ಕಡೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 6 ಮತ್ತು7ನೇ ವೇತನ ಆಯೋಗವನ್ನು ಜಾರಿ ಮಾಡುವ ಮೂಲಕ ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಕಡೂರು ತಾಲೂಕು ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಕಡೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 6 ಮತ್ತು7ನೇ ವೇತನ ಆಯೋಗವನ್ನು ಜಾರಿ ಮಾಡುವ ಮೂಲಕ ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು,

ಭಾನುವಾರ ತಾಲೂಕಿನ ಮಲ್ಲೇಶ್ವರದ ಶ್ರೀಸ್ವರ್ಣಾಂಬ ದೇವಾಲಯದ ಆವರಣದಲ್ಲಿ ಕಡೂರು ತಾಲೂಕು ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ನೌಕರರ ನಿರೀಕ್ಷೆಗೂ ಮೀರಿ ತ್ವರಿತವಾಗಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಿದೆ. ಅನುಷ್ಠಾನಕ್ಕಾಗಿ ಎಷ್ಟೇ ಹೊರೆ ಯಾಗಿದ್ದರೂ ₹21ಸಾವಿರ ಕೋಟಿ ಮಂಜೂರಾತಿ ನೀಡಿದೆ. ಅಲ್ಲದೆ ಸಂಕಷ್ಟದಲ್ಲಿದ್ದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮೂಲಕ ನೇರವಾಗಿ ವಿಮಾ ಹಣ ಚಿಕಿತ್ಸೆಗೆಂದು ಮಂಜೂರಾಗುವಂತೆ ಮಾಡಿ ನೌಕರರ ಬಗ್ಗೆ ತನಗಿರುವ ತನ್ನ ಬದ್ಧತೆ ಪ್ರದರ್ಶಿಸಿದೆ. ನೌಕರರು ಮನಸ್ಸು ಮಾಡಿದರೆ ಸರ್ಕಾರವನ್ನೂ ಎದುರು ಹಾಕಿಕೊಂಡು ತೀರ್ಮಾನ ಕೈಗೊಳ್ಳಬಲ್ಲರು. ಇದಕ್ಕೆ ಮುಖ್ಯಮಂತ್ರಿಗಳೆ ಉದಾಹರಣೆಯಾಗಿದ್ದಾರೆ.

ನಿಮ್ಮ ಕ್ರಿಯಾಶೀಲತೆಯಿಂದಲೇ ಸರ್ಕಾರಗಳು ಒಳ್ಳೆಯ ಅಥವಾ ಕೆಟ್ಟ ಹೆಸರು ಗಳಿಸುವಂತಾಗುತ್ತದೆ. ಆದ್ದರಿಂದ ನೌಕರರ ಸಂಘ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲು ಸ್ಫೂರ್ತಿದಾಯಕವಾಗಿ ಶ್ರಮಿಸಬೇಕು. ನಿಮ್ಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುವುದು ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮವಾಗಲಿ ಎಂದು ಹೇಳಿ ಶುಭ ಹಾರೈಸಿದರು.ಉಪನ್ಯಾಸ ನೀಡಿದ ಅಜ್ಜಂಪುರ ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಈ.ಶಿವಕುಮಾರ್, ತ್ಯಾಗ, ಛಲ ಮತ್ತು ಪ್ರೇರಣೆಗಳು ಸಾಧನೆಗೆ ದಾರಿಯಾಗಿದ್ದು ಪೋಷಕರೇ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಸಾಧನೆ ಮತ್ತು ಪ್ರತಿಭೆಗಳು ಗುರುತಿಸಿದರೆ ಮಾತ್ರ ಬೆಳಕಿಗೆ ಬರುತ್ತವೆ. ಗುರುತಿಸುವಿಕೆ ಸಾಧಕನಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತದೆ. ಮಕ್ಕಳು ಸುಟ್ಟಿರದ ಮಡಕೆಯಾಗಿದ್ದು ಶಿಕ್ಷಕರು ಮಕ್ಕಳನ್ನು ಬಾಳಿಕೆ ಬರುವ ಮಡಕೆಯಾಗಿ ರೂಪಿಸಬೇಕು. ನಮ್ಮ ಮಕ್ಕಳ ಮುಂದೆ ಸವಾಲು, ಪೈಪೋಟಿ ಇದ್ದು ಅವುಗಳನ್ನು ನಿಭಾಯಿಸಿ ಆಶಾಜೀವಿಯಾಗಿ ಬದುಕುವಂತೆ ಮತ್ತು ರಾಷ್ಟ್ರದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತವೆ ಎನ್ನುವ ನುಡಿಗೆ ತಕ್ಕಂತೆ ಬಾಳಬೇಕು ಎಂದು ಕರೆ ನೀಡಿದರು. ಕಡೂರು ಬಿಇಒ ಎಂ.ಎಚ್.ತಿಮ್ಮಯ್ಯ ಮಾತನಾಡಿ, ಸರ್ಕಾರಿ ನೌಕರರು ತಲ್ಲಣಗಳ ನಡುವೆ ಕೆಲಸ ನಿರ್ವಹಿಸುವಂತಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಆದ್ದರಿಂದ ನಮ್ಮ ವೃತ್ತಿ ಇಷ್ಟಪಟ್ಟು, ಪ್ರೀತಿಸಿ ನಿರ್ವಹಿಸಿದರೆ ನಮಗೆ ಶ್ರಮವೂ ಆಗದು, ನಮ್ಮ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತಿದೆ. ಏಕೆಂದರೆ ಅವರಿಗೆ ಪೋಷಕರು ಎದುರಿಸುವ ಸಮಸ್ಯೆಗಳ ಅರಿವಿಲ್ಲ. ಅವರ ವೈಫಲ್ಯ ತಡೆಗಟ್ಟಲು ಬಾಂಧವ್ಯ ಗಟ್ಟಿಗೊಳಿಸುವ, ಮೌಲ್ಯ ಬೆಳೆಸುವ ಮೂಲಕ ಪೋಷಕರು ಅವರಿಗೆ ಕುಟುಂಬದ ಎಲ್ಲ ವಿಷಯಗಳ ಅರಿವು ಇರುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಸರ್ಕಾರಿ ನೌಕರರ ಸಂಘ ನೌಕರರ ಹಿತ ಕಾಯುವಲ್ಲಿ ಬದ್ಧವಾಗಿದ್ದು ಸಮಾಜಮುಖಿಯಾಗಿಯೂ ಕೆಲಸ ನಿರ್ವಹಿಸುತ್ತಿದೆ. ನಿರ್ದೇಶಕರು ಮತ್ತು ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಲಹೆ, ಮಾರ್ಗದರ್ಶನ ನೀಡಬೇಕು. ಕಡೂರಿನ ಸರ್ಕಾರಿ ನೌಕರರ ಸಂಘದ ಕಟ್ಟಡ ಸೋರುವಂತಾಗಿದ್ದು, ರಕ್ಷಣೆಗಾಗಿ ಮೇಲ್ಭಾಗದಲ್ಲಿ ಶೀಟ್ ಅಳವಡಿಸಲು ಶಾಸಕರು ಕನಿಷ್ಠ ₹10 ಲಕ್ಷ ಅನುದಾನ ಮಂಜೂರು ಮಾಡಿಕೊಡಬೇಕು. ಗುರುಭವನಕ್ಕಾಗಿ ₹20 ಲಕ್ಷ ಅನುದಾನ ಮಂಜೂರು ಮಾಡಿಕೊಟ್ಟಿದ್ದು, ಇನ್ನೂ₹ 2ಕೋಟಿ ಅನುದಾನ ಹಾಕಿಸಿಕೊಡುವ ಭರವಸೆ ಬೇಗ ನೆರವೇರಿಸಬೇಕು ಎಂದು ಮನವಿ ಮಾಡಿದರು. 2024-25ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಶೇ.90 ಹಾಗೂ ಅಧಿಕ ಅಂಕ ಗಳಿಸಿದ್ದ 80 ಕ್ಕೂ ಹೆಚ್ಚು ಸರ್ಕಾರಿ ನೌಕರರ ಮಕ್ಕಳ ಪರವಾಗಿ ಬಹುತೇಕ ಪೋಷಕರೇ ಪುರಸ್ಕಾರ ಸ್ವೀಕರಿಸಿದರು. ಕೇರಂ, ಉದ್ದಜಿಗಿತ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸರ್ಕಾರಿ ಶಾಲೆಗಳ ಮಕ್ಕಳಾದ ಪೂರ್ವಿಕಾ, ವರ್ಷಾ, ಉಮಾ, ಧನ್ಯಶ್ರೀ ಮತ್ತು ಕೀರ್ತಿಶಂಕರ್ ಗೆ ತಲಾ ಐದು ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಬೀರೂರು ಬಿಇಒ ಬಹರುದ್ದೀನ್ ಚೋಪ್ದಾರ್, ರಾಜ್ಯ ಪರಿಷತ್ ಸದಸ್ಯ ಸುರೇಶ್, ಸಂಘದ ನಿರ್ದೇಶಕ ಮತ್ತು ಸದಸ್ಯರಾದ ರುದ್ರೇಶ್, ರಾಜಶೇಖರ್, ಅಶೋಕ್, ಶಶಿಕಲಾ, ರಾಜು.ಎಸ್.ವಡೆಯರ್, ಬಿ.ಜೆ.ಜಗದೀಶ್, ಕೆ.ಆರ್.ಸುರೇಶ್, ಎನ್.ಎಸ್. ದೇವರಾಜ್, ಕವನಾ, ಅರಣ್ಯಾಧಿಕಾರಿ ಹರೀಶ್, ಬಿಸಿಎಂ ಅಧಿಕಾರಿ ದೇವರಾಜ್ , ಶಿಕ್ಷಕರ ಸಂಘದ ಹರೀಶ್, ಬಸಪ್ಪ, ಮುರಳೀಧರ್, ಪ್ರಶಾಂತ್, ಉಪನ್ಯಾಸಕರ ಸಂಘದ ಜ್ಞಾನೇಶ್, ಸದಸ್ಯರು, ಪೋಷಕರು, ಮಕ್ಕಳು ಮತ್ತಿತರರು ಇದ್ದರು. 14ಕೆಕೆಡಿಯು1.

ಕಡೂರು ತಾಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಾಲಯದ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ಮಕ್ಕಳ ಪರವಾಗಿ ಪೋಷಕರು ಪುರಸ್ಕಾರ ಸ್ವೀಕರಿಸಿದರು.