ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳದಕ್ಷಿಣ ಭಾರತದ ಕುಂಭಮೇಳವೆಂಬ ಖ್ಯಾತಿಯ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಜ.5ರಂದು ನಡೆಯುವ ಜಾತ್ರೆಯ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಲು 35 ಗ್ರಾಮಗಳಲ್ಲಿ 25 ಟನ್ ಮಾದಲಿ ತಯಾರಿಸಲಾಗುತ್ತಿದೆ.
ಗವಿಸಿದ್ಧೇಶ್ವರ ಗೆಳೆಯರ ಬಳಗದವರು ಕಳೆದ 18 ವರ್ಷಗಳಿಂದ ಶ್ರೀಮಠದ ಜಾತ್ರೆಯ ಮಹಾದಾಸೋಹದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಾರಂಭದಿಂದಲೂ ದಾಖಲೆ ಪ್ರಮಾಣದ ಮಾದಲಿ ಮಾಡಿ ದಾಸೋಹಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ 100 ಕ್ವಿಂಟಲ್ ಮಾದಲಿ ಮಾಡುವ ಮೂಲಕ ರಾಜ್ಯ ವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದ ಈ ತಂಡ ಕ್ರಮೇಣ ಅದರ ಪ್ರಮಾಣ ಹೆಚ್ಚು ಮಾಡುತ್ತಲೇ ಬಂದಿದ್ದು, ಈ ವರ್ಷ 100 ಕ್ವಿಂಟಲ್ ಗೋಧಿ ಮತ್ತು 125 ಕ್ವಿಂಟಲ್ ಬೆಲ್ಲ, ಪುಟಾಣಿ, ಕೊಬ್ಬರಿ, ಗಸಗಸೆ ಸೇರಿದಂತೆ ಬೇಕಾಗುವ ಪದಾರ್ಥ ಬಳಸಿ 25 ಟನ್ ಮಾದಲಿ ತಯಾರಿಸುತ್ತಿದ್ದಾರೆ.35 ಗ್ರಾಮಗಳ ಜನರು ಭಾಗಿ:
ಪ್ರಾರಂಭದಲ್ಲಿ ಜೆಸಿಬಿ ಮೂಲಕ ಬೆಲ್ಲ ಅರೆದು ಮಾದಲಿ ಸಿದ್ಧ ಮಾಡುತ್ತಿದ್ದರು. ಈಗ ಅದನ್ನು ಬದಲಾಯಿಸಿ ಗ್ರಾಮಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ವರ್ಷ 35 ಗ್ರಾಮಗಳಿಗೆ ಹಂಚಿಕೆ ಮಾಡಿದ್ದು, ಗ್ರಾಮಗಳಲ್ಲಿರುವ ಜನಸಂಖ್ಯೆಯ ಆಧಾರದಲ್ಲಿ 1 ಕ್ವಿಂಟಲ್‌ನಿಂದ ಹಿಡಿದು 10 ಕ್ವಿಂಟಲ್‌ಗೆ ಬೇಕಾಗುವ ಬೆಲ್ಲ, ಗೋಧಿ ಹಿಟ್ಟು ಸೇರಿದಂತೆ ಅದಕ್ಕೆ ಬೇಕಾಗುವ ಪರಿಕರ ಹಂಚಿಕೆ ಮಾಡುತ್ತಾರೆ. ಅವರು ಸಿದ್ಧ ಮಾಡಿಕೊಟ್ಟ ಮೇಲೆ ಸಂಗ್ರಹಿಸಿಕೊಂಡು ಬರಲಾಗುತ್ತದೆ. ಇದಕ್ಕೆ ವಾರಗಟ್ಟಲೇ ಸಮಯ ಬೇಕಾಗುತ್ತದೆ. ಹೀಗಾಗಿ, 35 ಹಳ್ಳಿಗಳಲ್ಲಿ ಗವಿಸಿದ್ಧೇಶ್ವರ ಜಾತ್ರೆಗೆ ಮಾದಲಿ ಮಾಡುವ ಮತ್ತೊಂದು ಜಾತ್ರೆಯೇ ನಡೆದಿದೆ.ದಾಖಲೆಯೇ ಸರಿ:ಜಾತ್ರೆ ಮತ್ತು ದಾಸೋಹವೊಂದರಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಲಿ ಮಾಡುತ್ತಿರುವುದು ದಾಖಲೆಯೇ ಸರಿ. ನಾಡಿನ ಯಾವ ಮಠಗಳ ಪರಂಪರೆಯಲ್ಲಿಯೂ 25 ಟನ್ ಮಾದಲಿ ಮಾಡಿರುವ ಉದಾಹರಣೆ ಇಲ್ಲ. ಇಷ್ಟಾದರೂ ಸಹ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ನಡೆಯುವ ಮಹಾದಾಸೋಹದಲ್ಲಿನ ಲಕ್ಷಾಂತರ ಭಕ್ತರು ಪ್ರಸಾದ ಸೇವನೆ ಮಾಡುವುದರಿಂದ ಇದು ವಾರದಲ್ಲಿ ಖಾಲಿ ಆಗುತ್ತದೆ. ಉಳಿದಂತೆ ಬೇರೆ ಬೇರೆ ಸಿಹಿ ಪದಾರ್ಥ ನೀಡಲಾಗುತ್ತದೆ.