ಸರ್ಕಾರಿ ನೌಕರರ ಸಂಘ ಕಟ್ಟಡ ನಿರ್ಮಾಣಕ್ಕೆ ₹10 ಲಕ್ಷ

| Published : Jun 25 2024, 12:40 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನಡಿ ₹10 ಲಕ್ಷ ನೀಡಲಾಗುವುದು. ತಾಲೂಕು ಪಂಚಾಯಿತಿಯಲ್ಲಿ ಕಚೇರಿಗಾಗಿ ಮೀಸಲಿಟ್ಟ ₹10 ಲಕ್ಷ ಬಳಸಿ ಕಟ್ಟಡ ನಿರ್ಮಾಣ ತಕ್ಷಣವೇ ಪ್ರಾರಂಭಿಸಬೇಕು ಎಂದು ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ಸರ್ವ ಸದಸ್ಯರ ಮಹಾಸಭೆಯಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ ಭರವಸೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನಡಿ ₹10 ಲಕ್ಷ ನೀಡಲಾಗುವುದು. ತಾಲೂಕು ಪಂಚಾಯಿತಿಯಲ್ಲಿ ಕಚೇರಿಗಾಗಿ ಮೀಸಲಿಟ್ಟ ₹10 ಲಕ್ಷ ಬಳಸಿ ಕಟ್ಟಡ ನಿರ್ಮಾಣ ತಕ್ಷಣವೇ ಪ್ರಾರಂಭಿಸಬೇಕು ಎಂದು ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ 2023- 2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳಲ್ಲಿ ನಿಯಮ ಮೀರಿ ದುಬಾರಿ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಸಂಬಂಧ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲಿಸಲಿದ್ದಾರೆ. ದುಬಾರಿ ಶುಲ್ಕ ವಸೂಲಾತಿ ಕಂಡುಬಂದರೆ ಅಂಥ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಉತ್ತಮ ಫಲಿತಾಂಶಕ್ಕೆ ಅಗತ್ಯ ತಯಾರಿ:

ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಯು ಕಡಿಮೆ ಸ್ಥಾನ ಬಂದಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಲು ಸೂಚಿಸಿದ್ದಾರೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಈ ಹಿನ್ನೆಲೆ ಜಗಳೂರು ತಾಲೂಕಿನ ಎಲ್ಲ ಪ್ರೌಢಶಾಲೆ, ಪಿಯುಸಿ ಕಾಲೇಜುಗಳ ಪ್ರಾಂಶುಪಾಲರ ಸಭೆ ರೂಪರೇಷೆ ಸಿದ್ಧಪಡಿಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಿರಲಿ, ಪಿಯು ಪರೀಕ್ಷೆಯಿರಲಿ ಉತ್ತಮ ಫಲಿತಾಂಶ ಬರಲು ತಯಾರಿಗೆ ಸಜ್ಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿವೃತ್ತಿ ಹೊಂದಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭುಸ್ವಾಮಿ, ಅರಣ್ಯ ಇಲಾಖೆ ನೌಕರ ಮಂಜಪ್ಪ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶಾಸಕರು ಶುಭ ಕೋರಿದರು.

ಸುವರ್ಣಯುಗದ ಕಾಲ:

ತಾಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಬಿ.ನಾಗರಾಜು ಮಾತನಾಡಿ, ರಾಜ್ಯಾಧ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿ ಸರ್ಕಾರಿ ನೌಕರರಿಗೆ ಅನೇಕ ಸವಲತ್ತುಗಳನ್ನು ಸರ್ಕಾರದ ಮಟ್ಟದಲ್ಲಿ ಮಾಡಿಕೊಟ್ಟಿದ್ದಾರೆ. ಸದಾ ನೌಕರರ ಬೆಂಬಲಕ್ಕೆ ನಿಂತು ಕೆಲಸ ನಿರ್ವಹಿಸಿದ್ದಾರೆ. ಅವರ ಆಡಳಿತ ಕಾಲ ಸುವರ್ಣಯುಗವಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ:

ಲೋಕೋಪಯೋಗಿ ಇಲಾಖೆ ನಿವೃತ್ತ ಎಂಜಿನಿಯರ್ ಪ್ರಭುಸ್ವಾಮಿ, ಅರಣ್ಯ ಇಲಾಖೆ ನೌಕರ ಮಂಜಪ್ಪ ಹಾಗೂ ನೂತನವಾಗಿ ಆಯ್ಕೆಯಾದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ಪ ಅವರನ್ನು ಶಾಸಕರು ಹಾಗೂ ಎನ್‌ಜಿಒ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಪ್ಪ, ರವಿಕುಮಾರ್, ಅಜ್ಜಪ್ಪ ನಾಡಿಗೇರ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಮಹೇಶ್ವರಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಬಣಕಾರ್, ವೀರೇಶ್, ಕಾಂಗ್ರೆಸ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ ಇತರರು ಇದ್ದರು.

- - - -24ಜೆ.ಜಿ.ಎಲ್.1:

ಸಭೆಯಲ್ಲಿ ಪಿಡಬ್ಲ್ಯುಡಿ ನಿವೃತ್ತ ಎಂಜಿನಿಯರ್ ಪ್ರಭುಸ್ವಾಮಿ, ಅರಣ್ಯ ಇಲಾಖೆ ನೌಕರ ಮಂಜಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪತ್ತಿನ ಸಹಕಾರ ಸಂಘದ ನೂತನ ಜಿಲ್ಲಾಧ್ಯಕ್ಷ ಚಂದ್ರಪ್ಪ ಅವರನ್ನು ಶಾಸಕ ಬಿ.ದೇವೇಂದ್ರಪ್ಪ ಸನ್ಮಾನಿಸಿದರು.