ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ನೀಡುವ ಉದ್ದೇಶದೊಂದಿಗೆ ರಾಜ್ಯದ ತರಬೇತಿ ಪಡೆದ ನಾಲ್ಕು ಕುಮ್ಕಿ ಆನೆಗಳನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರಿಸಿದರು.ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷ ತಡೆಗೆ ಜನವಸತಿ ಪ್ರದೇಶಗಳಿಗೆ ದಾಳಿ ಮಾಡುವ ಕಾಡಾನೆಗಳನ್ನು ಸೆರೆ ಹಿಡಿಯಲು ಕುಮ್ಕಿ ಆನೆಗಳ ಅವಶ್ಯಕತೆಯಿದ್ದು, ಅದನ್ನು ರಾಜ್ಯದಿಂದ ನೀಡುವಂತೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಪವನ್ ಕಲ್ಯಾಣ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಸಿದ್ದರಾಮಯ್ಯ ಅನುಮತಿಸಿದ ನಂತರ ಕುಮ್ಕಿ ಆನೆಗಳಿಗೆ ತರಬೇತಿ ನೀಡಲಾಗಿತ್ತು.
ಆ ಆನೆಗಳನ್ನು ಬುಧವಾರ ವಿಧಾನಸೌಧ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಡಿಸಿಎಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 6395 ಆನೆಗಳಿದ್ದು, ದೇಶದಲ್ಲಿಯೇ ಅತ್ಯಧಿಕ ಆನೆಗಳನ್ನು ಹೊಂದಿದ ರಾಜ್ಯವಾಗಿದೆ. ಆನೆಗಳ ಸಂರಕ್ಷಣೆಯಲ್ಲಿ ಕರ್ನಾಟಕ ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿದೆ. ಜತೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾನವ-ಆನೆ ಸಂಘರ್ಷದ ಪ್ರಮಾಣವನ್ನೂ ಕಡಿಮೆ ಮಾಡಲಾಗಿದೆ. ಹಾಗೆಯೇ, ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಮೂಲಕ ನೆರೆ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದರ ಜತೆಗೆ, ಅಲ್ಲಿನ ಜನರ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಂಧ್ರದ ವಿಘ್ನ ನಿವಾರಣೆಯಾಗಲಿ:ಆನೆಗಳು ವಿನಾಯಕನ ಪ್ರತಿರೂಪ. ಅಂತಹ ವಿಘ್ನ ನಿವಾರಕವನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿದ್ದು, ಅದರಿಂದ ಅಲ್ಲಿನ ವಿಘ್ನಗಳೆಲ್ಲ ನಿವಾರಣೆಯಾಗಲಿ. ಕರ್ನಾಟಕದಲ್ಲಿ ವನ್ಯಜೀವಿ ಸಂಪತ್ತು ಉತ್ತಮವಾಗಿದ್ದು, ಇನ್ನೂ ಆನೆಗಳನ್ನು ಆಂಧ್ರಪ್ರದೇಶಕ್ಕೆ ನೀಡುವಷ್ಟು ಶಕ್ತಿ ನಮ್ಮ ರಾಜ್ಯಕ್ಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಇನ್ನೆರಡು ಆನೆ ಶೀಘ್ರ ಹಸ್ತಾಂತರ: ಚಿಕ್ಕಮಗಳೂರಿನಲ್ಲಿ 2022ರಲ್ಲಿ ಸರೆ ಹಿಡಿಯಲಾದ ಕೃಷ್ಣ (15), ಹೊನ್ನಾಳಿಯಲ್ಲಿ 2023ರಲ್ಲಿ ಸೆರೆ ಹಿಡಿಯಲಾದ ಅಭಿಮನ್ಯು (14), ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿದ ದೇವ (39) ಹಾಗೂ ದುಬಾರೆ ಶಿಬಿರದಲ್ಲೇ ಜನಿಸಿದ ರಂಜನ್ (26) ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ. ಇನ್ನೂ 2 ಆನೆಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಿದೆ.
-ಬಾಕ್ಸ್-ನಾಡಗೀತೆ ಹಾಡಿದ ಪವನ್,
ಕನ್ನಡದಲ್ಲೇ ಮಾತು!ಕಾರ್ಯಕ್ರಮದಲ್ಲಿ ಕರ್ನಾಟಕದ ನಾಡಗೀತೆಯ ಮೊದಲ ನಾಲ್ಕು ಸಾಲುಗಳನ್ನಾಡುವ ಮೂಲಕ ಮಾತನ್ನಾರಂಭಿಸಿದ ಪವನ್ ಕಲ್ಯಾಣ್, ರಾಷ್ಟ್ರಕವಿ ಕುವೆಂಪು ಅವರು ಪರಿಸರ ಕುರಿತಂತೆ ರಚಿಸಿದ ಕವಿತೆಯನ್ನು ವಾಚಿಸಿದರು. ಜತೆಗೆ ಇಂಗ್ಲಿಷ್, ತೆಲಗು ಜತೆಗೆ ಕನ್ನಡದಲ್ಲೂ ಭಾಷಣವನ್ನು ಮಾಡಿ ಅಚ್ಚರಿ ಮೂಡಿಸಿದರು. ಕರ್ನಾಟಕವು ಕುಮ್ಕಿ ಆನೆಗಳನ್ನು ನೀಡುವ ಮೂಲಕ ತಮ್ಮ ಹೃದಯವನ್ನೇ ಆಂಧ್ರಪ್ರದೇಶಕ್ಕಾಗಿ ತೆರೆದಿದೆ ಎಂದರು.
============================================================= ನಿಜವಾದ ಸಹೋದರ ರಾಜ್ಯದಂತೆ ಆಂಧ್ರಪ್ರದೇಶದೊಂದಿಗೆ ನಡೆದುಕೊಂಡಿದೆ. ಈ ಪ್ರಕ್ರಿಯೆಯಿಂದ ಎರಡೂ ರಾಜ್ಯಗಳ ಗಡಿ ಭಾಗದ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ಸಿಗಲಿದೆ. 20ಕ್ಕೂ ಹೆಚ್ಚಿನ ವರ್ಷಗಳ ಶ್ರಮದ ಫಲವಾಗಿ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆಗಳು ದೊರೆತಿದ್ದು, ಇದು ಮುಂಚೆಯೇ ನಡೆದಿದ್ದರೆ ಆಂಧ್ರಪ್ರದೇಶದ ನೂರಾರು ಜನರ ಜೀವ ಉಳಿಯುತ್ತಿತ್ತು. ಹಾಗೆಯೇ, ಕುಮ್ಕಿ ಆನೆಗಳ ಜತೆಗೆ ಕರ್ನಾಟಕದೊಂದಿಗೆ ಸೋಲಾರ್ ಫೆನ್ಸಿಂಗ್, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕರ್ನಾಟಕದಿಂದ ಕಲಿಯಬೇಕಿದೆ ಎಂದು ಪವನ್ ಕಲ್ಯಾಣ್ ಹೇಳಿದರು.ಈಶ್ವರ್ ಖಂಡ್ರೆ ಅವರು ಕುಮ್ಕಿ ಆನೆಗಳ ಬಗ್ಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಅವುಗಳ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾನೆ. ನಾನೇ ವೈಯಕ್ತಿಕವಾಗಿ ಕಾಲಕಾಲಕ್ಕೆ ಕುಮ್ಕಿ ಆನೆಗಳ ಆರೋಗ್ಯ ಪರಿಶೀಲಿಸುತ್ತೇನೆ. ಜತೆಗೆ ಅವುಗಳಿಗೆ ನೀಡಲಾಗುವ ಆಹಾರ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದರು.
-ಬಾಕ್ಸ್-ಸಿಎಂಗೆ ಕುವೆಂಪು ಭಾವಚಿತ್ರ ಉಡುಗೊರೆ
ಕಾರ್ಯಕ್ರಮದ ನಂತರ ಪವನ್ ಕಲ್ಯಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುವೆಂಪು ಮತ್ತು ಅರಣ್ಯ ಕುರಿತ ಅವರ ಕವನ ಮುದ್ರಿತವಾದ ಭಾವಚಿತ್ರವನ್ನು ನೀಡಿ ಗಮನಸೆಳೆದರು. ಅದಕ್ಕೆ ಪ್ರತಿಯಾಗಿ ಪವನ್ ಕಲ್ಯಾಣ್ ಅವರಿಗೆ ರಾಜ್ಯ ಸರ್ಕಾರದಿಂದ ಮೈಸೂರು ಅರಮನೆಯ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು.-ಬಾಕ್ಸ್-
ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆದಸರಾ ಆನೆಗಳು ವೀರನಹೊಸಹಳ್ಳಿಯಿಂದ ಮೈಸೂರಿಗೆ ಬರುವಾಗ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡುವ ರೀತಿಯಲ್ಲಿಯೇ ಕುಮ್ಕಿ ಆನೆಗಳಿಗೆ ಪೂಜೆ ಸಲ್ಲಿಸಿ ಆಂಧ್ರಪ್ರದೇಶಕ್ಕೆ ಬೀಳ್ಕೊಡಲಾಯಿತು.
-ಬಾಕ್ಸ್-ಜನಸೇನಾ ಬಾವುಟ ಪ್ರದರ್ಶನಕ್ಕೆ ತಡೆ
ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಜನಸೇನಾ ಪಕ್ಷದ ಚಿನ್ಹೆ ಮತ್ತು ಪವನ್ ಕಲ್ಯಾಣ್ ಭಾವಚಿತ್ರವಿರುವ ಬಾವುಟವನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಅದಕ್ಕೆ ತಡೆಯೊಡ್ಡಿದ ಪೊಲೀಸರು, ಅಭಿಮಾನಿಗಳನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದ್ದಲ್ಲದೆ ಜನಸೇನಾ ಪಕ್ಷದ ಬಾವುಟ ಕಿತ್ತುಕೊಂಡರು.----- ಕುಮ್ಕಿ ಆನೆ ಹಸ್ತಾಂತರದ ವೇಳೆ ಮಾಡಿಕೊಳ್ಳಲಾಗಿರುವ ಒಪ್ಪಂದದಲ್ಲಿ ಆನೆಗಳ ಆರೋಗ್ಯದ ಬಗ್ಗೆ ಪ್ರತಿ ವರ್ಷ ವರದಿಯನ್ನು ರಾಜ್ಯಕ್ಕೆ ನೀಡಬೇಕು ಎಂದು ತಿಳಿಸಲಾಗಿದೆ.- ಕುಮ್ಕಿ ಆನೆಗಳ ಜತೆಗೆ ಆಂಧ್ರಪ್ರದೇಶದ 25 ಮಾವುತರು ಮತ್ತು ಕಾವಾಡಿಗರಿಗೆ ರಾಜ್ಯ ಅರಣ್ಯ ಇಲಾಖೆಯಿಂದ 1 ತಿಂಗಳವರೆಗೆ ತರಬೇತಿ ನೀಡಲಾಗಿದೆ. ಆನೆಗಳು ಸೇವಿಸುವ ಆಹಾರ, ಅವುಗಳ ವರ್ತನೆ ಸೇರಿದಂತೆ ಮತ್ತಿತರ ವಿವರಗಳನ್ನೂ ನೀಡಲಾಗಿದೆ.
ಸಿದ್ಧಾಂತ ಬೇರೆಯಾದರೂ ಜನ ಸೇವೆ ಮುಖ್ಯ:ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಆಂಧ್ರಪ್ರದೇಶದ ಕಾಡಾನೆ ದಾಳಿ ತಡೆಗೆ ನೆರವಾಗುವಂತೆ ಪವನ್ ಕಲ್ಯಾಣ್ ಕೋರಿದ ಕೂಡಲೇ ಕುಮ್ಕಿ ಆನೆಗಳ ಹಸ್ತಾಂತರಕ್ಕೆ ನಿರ್ಧರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವ ಇಟ್ಟಾಗ ಅವರು ಒಪ್ಪಿಗೆ ನೀಡಿದರು. ನಮ್ಮ ಮತ್ತು ಆಂಧ್ರಪ್ರದೇಶ ಸರ್ಕಾರದಲ್ಲಿರುವ ಪಕ್ಷಗಳ ಸಿದ್ಧಾಂತಗಳು ಬೇರೆಬೇರೆ. ಆದರೆ, ಜನರಿಗೆ ಸಮಸ್ಯೆ ಬಂದಾಗ ನಾವೆಲ್ಲ ಭಾರತೀಯರು ಎಂಬಂತೆ ಕೆಲಸ ಮಾಡಬೇಕು. ಅದನ್ನೇ ನಾವು ಮಾಡಿದ್ದೇವೆ. ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ. ಹಾಗೆಯೇ, ನಮ್ಮಿಂದ ಪಡೆಯುವ ಕುಮ್ಕಿ ಆನೆಗಳನ್ನು ಉತ್ತಮವಾಗಿ ನೋಡಿಕೊಳ್ಳಿ ಎಂದು ಪವನ್ ಕಲ್ಯಾಣ್ ಅವರಲ್ಲಿ ಮನವಿ ಮಾಡಿದರು.ಅಲ್ಲದೆ, ಈಶ್ವರ್ ಖಂಡ್ರೆ ಮಾತನ್ನಾರಂಭಿಸುವುದಕ್ಕೂ ಮುನ್ನ ಪ್ರಕೃತಿಯ ಮಹತ್ವ ಸಾರುವ ಸಂದೇಶವನ್ನು ತೆಲುಗಿನಲ್ಲಿ ವಾಚಿಸಿದರು.ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಬಿ.ಎಸ್. ಸುರೇಶ್, ರಹೀಂ ಖಾನ್, ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಇತರರಿದ್ದರು.