ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾದಿಂದ ಕೊಡವ ಲ್ಯಾಂಡ್ ರಕ್ಷಿಸಿಕೊಳ್ಳಲು ಸಮಸ್ತ ಕೊಡವರು ಒಗ್ಗೂಡಿ ಹೋರಾಟ ನಡೆಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಕರೆ ನೀಡಿದ್ದಾರೆ.ಸಿದ್ದಾಪುರದ ಬಿಬಿಟಿಸಿ ಸಂಸ್ಥೆಯ ಸುಮಾರು 2400 ಎಕ್ರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ, ಭೂಮಾಫಿಯಾಗಳು ಹಾಗೂ ರಾಜಕೀಯ ಬೆಂಬಲಿತರು ಕೊಡಗಿನ ಕಾವೇರಿ ಜಲಾನಯನ ಪ್ರದೇಶದ ಭೂಮಿಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದು, ಕಪ್ಪು ಹಣದ ಚಲಾವಣೆಯಾಗುತ್ತಿದೆ. ಬೃಹತ್ ಕಾಫಿ ತೋಟಗಳ ಖರೀದಿಯ ನಂತರ ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಭೂಮಿಯನ್ನು ಹಣದ ಆಮಿಷವೊಡ್ಡಿ ಕಬಳಿಸಲಾಗುತ್ತಿದೆ.* ಆಂಧ್ರದ ಹಣ ಹೂಡಿಕೆಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಿರುಪತಿ ದೇವಸ್ಥಾನ ಸಮಿತಿಯಿಂದ ‘ಸಾಫ್ಟ್ ಮನಿ’ ಹೆಸರಿನ ಬಡ್ಡಿ ರಹಿತ ಸಾಲ ದೊರೆಯುತ್ತಿದ್ದು, ದೊಡ್ಡ ಪ್ರಮಾಣದ ಈ ಹಣವನ್ನು ಗ್ರಾಮ ಗ್ರಾಮಗಳಲ್ಲಿ ಬಂಡವಾಳದ ರೂಪದಲ್ಲಿ ಹೂಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ ಎಂದು ಆರೋಪಿಸಿದರು.ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಲ್ ಗುಡ್ಡಗಳ ಕೆಳಗೆ 300 ಎಕ್ರೆ ಕಾಫಿ ತೋಟಗಳು, ಮಕ್ಕಂದೂರಿನ ಪಶ್ಚಿಮ ಘಟ್ಟಗಳ ವಲಯದಲ್ಲಿ ಸಂಪೂರ್ಣವಾಗಿ ಅಕ್ರಮವಾಗಿ ನಿರ್ಮಿಸಲಾದ ರೆಸಾರ್ಟ್ ಮತ್ತು 2018ರ ಭೂಕುಸಿತದ ದುರಂತದ ಪ್ರದೇಶದಲ್ಲಿ ಮತ್ತೊಂದು ರೆಸಾರ್ಟ್ ಬರಲಿದೆ. ಪೊರಮಲೆನಾಡಿನ ಮೊಣ್ಣಂಗೇರಿ ಮತ್ತು ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ 3 ಪರ್ವತಗಳಿಗೆ ಹಾನಿ ಮಾಡಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೈದರಾಬಾದಿಯೊಬ್ಬರು ವಸತಿ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು.ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ ಎಂದು ಹೇಳಿದರು.* ಕೊಡಗಿನಲ್ಲಿ ಜನಸಂಖ್ಯಾಸ್ಫೋಟ ಸಾಧ್ಯತೆ
ಬೃಹತ್ ರೆಸಾರ್ಟ್‌ಗಳ ನಿರ್ಮಾಣದಿಂದ ವ್ಯವಹಾರ ಕುಸಿದರೂ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಇದನ್ನು ಬಳಸುವ ಹುನ್ನಾರವಿದೆ. ಸಿದ್ದಾಪುರದ 2400 ಎಕ್ರೆ ಬಿಬಿಟಿಸಿ ಕಾಫಿ ತೋಟದ ಭೂಪರಿವರ್ತನೆಯಿಂದ 2.80 ಲಕ್ಷ ಮಂದಿ, ತಡಿಯಂಡಮೋಲ್‌ನ ಕೆಳಗೆ 300 ಎಕ್ರೆ ಕಾಫಿ ತೋಟಗಳ ಪರಿವರ್ತನೆಯಿಂದ 30 ಸಾವಿರ ಮತ್ತು ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದ ಭೂಪರಿವರ್ತನೆಯಿಂದ 10 ಸಾವಿರ ಮಂದಿ ನೆಲೆಸುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ ಆದಿಮಸಂಜಾತ ಬುಡಕಟ್ಟು ಜನಾಂಗ ಮೂಲನಿವಾಸಿ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದರು.ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚೇಂದಿರ ಶೈಲ, ಬಟ್ಟಿಯಂಡ ಕೃಪ ಸೋಮಯ್ಯ, ಅನನ್ಯ ಸೋಮಯ್ಯ, ಅನಿಂದ್ಯ ಸೋಮಯ್ಯ, ಕರ್ನಲ್ ಬಿ.ಎಂ.ಪಾರ್ವತಿ, ಬಲ್ಲಡಿಚಂಡ ಬೇಬಿ ಮೇದಪ್ಪ, ಮುದ್ದಿಯಡ ಲೀಲಾವತಿ, ಡಾ.ಕಾಳಿಮಾಡ ಶಿವಪ್ಪ, ಕೊಲ್ಲಿರ ಗಯಾ, ಕಂಬಿರಂಡ ಬೋಪಣ್ಣ, ಕಾಡ್ಯಮಾಡ ಗೌತಮ್ ಅವರು ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಕೊಡವ ಲ್ಯಾಂಡ್ ಮತ್ತು ಎಸ್‌ಟಿ ಟ್ಯಾಗ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಜುಲೈ 1ರಂದು ಕಕ್ಕಬ್ಬೆ ಹಾಗೂ ಜುಲೈ 6ರಂದು ಚೆಟ್ಟಳ್ಳಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.