ಕಡಲೆ, ಮೆಕ್ಕೆಜೋಳ, ಕಬ್ಬು, ಉಳ್ಳಾಗಡ್ಡಿ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿ ಸರ್ಕಾರದ ವಿರುದ್ಧ ತಿಂಗಳುಗಟ್ಟಲೆ ಹೋರಾಟ ಮಾಡುವಂತಾಯಿತು.

ಶಿವಕುಮಾರ ಕುಷ್ಟಗಿ/ ಮಹೇಶ ಛಬ್ಬಿ

ಗದಗ: 2025 ಜಿಲ್ಲೆಯ ಪಾಲಿಗೆ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ನೀಡಿದ ವರ್ಷವಾಗಿದೆ. ಕೃಷಿಯನ್ನೇ ಸಂಪೂರ್ಣ ಆರ್ಥಿಕ ಹಿನ್ನೆಲೆಯಾಗಿ ಹೊಂದಿರುವ ಜಿಲ್ಲೆಯ ರೈತಾಪಿ ವರ್ಗ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಂಗಾಲಾಗಿದ್ದು, ಉತ್ತಮ ಮಳೆಯಾಗಿಯೂ ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುವಂತಾಯಿತು.

ಕಡಲೆ, ಮೆಕ್ಕೆಜೋಳ, ಕಬ್ಬು, ಉಳ್ಳಾಗಡ್ಡಿ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿ ಸರ್ಕಾರದ ವಿರುದ್ಧ ತಿಂಗಳುಗಟ್ಟಲೆ ಹೋರಾಟ ಮಾಡುವಂತಾಯಿತು. ರೈತರ ಕೆಂಗಣ್ಣಿಗೆ ಗುರಿಯಾದ ಸರ್ಕಾರ ಹೋರಾಟಕ್ಕೆ ಮಣಿದು ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಆದೇಶ ಮಾಡಿತು. ಈವರೆಗೂ ಮೆಕ್ಕೆಜೋಳ ಮಾರಾಟ ಮಾಡಲಾಗದೇ ರೈತರು ಮೆಕ್ಕೆಜೋಳ ರಾಶಿಯನ್ನು ಕಾಯುತ್ತಾ ಕುಳಿತುಕೊಂಡಿದ್ದಾರೆ.

ಜನವರಿ: ಗದಗ ನಗರದ ಹೊರಹೊಲಯದಲ್ಲಿರುವ ಜಿಮ್ಸ್ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಪಾದಚಾರಿಯೊಂದಿಗೆ ಯೂಟ್ಯೂಬರ್ ಸಾವಿಗೀಡಾದ ಘಟನೆ ನಡೆಯಿತು. ಗದಗ, ಮುಂಡರಗಿ ರೈತರು ತಮಗೆ ಬರಬೇಕಾದ ಕಡಲೆ ಬಾಕಿ ಹಣಕ್ಕಾಗಿ ಜಿಲ್ಲಾಡಳಿತದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಜಿಲ್ಲೆಯೇ ಗದಗ ಗ್ರಾಮೀಣ, ಗಜೇಂದ್ರಗಡ ಸೇರಿದಂತೆ ವಿವಿಧೆಡೆ ಚಿರತೆ ಪ್ರತ್ಯಕ್ಷ ವರದಿ ಜಿಲ್ಲೆಯೇ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿತು.

ಗದಗ- ಬೆಟಗೇರಿ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿಗೆ ಮೂಲಾಧಾರವಾದ ತುಂಗಭದ್ರಾ ನದಿ ನೀರು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗದಲ್ಲಿ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದರಿಂದ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಫೆಬ್ರವರಿ: ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಲೋಕಾರ್ಪಣೆಗೊಳಿಸಿದರು. ಶಿರಹಟ್ಟಿ ತಾಲೂಕಿನ ಕಡಕೋಳ ವ್ಯಾಪ್ತಿಯ ಕಪ್ಪತ್ತಗುಡ್ಡಕ್ಕೆ ಆಕಸ್ಮಿಕ ಬೆಂಕಿ ತಗುಲಿ 100 ಹೆಕ್ಟೇರ್ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಯಿತು.

ಮಾರ್ಚ್: ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ನಡೆಯಿತು.

ಏಪ್ರಿಲ್: ಜಿಲ್ಲೆಯ ವಿವಿಧೆಡೆ ಏಪ್ರಿಲ್ ತಿಂಗಳಿನಲ್ಲಿ ಅಬ್ಬರಿಸಿದ ಮಳೆ ಜನಜೀವನ ಅಸ್ತವ್ಯಸ್ತ, ಗದಗ- ಬೆಟಗೇರಿ ಲಕ್ಷ್ಮೇಶ್ವರ ಸೇರಿದಂತೆ ವಿವಿಧೆಡೆ ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರೆಗುಳಿದು ಅಪಾರ ಹಾನಿಯಾಯಿತು.

ಕಾಶ್ಮೀರ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾಧಕ ದಾಳಿ ಖಂಡಿಸಿ, ಗದಗ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮೇ: ಮುಂಗಾರು ಪೂರ್ವ ಮಳೆ ಮೇ ತಿಂಗಳನಲ್ಲಿ ಜಿಲ್ಲೆಯಲ್ಲಿ ಹದಭರಿತವಾಗಿ ಸುರಿದು, ಕೃಷಿ ಹೊಂಡಗಳು ತುಂಬಿ ಹರಿದು ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರ ಮೊಗದಲ್ಲಿ ಹೊಸ ಭರವಸೆ ಮೂಡಿಸಿತ್ತು. ಅಮೃತ ಭಾರತ ರೈಲ್ವೆ ಯೋಜನೆಯಡಿ ಯೋಜನೆಯ ಮೊದಲ ಹಂತದ, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿನ 5 ನಿಲ್ದಾಣಗಳು ಮೇ 22ರಂದು ಲೋಕಾರ್ಪಣೆಗೊಂಡವು. ಅದರಲ್ಲಿ ನವೀಕೃತಗೊಂಡ ಗದಗ ರೈಲ್ವೆ ನಿಲ್ದಾಣವು ಲೋಕಾರ್ಪಣೆಗೊಂಡಿತು.

ಜೂನ್: ತಾಲೂಕಿನ ಮುಳಗುಂದ ಪಟ್ಟಣದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಟೋಪ ಜಾತ್ರೆ ನಾಲ್ಕು ದಿನಗಳ ಕಾಲ ಅತ್ಯಂತ ಸಡಗರದಿಂದ ಜರುಗಿತು. ಲಕ್ಕುಂಡಿ ಗ್ರಾಮದಲ್ಲಿ ಲಕ್ಕುಂಡಿ ಉತ್ಖನನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಗದಗ ನಗರದಲ್ಲಿ ಜಿಎನ್‌ಟಿಟಿಎಫ್ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಜುಲೈ: ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳ ರಕ್ಷಣೆಗೆ ರೈತ ಸಮುದಾಯ ಯೂರಿಯಾ ಗೊಬ್ಬರಕ್ಕಾಗಿ ಪರದಾಡಿ ಹಗಲು- ರಾತ್ರಿಯನ್ನದೇ ಗೊಬ್ಬರದ ಅಂಗಡಿಗಳ ಮುಂದೆ ಟ್ರ್ಯಾಕ್ಟರ್‌ನಲ್ಲಿಯೇ ಮಲಗಿ ಸರದಿಯಲ್ಲಿ ನಿಂತು ಪಡೆಯಲಾಯಿತು, ಕೆಲ ಕಡೆ ಪೊಲೀಸ್ ಬಂದೋಬಸ್ತಲ್ಲಿ ಗೊಬ್ಬರ ಪಡೆಯುವಂತಾಯಿತು.

ಆಗಸ್ಟ್: ರೈತ ಸಮುದಾಯಕ್ಕೆ ಸಮರ್ಪಕ ಗೊಬ್ಬರ ಪೂರೈಸುವಂತೆ ರೈತ ಪರ ಸಂಘಟನೆಗಳು, ವಿವಿಧ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಪ್ರಭುವಿನಡೆಗೆ ಪ್ರಜಾಪ್ರಭುತ್ವ ಎಂಬ ವಿನೂತನ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಕಪ್ಪತ್ತಗುಡ್ಡದಲ್ಲಿ ಪ್ರವಾಸಿಗರಿಗಾಗಿ ಸಫಾರಿ ವಾಹನಕ್ಕೆ ಚಾಲನೆ ನೀಡಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರವು ಈ ಪ್ರದೇಶದ ಸ್ಮಾರಕಗಳ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲು ಆರ್ಟ್ ಆರ್ಕಿಟೆಕ್ಚರ್ ಡಿಸೈನ್ ಎನಿರಾನ್ಮೆಂಟ ಇಂಡಿಯಾ(ಎಡಿಇಐ) ಸಂಸ್ಥೆಯೊಂದಿಗೆ ಸರ್ಕಾರ ಒಡಬಂಡಿಕೆ ಮಾಡಿಕೊಂಡಿತು.

ಸೆಪ್ಟೆಂಬರ್: ಗದಗ ನಗರದಲ್ಲಿ ಬಗರ್‌ಹುಕುಂ ಸಾಗುವಳಿದಾರರು ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭೆ ವತಿಯಿಂದ ಅರೆಬೆತ್ತಲೆ, ಸಾಮೂಹಿಕ ದೀಡ್ ನಮಸ್ಕಾರ, ಉರುಳು ಸೇವೆ, ಪೂರಕೆ ಚಳವಳಿ, ರೊಟ್ಟಿ ಚಳವಳಿ, ಭಿಕ್ಷಾಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಯಿತು. .

ಅಕ್ಟೋಬರ್: ಜಿಲ್ಲೆಯಲ್ಲಿ ಲಂಚಗುಳಿತನದ ಬಗ್ಗೆ ದೂರು ಹೆಚ್ಚಿದ ಹಿನ್ನೆಲೆ ಇಬ್ಬರು ಅಧಿಕಾರಿಗಳ ಅಮಾನತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಬಳಿ ವಿಷಪುರಿತ ಆಹಾರ ಸೇವಿಸಿ 50ಕ್ಕೂ ಅಧಿಕ ಕುರಿಗಳು ಸಾವಿಗೀಡಾದವು. ಹುಣ್ಣಿಮೆ ಪ್ರಯುಕ್ತ ಕೊಪ್ಪಳದ ಹುಲಿಗೆಮ್ಮ ದೇವಿಗೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಯಾತ್ರಿಕರು ಪಾದಾಯಾತ್ರೆ ತೆರಳುತಿದ್ದ ವೇಳೆ ಕೊಪ್ಪಳ ಜಿಲ್ಲೆಯೇ ಕುಕನಪಳ್ಳಿ ಸಮೀಪ ಮೂವರು ಪಾದಯಾತ್ರಿಗಳ ಮೇಲೆ ಬಸ್ ಹರಿದು ತಾಯಿ- ಮಗ ಸೇರಿ ಮೂವರು ಸಾವಿಗೀಡಾದರು.

ನವೆಂಬರ್: ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಆಸ್ಪತ್ರೆಯಿಂದ ಮರಳಿ ಮನೆಗೆ ಬರುವ ವೇಳೆಯಲ್ಲಿ ಮೃತಪಟ್ಟ ವ್ಯಕ್ತಿ ಮತ್ತೆ ಜೀವಂತ ಇರುವ ಅಚ್ಚರಿಯ ಘಟನೆ ಬೆಟಗೇರಿಯಲ್ಲಿ ನಡೆಯಿತು. ಕೆಲ ದಿನಗಳ ನಂತರ ವ್ಯಕ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು. ಅವರ ಕುಟುಂಬ ಮೃತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.

ಗ್ರಾಮೀಣ ಭಾಗದಲ್ಲಿ ಗ್ರೀನ್ ಕಾರಿಡಾರ್ ಮೂಲಕ ಅಂಗಾಗ ಸಾಗಾಟ ಮಾಡಿ ಗದಗ ಜಿಲ್ಲೆಯ ಇತಿಹಾಸದಲ್ಲಿ ದಾಖಲಾಗಿ ಉಳಿತು.

ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಗೋವಿನಜೋಳ ರಸ್ತೆಗೆ ಸುರಿದು, ಗದಗ ಸೇರಿದಂತೆ ಜಿಲ್ಲೆಯೇ ವಿವಿಧ ವಿವಿಧೆಡೆ ರಸ್ತೆ ತಡೆದು ನಿರಂತರ ಹೋರಾಟಗಳು ನಡೆದವು. ಜಿಲ್ಲೆಯೇ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯಿತು. ಗದಗ ನಗರದಲ್ಲಿ ಪ್ರಥಮ ಬಾರಿಗೆ ಸಹಾದೇವಾನಂದ ಗಿರಿಜಿ ಮಹಾರಾಜರ ನೇತೃತ್ವದಲ್ಲಿ ಅತಿರುದ್ರ ಮಹಾಯಜ್ಞ ಮಹಾ ಯಾಗ (ಕಿರಿಯ ಕುಂಭಮೇಳ) ನಡೆಯಿತು.

ಡಿಸೆಂಬರ್: ಗದಗ ನಗರದ ಪ್ರಸಿದ್ಧ ಜ್ಯುವೇಲರಿ ಅಂಗಡಿಯಲ್ಲಿ ಕಳ್ಳತನವಾದ 6 ತಾಸಿನಲ್ಲಿ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಕಳ್ಳನನ್ನು ಬಂಧಿಸಿ 80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನ, ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಜಿಲ್ಲೆಯೇ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದ ಹೊರವಲಯದಲ್ಲಿ ಖಾಸಗಿ ಸ್ಕೂಲ್ ಬಸ್‌ನಿಂದ ಮಗುವೊಂದು ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಜರುಗಿತು. ಗದುಗಿನ ಶಾಂತಿ ಚಿತ್ರಮಂದಿರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಚಿತ್ರಮಂದಿರದ ಪೀಠೋಪಕರಣಗಳೆಲ್ಲ ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿತು. ₹135 ಕೋಟಿ ಬೆಳೆ ವಿಮೆ

₹135.35 ಕೋಟಿ ಮೊತ್ತದ ಬೆಳೆ ವಿಮೆ ಗದಗ ಜಿಲ್ಲೆಯ 65,854 ರೈತರ ಖಾತೆಗೆ ಜಮೆ ಆಗಿದೆ. ಫಸಲ್ ಬಿಮಾ ಯೋಜನೆಯಲ್ಲಿ 78,580 ರೈತರು 1,39,930 ಹೆಕ್ಟೇರ್‌ಗೆ ನೋಂದಣಿ ಮಾಡಿಸಿಕೊಂಡಿದ್ದರು. ಹೆಸರು, ಗೋದಿ ಮತ್ತು ಜೋಳ ಬೆಳೆಗೆ ಅಧಿಕ ನೋಂದಣಿ ಆಗಿತ್ತು. ನೋಂದಣಿ ಮಾಡಿಸಿದ ಪೈಕಿ 65,854 ರೈತರ ಖಾತೆಗೆ ₹135,35 ಕೋಟಿ ಜಮೆ ಆಗಿದೆ. ಇನ್ನುಳಿದಂತೆ ಅಗಸಿ, ಮೆಕ್ಕೆಜೋಳ, ಕುಸುಬಿ, ಸೂರ್ಯಕಾಂತಿ ಬೆಳೆಗಳಿಗೂ ಬೆಳೆವಿಮೆ ಪಾವತಿ ಆಗಿದೆ.

₹153 ಕೋಟಿ ಪರಿಹಾರ

ಮುಂಗಾರು ಮತ್ತು ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ ಕೃಷಿ ಬೆಳಗೆ ರಾಜ್ಯ ಸರ್ಕಾರ ಒಟ್ಟು ₹153 ಕೋಟಿಯನ್ನು ರೈತರಿಗೆ ಬೆಳೆ ಪರಿಹಾರವಾಗಿ ಬಿಡುಗಡೆ ಮಾಡಿದೆ.