‘ಆರೆಸ್ಸೆಸ್ಸಲ್ಲಿ ಸರ್ಕಾರಿ ನೌಕರರ ಭಾಗಿ ನಿಷೇಧಿಸಿ’

| Published : Oct 17 2025, 01:00 AM IST

ಸಾರಾಂಶ

ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ ನಿಷೇಧಿಸಬೇಕೆಂದು ಕೋರಿ ಬರೆದ ಪತ್ರಕ್ಕೆ ಬೆದರಿಕೆ ಕರೆಗಳು ಬಂದ ನಡುವೆಯೇ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೆಸ್ಸೆಸ್‌ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ ನಿಷೇಧಿಸಬೇಕೆಂದು ಕೋರಿ ಬರೆದ ಪತ್ರಕ್ಕೆ ಬೆದರಿಕೆ ಕರೆಗಳು ಬಂದ ನಡುವೆಯೇ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೆಸ್ಸೆಸ್‌ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಸರ್ಕಾರಿ ಅಧಿಕಾರಿಗಳು, ನೌಕರರು ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿ ಅವರಿಗೆ ಪತ್ತೊಂದು ಪತ್ರ ಬರೆದಿದ್ದಾರೆ. ಅ.13ರಂದು ಈ ಪತ್ರ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪತ್ರದಲ್ಲೇನಿದೆ?:

ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು-2021ರ ಪ್ರಕಾರ ಯಾರೇ ಸರ್ಕಾರಿ ನೌಕರ, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ-ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ ಹಾಗೂ ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ಆರೆಸ್ಸೆಸ್‌ ಹಾಗೂ ಇತರೆ ಸಂಘ-ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಸಚಿವರು ಕೋರಿದ್ದಾರೆ.

ಆರೆಸ್ಸೆಸ್‌ ಚಟುವಟಿಕೆ ನಿಬಂಧಿಸುವಂತೆ ಕೋರಿ ಅ.4ರಂದು ಬರೆದ ಪತ್ರ ಬಹಿರಂಗವಾದ ಬಳಿಕ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಕೆರೆಗಳು ಬಂದಿದ್ದವು. ಈ ಸಂಬಂಧ ಅವರು ದಾಖಲಿಸಿದ ದೂರಿನ ಮೇಲೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ರಾಜ್ಯ ಪೊಲೀಸರು ಬಂಧಿಸಿದ್ದಾರೆ.