ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಕಾರ್ಖಾನೆಯಲ್ಲಿ ಬಳಸುವ ಗಂಧದೆಣ್ಣೆ ಖರೀದಿಯಲ್ಲಿ ಹಗರಣದ ಆರೋಪ ಕೇಳಿಬಂದಿದ್ದು, ತೈಲ ಖದೀರಿ ಟೆಂಡರ್ ನಲ್ಲಿ ಸುಮಾರು ಒಂದು ಸಾವಿರ ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ ಮಂಜು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಕಾರ್ಖಾನೆಯಲ್ಲಿ ಬಳಸುವ ಗಂಧದೆಣ್ಣೆ ಖರೀದಿಯಲ್ಲಿ ಹಗರಣದ ಆರೋಪ ಕೇಳಿಬಂದಿದ್ದು, ತೈಲ ಖದೀರಿ ಟೆಂಡರ್ ನಲ್ಲಿ ಸುಮಾರು ಒಂದು ಸಾವಿರ ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ ಮಂಜು ಆರೋಪಿಸಿದ್ದಾರೆ.ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋ಼ಷ್ಠಿ ಉದ್ದೇಶಿಸಿ ಮಾತನಾಡಿ, ಇದರಲ್ಲಿ ಕೆಲ ಸಚಿವರು, ಅಧಿಕಾರಿಗಳು, ಶಾಸಕರೂ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಹಗರಣದಲ್ಲಿ ಕೆಲವರಿಗೆ ಕಿಕ್ ಬ್ಯಾಕ್ ಸಲ್ಲಿಕೆಯಾಗಿರಬಹುದು. ಒಟ್ಟು 1,700 ಕೋಟಿ ವ್ಯವಹಾರದಲ್ಲಿ ಒಂದು ಸಾವಿರ ಕೋಟಿ ಅವ್ಯವಹಾರ ಆಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಎಸ್ಐಟಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಸಂಸ್ಥೆಗೆ ಅನೇಕ ವರ್ಷಗಳಿಂದ ತೈಲ ಸರಬರಾಜಿಗೆ ಬೇರೆ ಕಂಪನಿಗೆ ಅವಕಾಶ ನೀಡದೆ, ಕಪ್ಪುಪಟ್ಟಿಯಲ್ಲಿರುವ ಕರ್ನಾಟಕ ಅರೋಮಸ್ ಎಂಬ ಒಂದೇ ಕಂಪನಿಗೆ 9 ಟೆಂಡರ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. 2019ರಲ್ಲೇ ಈ ಕಂಪನಿ ಬ್ಲ್ಯಾಕ್ ಲಿಸ್ಟ್‌ನಲ್ಲಿತ್ತು. ನಾನು ಇದಕ್ಕೆ ಸಂಬಂಧಿಸಿ ಮಾಹಿತಿ ಪಡೆಯಲು 2022, 2023ರಲ್ಲಿ ಪತ್ರ ಬರೆದಿದ್ದೆ. ಆಗ ಒಂದು ಕೆ.ಜಿ. ಸ್ಯಾಂಡಲ್ ಆಯಿಲ್‌ಗೆ 2,24,655 ರು. ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ 93,116 ರು. ಮಾಡುತ್ತಾರೆ.ಅಂದರೆ ಹಿಂದಿನ ಬೆಲೆಗಿಂತ ಕೆ.ಜಿ.ಗೆ 1.2 ಲಕ್ಷ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಇದರಿಂದಲೇ ಇದು ಎಷ್ಟು ದೊಡ್ಡ ಹಗರಣ ಎನ್ನುವುದನ್ನು ಊಹಿಸಬಹುದು. ಈವರೆಗೆ 11,000 ಕೆ.ಜಿ. ಸ್ಯಾಂಡಲ್ ವುಡ್ ತೈಲವನ್ನು 1.2 ಲಕ್ಷಕ್ಕೂ ಅಧಿಕ ದರ ನೀಡಿ ಖರೀದಿ ಮಾಡಿದ್ದಾರೆ. ಇದರಿಂದ ಕಂಪನಿಗೆ ಸುಮಾರು 132 ಕೋಟಿ ರು.ಗೂ ಹೆಚ್ಚು ನಷ್ಟ ಉಂಟಾಗಿದೆ. ಈ ಸಂಬಂಧ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ವಿವರಿಸಿದರು.