ಡಾ.ಕಮಲಾ ಹಂಪನಾ ಅಪರೂಪದ ಸ್ತ್ರೀ ಸಾಹಿತ್ಯರತ್ನ

| Published : Jun 25 2024, 12:39 AM IST

ಸಾರಾಂಶ

ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುವ ಮೂಲಕ ನಾಡೋಜ ಡಾ.ಕಮಲಾ ಹಂಪನಾ ಅಪರೂಪದ ಸ್ತ್ರೀ ಸಾಹಿತ್ಯರತ್ನ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ದಾವಣಗೆರೆಯಲ್ಲಿ ಬಣ್ಣಿಸಿದ್ದಾರೆ.

- ಶ್ರದ್ಧಾಂಜಲಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ನುಡಿನಮನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುವ ಮೂಲಕ ನಾಡೋಜ ಡಾ.ಕಮಲಾ ಹಂಪನಾ ಅಪರೂಪದ ಸ್ತ್ರೀ ಸಾಹಿತ್ಯರತ್ನ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಬಣ್ಣಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಮಲಾ ಹಂಪನಾ ಅವರಿಗೆ ನುಡಿ ನಮನವನ್ನು ಸಲ್ಲಿಸಿ ಅವರು ಮಾತಾಡಿದರು. ಸುಮಾರು 50ಕ್ಕೂ ಹೆಚ್ಚು ಮೌಲ್ವಿತ ಕೃತಿಗಳನ್ನು ರಚಿಸಿ ತಮ್ಮ ಸಾಧನೆ ಮೆರೆದಿದ್ದಾರೆ. ಸಾಹಿತ್ಯಕ ಸೇವೆ, ಸಾಧನೆ, ಅನುಭವ ಹಾಗೂ ವಯಸ್ಸಿನಲ್ಲಿ ಶ್ರೇಷ್ಠತೆಯ ಪರಾಕಾಷ್ಠೆ ತಲುಪಿದ್ದರು ಎಂದು ಹೇಳಿದರು.

ವಿಶ್ರಾಂತ ಉಪನ್ಯಾಸಕ ಸುಭಾಷ್‌ಚಂದ್ರ ಬೋಸ್ ಮಾತನಾಡಿ, ಕಮಲಾ ಹಂಪನಾ ಎಂಬ ಶಿರೋನಾಮೆಯೇ ವಿಶೇಷವಾಗಿದೆ. ಕಮಲಾ ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಹಂ.ಪ.ನಾಗರಾಜಯ್ಯ ಅವರು ಜೈನ ಧರ್ಮಕ್ಕೆ ಸೇರಿದವರು. ಅವರಿಬ್ಬರ ಸಮ್ಮಿಲನವು ಎರಡು ಸಾಹಿತ್ಯ ಪ್ರತಿಭೆಗಳ ಸಮ್ಮಿಲನವಾಯಿತು. ಜಾತಿ, ಧರ್ಮ ಮೀರಿ ಈರ್ವರೂ ಸಾಹಿತ್ಯಕ ಕೃಷಿ ಮಾಡಿ, ಸಾಹಿತ್ಯ ವಲಯದಲ್ಲಿ ಅಪರೂಪದ ಸಾಧನೆ ಮಾಡಿ ಸೈ ಎನಿಸಿಕೊಂಡರು. ಶತಮಾನದ ಅಂಚಿನವರೆಗೆ ತುಂಬು ಬದುಕನ್ನು ಸಾಗಿಸಿದ ಕಮಲಾ ಅವರು ಇಹಲೋಕ ತ್ಯಜಿಸಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡೋಜ ಕಮಲಾ ಹಂಪನಾ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 2003ರಲ್ಲಿ ಮುಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವವನ್ನು ನೀಡಿತ್ತು ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹನಿರ್ದೇಶಕ ರವಿಚಂದ್ರ, ಕಸಾಪ ತಾಲೂ ಅಧ್ಯಕ್ಷೆ ಸುಮತಿ ಜಯಪ್ಪ, ಸತ್ಯಭಾಮ ಮಂಜುನಾಥ್, ಎಸ್.ಎಂ. ಮಲ್ಲಮ್ಮ, ಲೇಖಕ ನಾಗರಾಜ ಸಿರಿಗೆರೆ, ಸರ್ಕಾರಿ ಮಹಿಳಾ ಪ್ರದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಮಂಜಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಯಪ್ಪ, ರೇವಣಸಿದ್ಧಪ್ಪ ಅಂಗಡಿ, ಸಿ.ಜಿ. ಜಗದೀಶ್ ಕೂಲಂಬಿ, ಪತ್ರಕರ್ತ ಜಿಗಳಿ ಪ್ರಕಾಶ್, ಬೈರೇಶ್ವರ, ರುದ್ರಾಕ್ಷಿ ಬಾಯಿ, ದಾಗಿನಕಟ್ಟೆ ಪರಮೇಶ್ವರಪ್ಪ, ನಾಗರಾಜ್ ಸಿರಿಗೆರೆ, ಬೇತೂರು ಎಂ. ಷಡಾಕ್ಷರಪ್ಪ ಮತ್ತಿತರರು ಉಪಸ್ಥಿತರಿದ್ದರು.

- - - -24ಕೆಡಿವಿಜಿ42ಃ:

ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾಡೋಜ ದಿ।। ಕಮಲಾ ಹಂಪನಾ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.