ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ‘ಆಟಿದ ತಮ್ಮನ’ ಸಂಪನ್ನ

| Published : Aug 12 2024, 01:11 AM IST

ಸಾರಾಂಶ

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಆಶ್ರಯದಲ್ಲಿ ‘ಆಟಿದ ತಮ್ಮನ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪಡುಬಿದ್ರಿ

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಆಶ್ರಯದಲ್ಲಿ ಆಯೋಜಿಸಲಾದ ‘ಆಟಿದ ತಮ್ಮನ’ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬಹುತೇಕ ಜನತೆಯ ಅವಲಂಬಿತ ವೃತ್ತಿ ಕೃಷಿ, ಕಾಂಗ್ರೆಸ್ ಸರ್ಕಾರ ಕೃಷಿಗೆ, ಕೃಷಿಗೆ ಒತ್ತು ನೀಡುತ್ತಿದೆ. ನನ್ನದೆಂಬುದು ಏನಿಲ್ಲ ಎಂದು ಜನತೆ ಸಂಕಷ್ಟದಲ್ಲಿದ್ದಾಗ ಉಳುವವನೇ ಹೊಲದೊಡೆಯ ಕಾನೂನು ಮೂಲಕ ಕಾಂಗ್ರೆಸ್ ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಮಹಿಳೆಯರ ಬದುಕು, ಮನೆ ಬೆಳಗಲು ಸಹಾಯ ಮಾಡಿದೆ ಎಂದರು.

ಜನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ, ಬಡತನದಲ್ಲೂ ಆಟಿಯ ಕಾಲದಲ್ಲಿ ಕೂಡು ಕುಟುಂಬದ ಹಸಿವನ್ನು ನುಂಗಿ ಬದುಕಿದ ಅಂದಿನ ನಮ್ಮ ಹಿರಿಯ ನೆನಪು ನಮಗಿರಬೇಕು. ಇಂದಿನ ರಾಸಾಯನಿಕಯುಕ್ತ ಆಹಾರದಿಂದ ನಗುತ್ತಿರುವ ನಮಗೆ, ಆಟಿಯ ಖಾದ್ಯಗಳ ಸೇವನೆ ಔಷಧಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೊಯುದ್ದೀನ್ ಪಡುಬಿದ್ರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಚಲನಚಿತ್ರ, ರಂಗಭೂಮಿ ಕಲಾವಿದ ಶಶಿಧರ್ ಗುಜರನ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಂಚಿನಡ್ಕ, ಪೌರ ಕಾರ್ಮಿಕರಾದ ಪ್ರಸಾದ್ ಕಂಚಿನಡ್ಕ, ಶಶಿಕುಮಾರ್ ಬೆಳಪು ಅವರನ್ನು ಸನ್ಮಾನಿಸಲಾಯಿತು.

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಪಕ್ಕಾಲು, ಕೆಎಂಎಫ್ ನಿರ್ದೇಶಕ ದಿವಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ. ಸುಕುಮಾರ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಿತ ಡ್ಯಾಝ್ಲ್ ಸ್ಟುಡಿಯೋ ನೃತ್ಯ ತಂಡದಿಂದ ನೃತ್ಯೋತ್ಸವ ವೈಭವದ ಜೊತೆಗೆ ಆಟಿದ ತಮ್ಮನ ಸಾಮೂಹಿಕ ಭೋಜನ ನಡೆಯಿತು.