ಇಂಡಿಗೋ ವಿಮಾನ ಸೇವೆ ರದ್ದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನವಿಡೀ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸರಿಯಾದ ಮಾಹಿತಿ ಇಲ್ಲದೆ ಪ್ರಯಾಣಿಕರು ಏನೂ ತೋಚದೆ ಪರದಾಡಬೇಕಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇಂಡಿಗೋ ವಿಮಾನ ಸೇವೆ ರದ್ದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನವಿಡೀ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸರಿಯಾದ ಮಾಹಿತಿ ಇಲ್ಲದೆ ಪ್ರಯಾಣಿಕರು ಏನೂ ತೋಚದೆ ಪರದಾಡಬೇಕಾಯಿತು.ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಮತ್ತಿತರ ಕಾರಣಗಳಿಂದಾಗಿ ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನಗಳ ಸೇವೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ. 48 ಗಂಟೆಗಳಲ್ಲಿ ವಿಮಾನ ಸೇವೆಯಲ್ಲಿನ ದೋಷ ಸರಿಪಡಿಸಲಾಗುವುದು ಎಂದು ಇಂಡಿಗೋ ಸಂಸ್ಥೆ ತಿಳಿಸಿತ್ತು. ಸಮಸ್ಯೆ ಬಗೆಹರಿಸುವ ಬದಲು ವಿಮಾನಗಳ ಸೇವೆ ರದ್ದು ಪ್ರಮಾಣ ಹೆಚ್ಚುತ್ತಿದೆ. ಕಳೆದ ಬುಧವಾರ ಇಂಡಿಗೋ ಸಂಸ್ಥೆಗೆ ಸೇರಿದ 62 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಗುರುವಾರ 73 ಹಾಗೂ ಶುಕ್ರವಾರ ಆ ಸಂಖ್ಯೆ 102ಕ್ಕೆ ಹೆಚ್ಚಳವಾಗಿದೆ. ಅದರಲ್ಲಿ ಆಗಮನ 52 ಮತ್ತು ನಿರ್ಗಮನದ 50 ವಿಮಾನಗಳು ತಮ್ಮ ಹಾರಾಟ ಸ್ಥಗಿತಗೊಳಿಸಿವೆ.
ವಿಮಾನ ಟಿಕೆಟ್ ಮುಂಗಡ ಕಾಯ್ದಿರಿಸಿರುವವರಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಅಥವಾ ಟಿಕೆಟ್ ಮೊತ್ತ ವಾಪಸ್ ಮಾಡುವುದಾಗಿ ಇಂಡಿಗೋ ಸಂಸ್ಥೆ ಘೋಷಿಸಿತ್ತು. ಅದರಂತೆ ಹಲವು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿರುವುದಾಗಿ ಸಂದೇಶವನ್ನೂ ರವಾನಿಸಲಾಗಿತ್ತು. ಅದನ್ನು ನಂಬಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಬಂದಿದ್ದ ವಿಮಾನಯಾನಿಗಳಿಗೆ ಬದಲಿ ವ್ಯವಸ್ಥೆ ಕುರಿತಂತೆ ಇಂಡಿಗೋ ಸಂಸ್ಥೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಜತೆಗೆ ಟಿಕೆಟ್ ಮೊತ್ತ ವಾಪಾಸ್ ನೀಡುವ ಪ್ರಕ್ರಿಯೆಯನ್ನೂ ನಡೆಸಿಲ್ಲ.ಇದರಿಂದಾಗಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇಂಡಿಗೋ ಸಂಸ್ಥೆಯ ಕೌಂಟರ್‌ಗಳ ಎದುರು ಭಾರೀ ಜನಸಂದಣಿ ಜಮೆಯಾಗಿತ್ತು. ಈ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿ ಆಕ್ರೋಶ ಹೊರಹಾಕಿದರು.
ವಿಮಾನನಿಲ್ದಾಣಕ್ಕೆ ಬರಬೇಡಿ ಎಂದ ಬಿಐಎಎಲ್ಇಂಡಿಗೋ ವಿಮಾನಯಾನ ಸಂಸ್ಥೆಯ ಈ ಅವ್ಯವಸ್ಥೆ ಗಮನಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್) ಬೆಂಗಳೂರಿನಿಂದ ಮುಂಬೈ ಮತ್ತು ದೆಹಲಿಗೆ ಸೇವೆ ನೀಡುವ ಇಂಡಿಗೋ ವಿಮಾನಗಳು ರದ್ದಾಗಿವೆ. ಹೀಗಾಗಿ ಇಂಡಿಗೋ ವಿಮಾನದ ಮೂಲಕ ಬೇರೆ ನಗರಗಳಿಗೆ ಪ್ರಯಾಣಿಸಲಿರುವ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸುವುದಕ್ಕೂ ಮುನ್ನ ತಮ್ಮ ವಿಮಾನಯಾನ ಸಂಸ್ಥೆಯೊಂದಿಗೆ ವಿಮಾನದ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಬೇಕು. ನಂತರವಷ್ಟೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬರುವಂತೆ ಕೋರಿತ್ತು.