ್ನಿಕ್‌ ತಿಳಿಸಿದರು.

Read more Articles on