ಮದ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ: ಶರಣಪ್ಪ ಗುರಿಕಾರ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮದ್ಯ ವ್ಯಸನದಿಂದ ಕುಟುಂಬಗಳ ನೆಮ್ಮದಿ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಾನವ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧಿಸಲು ಹಿರಿಯರು, ಯುವಕರು ಹಾಗೂ ಮಹಿಳೆಯರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಿರೇಮ್ಯಾಗೇರಿ ಗ್ರಾಮದ ಹಿರಿಯ ಶರಣಪ್ಪ ಗುರಿಕಾರ ಹೇಳಿದರು.ಗಾಂಧಿ ಬಳಗ ಕೊಪ್ಪಳ ಹಾಗೂ ಹಿರೇಮ್ಯಾಗೇರಿ ದೈವ ಬಾಂಧವರ ವತಿಯಿಂದ ಆಯೋಜಿಸಿದ್ದ ‘ಗಾಂಧಿ ಚಿಂತನ ಸಭೆ’ಯಲ್ಲಿ ಮಾತನಾಡಿದ ಅವರು,
ಗ್ರಾಮದಲ್ಲಿ ಮದ್ಯ ಮಾರಾಟದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇದನ್ನು ಮನಗಂಡು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ನಡೆಸಿ ಮದ್ಯ ಮಾರಾಟ ನಿಷೇಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ₹25 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗಾಂಧಿವಾದಿ ಶಿರೂರು ದೇವಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿ ಪ್ರತಿ ಗ್ರಾಮದಲ್ಲೂ ಪಾನ ನಿರೋಧ ಇರಬೇಕೆಂದು ಪ್ರತಿಪಾದಿಸಿದ್ದರು. ಮದ್ಯ ಹಾಗೂ ವ್ಯಸನಮುಕ್ತ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವ ಜತೆಗೆ ಗ್ರಾಮಾಭಿವೃದ್ಧಿಗೂ ಸಹಕಾರಿಯಾಗಲಿದೆ. ಹಿರೇಮ್ಯಾಗೇರಿ ಗ್ರಾಮಸ್ಥರ ನಿರ್ಧಾರ ಐತಿಹಾಸಿಕವಾಗಿದ್ದು, ಪಾನ ನಿರೋಧ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಗ್ರಾಮಸ್ಥ ನಿಂಗರಾಜ ಗಾಣಿಗೇರ ಮಾತನಾಡಿ, ಮದ್ಯ ಮಾರಾಟ ನಿಷೇಧಿಸಲು ಗ್ರಾಮಸ್ಥರು, ಯುವಕರು ಹಾಗೂ ಮಹಿಳೆಯರು ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದಾರೆ. ಈ ನಿರ್ಧಾರವನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದುಗಾಂಧಿ ಬಳಗದ ಸದಸ್ಯ ಶರಣಪ್ಪ ಬಾಚಲಾಪುರ ಮಾತನಾಡಿ, ಗ್ರಾಮಸ್ಥರು ಕೈಗೊಂಡ ನಿರ್ಧಾರಕ್ಕೆ ನೈತಿಕ ಬೆಂಬಲ ನೀಡಲು ಬಂದಿದ್ದೇವೆ. ಯುವಕರು ಹಾಗೂ ಮಹಿಳೆಯರ ಭವಿಷ್ಯದ ಕಾಳಜಿ ಈ ನಿರ್ಧಾರದಲ್ಲಿದೆ. ಹೀಗಾಗಿ ಗಾಂಧಿ ಬಳಗ ಗ್ರಾಮಸ್ಥರೊಂದಿಗೆ ಇರಲಿದೆ ಎಂದು ಹೇಳಿದರು.
ಗ್ರಾಮಸ್ಥರಾದ ನಿಂಗರಾಜ, ಅಶೋಕ, ಗಾಂಧಿ ಬಳಗದ ಸದಸ್ಯರಾದ ಪ್ರಾಣೇಶ, ಮಲ್ಲಪ್ಪ, ಹನುಮಂತಪ್ಪ ಕೊಡ್ಲಿ, ಪರಶುರಾಮ, ಸುರೇಶ, ಶಿವಪ್ಪ, ಶಿವರಾಯ, ಚಂದ್ರು, ಮಂಜುನಾಥ, ಮೂರ್ತಿ, ಸಿದ್ದಲಿಂಗಪ್ಪ ಸೇರಿದಂತೆ ಇತರರು ಇದ್ದರು.ಬೆಣಕಲ್ನಲ್ಲಿಯೂ ₹ 50 ಸಾವಿರ ದಂಡ
ಹಿರೇಮ್ಯಾಗೇರಿಯಲ್ಲಿ ಗಾಂಧಿ ಚಿಂತನ ಸಭೆ ಮುಗಿಸಿದ ಬಳಿಕ ಗಾಂಧಿ ಬಳಗದ ಸದಸ್ಯರು ಕುಕನೂರು ತಾಲೂಕಿನ ಬೆಣಕಲ್ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಿರುವ ಗ್ರಾಮಸ್ಥರ ನಿರ್ಧಾರವನ್ನು ಶ್ಲಾಘಿಸಿದರು. ಈ ವೇಳೆ ಗ್ರಾಮಸ್ಥರು ಮದ್ಯ ಮಾರಾಟ ಮಾಡಿದರೆ ₹50 ಸಾವಿರ ಹಾಗೂ ಮದ್ಯ ಸೇವಿಸಿ ಗಲಾಟೆ ಮಾಡಿದರೆ ₹25 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡರು.