ಆಂತರ್ಯುದ ಪ್ರೇರಣೆಯಿಂದ ಬೆಳವಣಿಗೆ ಸಾಧ್ಯ

| Published : Jun 25 2024, 12:40 AM IST

ಸಾರಾಂಶ

ವಿಕ್ರಮ ವಿಸಾಜಿಯಿಂದ ಜಯದೇವಿತಾಯಿ ಲಿಗಾಡೆ, ಹುಡಗಿ ವಾಚಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಆಂತರ್ಯುದ ಪ್ರೇರಣೆಯಿಂದ ಪ್ರತಿಯೊಬ್ಬರ ಬೆಳವಣಿಗೆ ಸಾಧ್ಯ, ಜಯದೇವಿತಾಯಿ ಲಿಗಾಡೆ ಹಾಗೂ ದೇಶಾಂಶ ಹುಡಗಿ ತಮ್ಮೊಳಗಿನ ಪ್ರೇರಣೆಯಿಂದಲೇ ದೊಡ್ಡ ಲೇಖಕರಾಗಿದ್ದಾರೆ ಎಂದು ಕಲಬುರಗಿ ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹೇಳಿದರು.

ಅವರು ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ನಗರದ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಡಾ.ಜಯದೇವಿತಾಯಿ ಲಿಗಾಡೆ ಅವರ ಜನ್ಮದಿನ ಪ್ರಯುಕ್ತ ಡಾ.ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ಪ್ರಧಾನ ಹಾಗೂ ಶಿವಾಜಿ ಮೇತ್ರೆ ಅವರು ಸಂಪಾದಿಸಿದ ಡಾ.ಜಯದೇವಿತಾಯಿ ಲಿಗಾಡೆ ವಾಚಿಕೆ, ಭೀಮಾಶಂಕರ ಬಿರಾದಾರ ಸಂಪಾದಿಸಿದ ದೇಶಾಂಶ ಹುಡುಗಿ ವಾಚಿಕೆ ಬಿಡುಗಡೆ ಸಮಾರಂಭದಲ್ಲಿ ಕೃತಿಗಳ ಕುರಿತು ಮಾತನಾಡಿ, ಬುದ್ಧನ ವ್ಯಕ್ತಿತ್ವದ ಹಲವು ಮುಖಗಳು ದೇಶಾಂಶರು ಬುದ್ದ ಚರಿತೆಯಲ್ಲಿ, ಶರಣರ ಚಿಂತನೆ ಪ್ರಭಾವ ಲಿಗಾಡೆ ತಾಯಿಯವರ ಕಾವ್ಯದಲ್ಲಿ ಅಡಕವಾಗಿವೆ ಎಂದರು.

ಬಸವಣ್ಣನವರ ಜಾತ್ಯತೀತ ಮನೋಭಾವ, ವಚನಕಾರ್ತಿಯರ ಪ್ರಜ್ಞೆ, ಗಾಂಧೀಜಿಯ ಸರಳತೆ, ಮರಾಠಿ ಸಂತರ ಪ್ರೇರಣೆ, ಕನ್ನಡ ಮರಾಠಿ ಸಂಸ್ಕೃತಿಯ ಅಪರೂಪದ ಲೇಖಕಿ ಲಿಗಾಡೆಯವರು. ಕನ್ನಡ, ಉರ್ದು, ಹಿಂದಿ, ಮರಾಠಿ ಭಾಷೆಯ ತಿಳುವಳಿಕೆ, ಸಾಹಿತ್ಯ, ರಂಗಭೂಮಿ, ಸಾಕ್ಷರತೆ, ಸಂಗೀತದ ಒಡನಾಡಿ ದೇಶಾಂಶರು ಈ ಇಬ್ಬರೂ ಅನನ್ಯ ಲೇಖಕರು ಎಂದು ಹೇಳಿದರು.

ಗುಲ್ಬರ್ಗ ವಿವಿ ಪ್ರಾಧ್ಯಾಪಕ ಹಾಗೂ ಹಿರಿಯ ಚಿಂತಕ ಪ್ರೊ.ಎಚ್.ಟಿ.ಪೋತೆ ಪುಸ್ತಕ ಬಿಡುಗಡೆ ಮಾಡಿ, ವಚನಗಳ ತಾತ್ವಿಕತೆ ಜಗತ್ತಿಗೆ ತಲುಪಿಸಬೇಕಾದ ದಾರಿ ಹುಡುಕಬೇಕಿದೆ. ಆಧುನಿಕ ಕಾಲದಲ್ಲಿ ಅಂಬೇಡ್ಕರರ ಪ್ರಭಾವ ಜಗತ್ತಿಗೆ ಆವರಿಸಿದೆ. ಬಸವಣ್ಣನವರು ಸೇರಿ ಹಲವು ವಚನಕಾರರ ತತ್ವ ಚಿಂತನೆ ಜಗತ್ತಿಗೆ ತಲುಪಿಸಬೇಕಿದೆ ಎಂದರು.

ಕಲಬುರ್ಗಿ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬಸವರಾಜ ಕೊನೇಕ, ಹಿರಿಯ ಸಾಹಿತಿ ಡಾ.ಶ್ರೀಶೈಲ್ ನಾಗರಾಳ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ನಾರಾಯಣಪೂರ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿದ್ದು, ಪ್ರೊ.ಸಿ.ಬಿ.ಪರತಾಪುರೆ, ಪ್ರೇಮಸಾಗರ ಪಾಟೀಲ, ಸಂಜುಕುಮಾರ ನಡುಕರ, ಓಂನಾಥ ಇಂಡೆ ಇದ್ದರು.

ಇದೇ ವೇಳೆ ಕಲಬುರಗಿಯ ಸಿಯುಕೆ ಪ್ರಾಧ್ಯಾಪಕ, ಕವಿ, ವಿಮರ್ಶಕ, ನಾಟಕಕಾರ ಪ್ರೊ. ವಿಕ್ರಮ ವಿಸಾಜಿ ಅವರನ್ನು 2024ರ ಡಾ. ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಆರಂಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಚಿಂತಕ, ಲೇಖಕ, ಸರೋದ ವಾದಕ ಡಾ. ರಾಜೀವ್ ತಾರನಾಥ ಹಾಗೂ ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಚಿತ್ರ 24ಬಿಡಿಆರ್56ಬಸವಕಲ್ಯಾಣದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ನಗರದ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಡಾ. ಜಯದೇವಿತಾಯಿ ಲಿಗಾಡೆ ಅವರ ಜನ್ಮದಿನ ಪ್ರಯುಕ್ತ ಪುಸ್ತಕ ಬಿಡುಗಡೆ ಮಾಡಲಾಯಿತು.