ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಯಾವುದೇ ಖಾಸಗಿ ಸಂಘ-ಸಂಸ್ಥೆ ಅಥವಾ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ, ಚಟುವಟಿಕೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.
ಅನುಮತಿ ಪಡೆಯದೆ ಚಟುವಟಿಕೆ ನಡೆಸಿದರೆ ಅತಿಕ್ರಮ ಪ್ರವೇಶದಡಿ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತನ್ಮೂಲಕ ಸರ್ಕಾರಿ ಶಾಲಾ ಆವರಣ, ಮೈದಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿ ವಿವಿಧ ಸಂಘ-ಸಂಸ್ಥೆಗಳ ಚಟುವಟಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ‘ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಇದೇ ವೇಳೆ ಸಂಘ-ಸಂಸ್ಥೆಗಳು ನಡೆಸಲು ಉದ್ದೇಶಿಸಿರುವ ಯಾವುದೇ ಚಟುವಟಿಕೆಯಿಂದ ಸಾರ್ವಜನಿಕರಿಗೆ ಅನಾನುಕೂಲ, ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವಂತಿದ್ದರೆ ಅನುಮತಿ ನೀಡುವಂತಿಲ್ಲ’ ಎಂದು ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ವಿವರವಾದ ಮಾರ್ಗಸೂಚಿಯೊಂದಿಗೆ ಸರ್ಕಾರಿ ಆದೇಶ ಹೊರಡಿಸಬೇಕು. ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ಧವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಪುಟ ನಿರ್ಣಯ ಮಾಡಿದೆ.
ಪೂರ್ವಾನುಮತಿ ಅಗತ್ಯ:
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ಅಥವಾ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನ, ಆಟದ ಮೈದಾನ, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ ಅಥವಾ ಜಾಗಗಳಲ್ಲಿ ಪೂರ್ವಾನುಮತಿ ಇಲ್ಲದೆ ಯಾವುದೇ ಖಾಸಗಿ ಸಂಘ, ಸಂಸ್ಥೆಯು ಚಟುವಟಿಕೆ ನಡೆಸುವಂತಿಲ್ಲ. ಕೆಲ ಸಂಘಟನೆಗಳ ಚಟುವಟಿಕೆಗಳಿಂದ ಸಾರ್ವಜನಿಕ ಸ್ಥಳಗಳನ್ನು ಸಾರ್ವಜನಿಕರು ಬಳಸಲು ಅಡಚಣೆ ಉಂಟಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಗೊಂದಲ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅನುಮತಿ ಇಲ್ಲದೆ ಚಟುವಟಿಕೆ ಅತಿಕ್ರಮ ಪ್ರವೇಶ:
ರಾಜ್ಯದಲ್ಲಿ ಹಲವು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆ, ಪ್ರಚಾರ, ತರಬೇತಿ, ಉತ್ಸವ, ಸದಸ್ಯರ ಮತ್ತು ಬೆಂಬಲಿಗರ ಸಭೆಗಳನ್ನು ಸಂಬಂಧಪಟ್ಟ ಸಂಸ್ಥೆ, ಪ್ರಾಧಿಕಾರದಿಂದ ಅನುಮತಿ ಪಡೆಯದೆ ಮಾಡುತ್ತಿದ್ದಾರೆ. ಈ ರೀತಿ ಸಾರ್ವಜನಿಕ ಸ್ಥಳ, ಆಸ್ತಿ, ಜಮೀನು, ಆಟದ ಮೈದಾನ, ಸಾರ್ವಜನಿಕ ರಸ್ತೆ ಬಳಸಿಕೊಳ್ಳುವುದು ಅತಿಕ್ರಮ ಅಥವಾ ಅಕ್ರಮ ಪ್ರವೇಶ ಎಂದು ಪರಿಗಣಿಸಲ್ಪಡುತ್ತವೆ. ಇದು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟು ಮಾಡುತ್ತವೆ. ಹೀಗಾಗಿ ಯಾವುದೇ ಸಂಘಟನೆ, ಸಂಘ-ಸಂಸ್ಥೆಗಳು ಆಯಾ ಸಾರ್ವಜನಿಕ ಆಸ್ತಿ ಅಥವಾ ಸ್ಥಳದ ಮಾಲೀಕತ್ವ ಹೊಂದಿರುವ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಯಾವ ಸ್ಥಳದ ಬಗ್ಗೆ ಯಾರಿಂದ ಅನುಮತಿ?1- ಸರ್ಕಾರಿ, ಸರ್ಕಾರಿ ಸ್ವಾಮ್ಯದ ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳ ಆವರಣ: ಉನ್ನತ ಶಿಕ್ಷಣ ಇಲಾಖೆ, ಶಾಲಾ ಮತ್ತು ಸಾಕ್ಷರತಾ ಇಲಾಖೆ.
2- ಉದ್ಯಾನವನ, ಆಟದ ಮೈದಾನ, ಇತರೆ ತೆರೆದ ಸ್ಥಳಗಳು: ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ.
3- ಸಾರ್ವಜನಿಕ ರಸ್ತೆ, ಸರ್ಕಾರದ ಇತರೆ ಆಸ್ತಿ, ಸ್ಥಳಗಳು: ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ಅಧೀಕ್ಷಕರು.--
ಆರ್‌ಎಸ್‌ಎಸ್ ಅಥವಾ ಯಾವುದೇ ಸಂಘಟನೆಯನ್ನುದ್ದೇಶಿಸಿ ಸಂಪುಟ ನಿರ್ಣಯ ತೆಗೆದುಕೊಂಡಿಲ್ಲ. ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ, ಇತ್ತೀಚಿನ ಬೆಳವಣಿಗೆ ಆಧಾರದ ಮೇಲೆ ಅನುಮತಿ ಪಡೆದು ಚಟುವಟಿಕೆ ನಡೆಸುವಂತೆ ತಿಳಿಸಲಾಗಿದೆ. ಇದು ಸಾರ್ವಜನಿಕ ಹಿತದೃಷ್ಟಿಯ ತೀರ್ಮಾನ.
- ಎಚ್.ಕೆ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು
ನಿಷೇಧವಲ್ಲ, ನಿರ್ಬಂಧ ಮಾತ್ರ
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ತಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಕೇಂದ್ರದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದ್ದವು. ಆದರೆ ಆ ಎಲ್ಲ ಪ್ರಕರಣದಲ್ಲಿ ಆರ್‌ಎಸ್‌ಎಸ್ ಅಪರಾಧಿಯೆಂದು ಸಾಬೀತಾಗದ ಕಾರಣದಿಂದ ಸಂಘಟನೆಯ ಮೇಲಿನ ನಿಷೇಧ ಹಿಂಪಡೆಯಲಾಗಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಣಯವು ಸಂಘಟನೆಯ ಯಾವುದೇ ಕಾರ್ಯ ಚಟುವಟಿಕೆ ಮೇಲೆ ನಿಷೇಧದಂತಲ್ಲ. ಮುಂದೆ ರೂಪಿಸಲಿರುವ ನಿಯಮಗಳ ಪ್ರಕಾರ ಚಟುವಟಿಕೆಗೆ ಪೂರ್ವಾನುಮತಿ ಕಡ್ಡಾಯ ಅಷ್ಟೇ ಎಂದು ತಿಳಿದುಬಂದಿದೆ.
ಸರ್ಕಾರಿ ನೌಕರರನ್ನೂ
ನಿಯಂತ್ರಿಸುವ ಬಗ್ಗೆ ಚರ್ಚೆ
ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಕೋರಿಯೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರವೂ ಸಂಪುಟದಲ್ಲಿ ಚರ್ಚೆ ಆಗಿದೆ. ಆದರೆ ಈ ಕುರಿತು ಈಗಾಗಲೇ ನಿಯಮಗಳು ಇರುವುದರಿಂದ ಯಾವುದೇ ಪ್ರತ್ಯೇಕ ತೀರ್ಮಾನ ಮಾಡಿಲ್ಲ ಎನ್ನಲಾಗಿದೆ.ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು-2021ರ ನಿಯಮ 5(1) ಪ್ರಕಾರ ಯಾವುದೇ ಸರ್ಕಾರಿ ನೌಕರ, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ-ಸಂಸ್ಥೆಯ ಸದಸ್ಯನಾಗಿರಬಾರದು. ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರಬಾರದು. ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂಬ ನಿಯಮವಿದೆ. ಇದರಡಿ ನಿಯಂತ್ರಣ ಮಾಡಬಹುದು ಎಂದು ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಇದರ ನಡುವೆ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರನ್ನು ನಿಯಂತ್ರಿಸುವಂತಿಲ್ಲ ಎಂಬ 2024ರ ಕೇಂದ್ರ ಸರ್ಕಾರದ ಆದೇಶದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ ಅನ್ವಯ?
ಸರ್ಕಾರ, ನಿಗಮ, ಮಂಡಳಿ, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನ, ಆಟದ ಮೈದಾನ, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ ಅಥವಾ ಜಾಗಗಳಿಗೆ ಅನ್ವಯ
ಸರ್ಕಾರಿ ನೌಕರರಆರೆಸ್ಸೆಸ್ ಕೆಲಸನಿಷೇಧಿಸಿ: ಸಿಎಂಗೆಪ್ರಿಯಾಂಕ್ ಪತ್ರಬೆಂಗಳೂರು: ಸರ್ಕಾರಿ ಅಧಿಕಾರಿಗಳು, ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ ಬರೆದಿದ್ದಾರೆ.