ಸಾಹಿತ್ಯ ಜನಸಾಮಾನ್ಯರ ಬದುಕಿಗೆ ತಲುಪಬೇಕಾದರೆ ಅದು ಹಾಡಾಗಿ ಹೊರಹೊಮ್ಮಬೇಕು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಮಾತು ಜನಪದದ ಶಕ್ತಿಯನ್ನು ಹೇಳುತ್ತದೆ. ೧೨ನೇ ಶತಮಾನದಲ್ಲಿ ಶರಣರು ತಮ್ಮ ಸಮಾಜ ಸುಧಾರಣೆಯ ವಿಚಾರಗಳನ್ನು ವಚನಗಳ ಮೂಲಕ ಹಾಡಿ ಜನರಿಗೆ ಮುಟ್ಟಿಸಿದರು. ಇಡೀ ವಚನ ಚಳವಳಿಯೇ ತತ್ವಪದದ ರೂಪದಲ್ಲಿದೆ. ಜಾನಪದದಲ್ಲಿ ೧೩೮ಕ್ಕೂ ಹೆಚ್ಚು ಪ್ರಕಾರಗಳಿದ್ದು, ಸಮಾಜದ ಆರೋಗ್ಯ ಕಾಪಾಡಲು ಬೇಕಾದ ಎಲ್ಲಾ ವಿಚಾರಗಳು ಹಾಡುಗಳ ಮೂಲಕ ಜನರಿಗೆ ತಲುಪಿವೆ ಎಂದು ನಾಡಿನ ಸುಪ್ರಸಿದ್ಧ ಜಾನಪದ ಕಲಾವಿದ ಡಾ. ಪಿಚ್ಚಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನ
ಹಾಡು, ವಚನ, ತತ್ವಪದ, ಬೀದಿನಾಟಕ, ಹೋರಾಟದ ಗೀತೆ ಈ ಎಲ್ಲವೂ ಜನರ ಬದುಕಿನಿಂದಲೇ ಹುಟ್ಟಿದ ಸಾಹಿತ್ಯ ರೂಪಗಳು. ಅವುಗಳ ತಾಯಿ ಬೇರು ಜಾನಪದವೇ ಎಂದು ನಾಡಿನ ಸುಪ್ರಸಿದ್ಧ ಜಾನಪದ ಕಲಾವಿದ ಡಾ. ಪಿಚ್ಚಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಜನಸಾಮಾನ್ಯರ ಬದುಕಿಗೆ ತಲುಪಬೇಕಾದರೆ ಅದು ಹಾಡಾಗಿ ಹೊರಹೊಮ್ಮಬೇಕು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಮಾತು ಜನಪದದ ಶಕ್ತಿಯನ್ನು ಹೇಳುತ್ತದೆ. ೧೨ನೇ ಶತಮಾನದಲ್ಲಿ ಶರಣರು ತಮ್ಮ ಸಮಾಜ ಸುಧಾರಣೆಯ ವಿಚಾರಗಳನ್ನು ವಚನಗಳ ಮೂಲಕ ಹಾಡಿ ಜನರಿಗೆ ಮುಟ್ಟಿಸಿದರು. ಇಡೀ ವಚನ ಚಳವಳಿಯೇ ತತ್ವಪದದ ರೂಪದಲ್ಲಿದೆ. ಜಾನಪದದಲ್ಲಿ ೧೩೮ಕ್ಕೂ ಹೆಚ್ಚು ಪ್ರಕಾರಗಳಿದ್ದು, ಸಮಾಜದ ಆರೋಗ್ಯ ಕಾಪಾಡಲು ಬೇಕಾದ ಎಲ್ಲಾ ವಿಚಾರಗಳು ಹಾಡುಗಳ ಮೂಲಕ ಜನರಿಗೆ ತಲುಪಿವೆ ಎಂದರು. ಸಾಕ್ಷರತೆ, ಪರಿಸರ ಸಂರಕ್ಷಣೆ, ರೈತ ಚಳುವಳಿ, ಮಹಿಳಾ ಸಬಲೀಕರಣ, ಹೋರಾಟದ ಗೀತೆಗಳು, ಕನ್ನಡದ ಕುರಿತ ಚಿಂತನೆ ಈ ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಜಾನಪದವೇ ಮೂಲ ಎಂದು ಅವರು ಹೇಳಿದರು.
ಸಿನಿಮಾ ಹಾಡು ಬರೆಯುವುದು ಸುಲಭವಾದರೂ, ಸಾಮಾಜಿಕ ಚಳವಳಿಗೆ ಸಂಬಂಧಿಸಿದ ಹಾಡು ಬರೆಯುವುದು ಸುಲಭದ ಕೆಲಸವಲ್ಲ ಎಂಬ ಮಾತುಗಳಿಗೆ ಸಭಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಜಾನಪದದಿಂದಲೇ ಬಂದ ಮನುಷ್ಯ ಗ್ಯಾರಂಟಿ ರಾಮಣ್ಣ ಎಂದು ಶ್ಲಾಘಿಸಿದ ಅವರು, ಯಾವುದೇ ವಿಚಾರ ಅಥವಾ ಪ್ರಕಾರವನ್ನು ತೆಗೆದುಕೊಂಡರೂ ತಮ್ಮತನವನ್ನು ಅದರಲ್ಲಿ ದಾಖಲಿಸುವ ಶಕ್ತಿ ರಾಮಣ್ಣನವರಿಗೆ ಇದೆ ಎಂದು ಹೇಳಿದರು. ಅವರು ಬರೆಯದಿರುವ ಸಾಹಿತ್ಯ ಪ್ರಕಾರವೇ ಇಲ್ಲ ಎನ್ನುವುದು ಅತಿಶಯೋಕ್ತಿಯಲ್ಲ ಎಂದು ಹೇಳಿದರು.ಸಮ್ಮೇಳನದ ಅಧ್ಯಕ್ಷರಾದ ಜಾನಪದ ಸಾಹಿತಿ ಗ್ಯಾರಂಟಿ ರಾಮಣ್ಣ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಜೀವನ ಪಯಣವನ್ನು ಹೃದಯಸ್ಪರ್ಶಿಯಾಗಿ ಮಾತನಾಡಿ, ೧೯೭೫ರಲ್ಲಿ ಬಡತನದ ಕಾರಣದಿಂದ ಪಿಯುಸಿ ಶಿಕ್ಷಣದ ನಂತರ ವಿದ್ಯಾಭ್ಯಾಸ ಮುಂದುವರಿಸಲಾಗದೆ, ತಂದೆಯೊಂದಿಗೆ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ರಾತ್ರಿ ಕುರಿ ದೊಡ್ಡಿಯಲ್ಲಿ ಹಾಡುತ್ತಿದ್ದ ಭಜನೆಗಳು ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರು.ಅಂದು ಪ್ರಾರಂಭವಾದ ಜನಪದ ಪಯಣ ಕಳೆದ ೫೫ ವರ್ಷಗಳಿಂದ ನಿಂತ ನೀರಾಗದೆ ಹರಿಯುತ್ತಿದ್ದು, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದವರೆಗೂ ತಮ್ಮನ್ನು ಪರಿಚಯಿಸಿದೆ ಎಂದು ಹೇಳಿದರು. ಈ ಪಯಣದಲ್ಲಿ ಜನಪರ ಸಂಘಟನೆಗಳು ನೀಡಿದ ಪ್ರೇರಣೆಗೆ ನಮನ ಸಲ್ಲಿಸಿದರು. ಇದುವರೆಗೆ ಶಿಕ್ಷಣ, ಸಾಕ್ಷರತೆ, ಪರಿಸರ, ಮಹಿಳಾ ಸಬಲೀಕರಣ, ಜಾಗೃತಿ ಮತ್ತು ಹೋರಾಟದ ವಿಷಯಗಳ ಕುರಿತು ೧೮೦೦ಕ್ಕೂ ಹೆಚ್ಚು ಹಾಡುಗಳು, ೭೩ ನಾಟಕಗಳು, ೧೫೦ ಬೀದಿ ನಾಟಕಗಳು, ೮೦ ಕವನಗಳು, ೨೦ ಪುಸ್ತಕಗಳ ರಚಿಸಿ ಈ ನಾಡಿಗೆ ಸಮರ್ಪಿಸಿದ್ದೇನೆ ಎಂದು ಹೇಳಿದರು. ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕದೇ ಇದ್ದರೂ ಸರ್ಕಾರವೇ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೨೬ಕ್ಕೂ ಹೆಚ್ಚು ಗೌರವಗಳು ಲಭಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಈ ವೇದಿಕೆಯು ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯ ಹಾಗೂ ವಿದೇಶದಲ್ಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಶರಣರ ತತ್ವಪದಗಳು ಇಂದಿಗೂ ಜೀವಂತವಾಗಿದ್ದು, ಗ್ಯಾರಂಟಿ ರಾಮಣ್ಣನವರ ಹಾಡುಗಳು ಜನಮನದಲ್ಲಿ ನೆಲೆಸಿವೆ ಎಂದರು. ಎಲ್ಲಾ ಸಮಾನ ಮನಸ್ಕರು ಸೇರಿ ಇಂತಹ ಕಾರ್ಯಕ್ರಮ ಏರ್ಪಡಿಸಿಕೊಂಡು ಬರಲಾಗುತ್ತಿದೆ. ಶರಣರ ತತ್ವಪದ ಹಿಂದಿಗೂ ಅದು ಜೀವಂತವಾಗಿದೆ. ಸಾಹಿತ್ಯ ಎನ್ನುವ ವೇದಿಕೆಯಲ್ಲಿ ಅನೇಕ ಸಾಹಿತ್ಯಪರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಗ್ಯಾರಂಟಿ ರಾಮಣ್ಣನವರ ಹಾಡನ್ನು ಬಹುತೇಕರು ಕೇಳಿದ್ದೇವೆ. ಅವರೆ ಬರೆದ ಅನೇಕ ಸಾಹಿತ್ಯದ ಹಾಡುಗಳು ಇಂದಿಗೂ ಕೂಡ ಪ್ರಚಲಿತದಲ್ಲಿದೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ಗ್ಯಾರಂಟಿ ರಾಮಣ್ಣ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ದ್ವಾರದಿಂದ ಕಾಲ್ನಡಿಗೆ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಮಹಾಕವಿ ಕುವೆಂಪು ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಅರಕಲಗೂಡು ತಾಲೂಕಿನ ಗಂಜಲಗೂಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಕಂಸಾಳೆ ನೃತ್ಯ, ತತ್ವಪದ ಹಾಗೂ ಜಾನಪದ ಹಾಡುಗಳು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು. ನಂತರ “ಜಾನಪದಕ್ಕೊಂದು ಕಾವ್ಯಗನ್ನಡಿ” ಎಂಬ ಸಾಹಿತ್ಯ ಗೋಷ್ಠಿ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಸಾಹಿತಿ ಶೈಲಜಾ ಹಾಸನ್, ಸಾಹಿತಿ ಹಾಗೂ ಪತ್ರಕರ್ತ ಹೆತ್ತೂರು ನಾಗರಾಜು, ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಪ್ರಸಾದ್ ರಕ್ಷಿದಿ, ಸಾಹಿತಿ ನಾಗರಾಜು ದೊಡ್ಡಮನೆ, ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ತಾಲೂಕು ಕಾರ್ಯದರ್ಶಿ ಸಿ.ಎನ್. ಲೀಲಾವತಿ ಇತರರು ಉಪಸ್ಥಿತರಿದ್ದರು.