ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಕ್ಷೇತ್ರ ವ್ಯಾಪ್ತಿಯ ಕನಕಗಿರಿ ಹಾಗೂ ಕಾರಟಗಿ ನಗರಗಳ ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕಾಗಿ ಪ್ರತ್ಯೇಕ ₹42 ಕೋಟಿ ಅನುದಾನ ಮೀಸಲಿಡಲಾಗಿದೆ. ಜನವರಿ ತಿಂಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನದ ರಥದ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಜರಾಯಿ ಇಲಾಖೆಗೆ ಒಳಪಡುವ ಈ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ₹50 ಲಕ್ಷ, ರಥದ ಶೆಡ್ ನಿರ್ಮಾಣಕ್ಕೆ ₹17.60 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದರು.ಕನಕಗಿರಿಯ ಕಲ್ಮಠದ ಶ್ರೀಗಳು ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ನೀಡಿದ್ದಾರೆ. ಗಂಗಾವತಿ ರಸ್ತೆಯ ತಬ್ರೇಜ್ ಜಮೀನಿನಲ್ಲಿ ಪ್ರಜಾಸೌಧ(ತಹಶೀಲ್ ಕಚೇರಿ) ನಿರ್ಮಾಣ ಮಾಡಲು ಕಕ ಹಾಗೂ ಕಂದಾಯ ಇಲಾಖೆಯಡಿ ₹೧೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಸುಳೇಕಲ್ ಬಳಿಯಲ್ಲಿ ಅಗ್ನಿಶಾಮಕ ದಳ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ನನ್ನ ಐದು ವರ್ಷಗಳ ಅವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಅನುದಾನವನ್ನು ಮೀಸಲಿಟ್ಟು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇನೆ ಎಂದರು.ಪಪಂ ಅಧ್ಯಕ್ಷೆ ಹುಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ತಹಸೀಲ್ದಾರ ವಿಶ್ವನಾಥ ಮುರುಡಿ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಸೇರಿ ಇತರರು ಇದ್ದರು.ಕುಕನೂರು ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆ- ₹ 42 ಕೋಟಿ ಮಂಜೂರು:
ಕುಕನೂರು ಪಟ್ಟಣದ ೩೦ ಬೆಡ್ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಅದರ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸುಮಾರು ₹೪೨ ಕೋಟಿ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿದೆ.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಕುಕನೂರದಲ್ಲಿ ನೂರು ಹಾಸಿಗೆಯ ಆಸ್ಪತ್ರೆ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಹಿನ್ನೆಲೆ ಕುಕನೂರಿನ 30 ಹಾಸಿಗೆಯ ಆಸ್ಪತ್ರೆಯನ್ನು ಬಸವರಾಜ ರಾಯರಡ್ಡಿ ಅವರ ಕಾಳಜಿ ಮೇರೆಗೆ ನೂರು ಹಾಸಿಗೆ ಆಸ್ಪತ್ರೆ ಆಗಿ ಮೇಲ್ದೆರ್ಜೆಗೇರಿಸಿದ್ದು, ಸದ್ಯ ಕಟ್ಟಡ ನಿರ್ಮಾಣಕ್ಕೆ ₹42 ಕೋಟಿ ಹಣ ಸಹ ಮಾಡಿಸಿದ್ದಾರೆ.ಈ ಭಾಗದಲ್ಲಿ ಗರ್ಭೀಣಿಯರ, ಶಿಶುಗಳ ಮರಣ ಸಂಖ್ಯೆ ಸಹ ಹೆಚ್ಚಿದ್ದು, ತುರ್ತಾಗಿ ಆರೋಗ್ಯ ಸೇವೆ ಸಿಗಬೇಕು. ಅಲ್ಲದೆ ಈ ಭಾಗದಲ್ಲಿ ಜನರು ಬಡತನ ರೇಖೆಯಲ್ಲಿದ್ದು ದೂರದ ಖಾಸಗಿ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿದೆ. ಆರೋಗ್ಯ ಸೇವೆ ಸ್ಥಳೀಯ ಮಟ್ಟದಲ್ಲಿ ತಕ್ಷಣ ದೊರೆಯಲೆಂದು ನೂರು ಹಾಸಿಗೆ ಆಸ್ಪತ್ರೆ ಮಂಜೂರು ಮಾಡಿಸಿ ಅನುದಾನ ನೀಡಿ ರಾಯರಡ್ಡಿ ಕಾರ್ಯ ಕೈಗೊಂಡಿದ್ದಾರೆ.ಕುಕನೂರು ತಾಲೂಕಿನ ಭಾಗದ ಜನರಿಗೆ ತುರ್ತಾಗಿ ಆರೋಗ್ಯ ಸೇವೆ ಸಿಗಲೆಂದು ಕುಕನೂರಿನ 30 ಹಾಸಿಗೆ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆಸ್ಪತ್ರೆ ಕಟ್ಟಡ, ಸವಲತ್ತುಗಳಿಗೆ ₹42 ಕೋಟಿ ಹಣ ಸಹ ಮಂಜೂರು ಆಗಿದೆ. ಇದರಿಂದ ಸ್ಥಳೀಯ ಜನರ ಆರೋಗ್ಯ ಸೇವೆಗೆ ಅನುಕೂಲ ಆಗಲಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))