ಸಾರಾಂಶ
ಸಮಾಜವು ವಿಶೇಷ ಮಕ್ಕಳನ್ನು ನೋಡುವ ದೃಷ್ಠಿಕೋನ ಬೇರೆಯಾಗಿದೆ. ಅದನ್ನು ತೊಲಗಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ವಿಶೇಷ ಚೇತನ ಮಕ್ಕಳನ್ನು ಕೆಲವು ಶ್ರೀಮಂತರು ಸಮಾಜಕ್ಕೆ ಪರಿಚಯಿಸುವುದಿಲ್ಲ. ನಾನು ವಿಶೇಷ ಮಗುವಿನ ತಾಯಿಯಾಗಿ ಇಂತಹ ಮಕ್ಕಳಿಗೆ ವೇದಿಕೆ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದ್ದೇನೆ ಎಂದು ಭಾರತ ವಿಶೇಷ ಒಲಂಪಿಕ್ಸ್ ಕರ್ನಾಟಕದ ರಾಜ್ಯಾಧ್ಯಕ್ಷೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಸಮೂಹದ ನಣದಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡ ಮಾನಸಿಕ ಭಿನ್ನ - ಸಾಮರ್ಥ್ಯದ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಆಯ್ಕೆ ಶಿಬಿರದಲ್ಲಿ ವಿಜೇತ ಮಕ್ಕಳು ಹಾಗೂ ತರಬೇತುದಾರಿಗೆ ಸನ್ಮಾನಿಸಿ ಮಾತನಾಡಿದ ಅವರು, ಸಮಾಜವು ವಿಶೇಷ ಮಕ್ಕಳನ್ನು ನೋಡುವ ದೃಷ್ಠಿಕೋನ ಬೇರೆಯಾಗಿದೆ. ಅದನ್ನು ತೊಲಗಿಸಿ, ಅವರಿಗೂ ಕೂಡ ಎಲ್ಲರಂತೆ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡುವುದಕ್ಕಾಗಿಯೇ ವಿಶೇಷ ಮಕ್ಕಳಿಗಾಗಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿ, ಇದರಲ್ಲಿ ಆಯ್ಕೆಯಾದ ಮಕ್ಕಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗಹಿಸಲಿದ್ದಾರೆ ಎಂದು ಹೆಮ್ಮೆ ಪಟ್ಟರು. ವಿಶೇಷ ಒಲಂಪಿಕ್ಸ್ ಭಾರತ - ಕರ್ನಾಟಕ, ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆ ಹಾಗೂ ಆಶಾಜ್ಯೋತಿ ಬುದ್ದಿಮಾಂಧ್ಯ ಮಕ್ಕಳ ಉಚಿತ ವಸತಿ ಶಾಲೆ ಸಹಯೋಗದಲ್ಲಿ ಫೆ.3 ಮತ್ತು 4 ರಂದು ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಹಾಸನ, ಮಂಡ್ಯ, ಮೈಸೂರು, ಬೆಳಗಾವಿ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 182ಕ್ಕೂ ಹೆಚ್ಚು ವಿಶೇಷ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ವಿಶೇಷ ಒಲಂಪಿಕ್ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಅಮರೇಂದರ. ವಿಶೇಷ ಒಲಂಪಿಕ್ ಭಾರತ - ಕರ್ನಾಟಕದ ಖಜಾಂಚಿ ಡಿ.ಸಿ ಆನಂದ, ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿ ಪ್ರಸಾದ ಜೊಲ್ಲೆ, ರಾಜು ಹಿರೇಮಠ ಮುಂತಾದವರು ಇದ್ದರು. ಆನಂದ ಸ್ವಾಗತಿಸಿದರು. ಗೋವಿಂದ ಪೈ ನಿರೂಪಿಸಿ, ವಂದಿಸಿದರು.