ಅಪ್ಪರ್ ಭದ್ರಾಗೆ ಘೋಷಿತ 5300 ಕೋಟಿ ರು. ನೆರವು ನೀಡಿ

| Published : Aug 07 2024, 01:06 AM IST

ಅಪ್ಪರ್ ಭದ್ರಾಗೆ ಘೋಷಿತ 5300 ಕೋಟಿ ರು. ನೆರವು ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

5300 crore announced for Upper Bhadra. Give assistance

-ನಿರ್ಮಲಾ ಮೇಡಂಗೆ ರಾಜ್ಯದಿಂದ ಹೋಯ್ತು ಮತ್ತೊಂದು ಪತ್ರ । ಪತ್ರದಲ್ಲಿ ನೆರವು ಅಗತ್ಯದ ಪ್ರತಿಪಾದನೆ

-------

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು ಕೋರಿ ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆಯಷ್ಟೇ ಮತ್ತೊಂದು ಪತ್ರ ಬರೆದಿದೆ. ಕಳೆದ ಜುಲೈ 31ರಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಸಂಪರ್ಕಿಸಿ ಭದ್ರಾ ಮೇಲ್ದಂಡೆಗೆ ನೆರವು ಕೋರಿದ್ದರು. ನಂತರದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದಿಂದ ಆಗಸ್ಟ್ 3ರಂದು ಕೇಂದ್ರಕ್ಕೆ ಪತ್ರ ರವಾನೆಯಾಗಿದೆ. ರಾಷ್ಟ್ರೀಯ ಯೋಜನೆ ಅಲ್ಲದಿದ್ದರೂ PMKSY-AIBP ಅಡಿ ಅನುದಾನದ ನೆರವು ನೀಡುವಂತೆ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಪತ್ರ ಬರೆದಿದ್ದಾರೆ. 2022-23 ರಲ್ಲಿ ಕೇಂದ್ರ ಬಜೆಟ್ ಘೋಷಣೆಯನ್ನು ಪತ್ರದಲ್ಲಿ ನೆನಪಿಸಲಾಗಿದೆ.

ಭದ್ರಾ ಮೇಲ್ದಂಡೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಮೊತ್ತ ಎರಡು ಸಾವಿರ ಕೋಟಿರು ದಾಟಿದೆ. ಅನುದಾನ ಬಿಡುಗಡೆ ಮಾಡದ ಹೊರತು ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಸಾಧ್ಯವಿಲ್ಲ ಎಂಬ ಮೌಖಿಕ ಸಂದೇಶ ಈಗಾಗಲೇ ಜಲ ಸಂಪನ್ಮೂಲ ಇಲಾಖೆಗೆ ರವಾನಿಸಿದ್ದಾರೆ. ಇತ್ತ ರಾಜ್ಯ ಸರ್ಕಾರವೂ ಹಣ ನೀಡುತ್ತಿಲ್ಲ, ಅತ್ತ ಕೇಂದ್ರವೂ ಘೋಷಿತ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ, ಭದ್ರಾ ಕಾಮಗಾರಿ ಮುಂದುವರಿಸುವುದು ಜನಸಂಪನ್ಮೂಲ ಇಲಾಖೆಗೆ ಸವಾಲಾಗಿದೆ. ಅಧಿಕಾರಿಗಳು ಸರ್ಕಾರ ಮತ್ತು ಗುತ್ತಿಗೆದಾರರ ನಡುವೆ ಅಡಕತ್ತರಿಗೆ ಸಿಲುಕಿದಂತಾಗಿದೆ.

ಕೇಂದ್ರದ ಘೋಷಿತ 5300 ಕೋಟಿ ರು. ಅನುದಾನ ಬಿಡುಗಡೆಯಾಗುವ ತನಕ ನೆನಪಿನ ಓಲೆ ಬರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಈ ಮೊದಲು ಜೂನ್ 19 ರಂದು ಇಂತಹದ್ದೇ ಪತ್ರ ರಾಜ್ಯದಿಂದ ಕೇಂದ್ರಕ್ಕೆ ರವಾನೆಯಾಗಿತ್ತು. ತರುವಾಯ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಎಲ್ಲ ಲೋಕಸಭೆ ಸದಸ್ಯರ (ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೇರಿ) ಸಭೆ ಕರೆದು ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೆ ಪ್ರಸ್ತಾಪಿಸಿ ಹಕ್ಕೊತ್ತಾಯ ಮಂಡಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಅನುದಾನ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಕರ್ನಾಟಕದವರೇ ಆದ ನಿರ್ಮಲಾ ಸೀತರಾಮನ್ ಹಣಕಾಸು ಸಚಿವರಾಗಿದ್ದರಿಂದ ಕರ್ನಾಟಕ ಅವರ ಮೇಲೆ ಹೆಚ್ಚು ಭರವಸೆ ಇರಿಸಿತ್ತು. ಕೇಂದ್ರ ಬಜೆಟ್ ಮಂಡನೆಯಾದ ನಂತರವೂ ಭದ್ರಾ ಮೇಲ್ದಂಡೆಗೆ ನೆರವು ಬಾರದ ಕಾರಣ ರಾಜ್ಯದಿಂದ ಮತ್ತೊಂದು ನೆನಪಿನೋಲೆ ಹೋಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜುಲೈ 31ರಂದು ಪ್ರಧಾನಿ ಹಾಗೂ ಜಲಶಕ್ತಿ ಸಚಿವರ ಭೇಟಿ ಮಾಡಿ ಭದ್ರಾ ಮೇಲ್ದಂಡೆಗೆ ನೆರವು ಕೋರಿದ್ದರು. ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಮತ್ತು ಜಲ ಮರುಪೂರಣ ಅಗತ್ಯವಾಗಿದೆ. 367 ಕೆರೆಗಳ ತುಂಬಿಸಿ ಅಂತರ್ಜಲ ಮಟ್ಟ ಮತ್ತು ಕುಡಿವ ನೀರನ್ನು ಒದಗಿಸಬೇಕಾಗಿದೆ ಎಂಬ ಸಂಗತಿಯ ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.

ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಸೇರಿಸುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಪರಿಗಣನೆಯಲ್ಲಿದೆ. ಪ್ರಾಜೆಕ್ಟ್‌ನ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಕೇಂದ್ರ ಜಲಶಕ್ತಿ, ಆರ್‌ಡಿ ಮತ್ತು ಜಿಆರ್‌ನ ಟಿಎಸಿ 16215.48 ಕೋಟಿ ರು ಹೂಡಿಕೆ ಕ್ಲಿಯರೆನ್ಸ್ ಸ್ವೀಕರಿಸಿದೆ. ಹೈ-ಪವರ್ಡ್ ಸ್ಟೀರಿಂಗ್ ಕಮಿಟಿ, ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಮತ್ತು ಕ್ಲಿಯರೆನ್ಸ್ ಮಾಡಲು ಶಿಫಾರಸು ಮಾಡಿದೆ. ಅಲ್ಲದೆ, ಹಣಕಾಸು ಸಚಿವಾಲಯದ ಸಾರ್ವಜನಿಕ ಹೂಡಿಕೆ ಮಂಡಳಿ (PIB) ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಶಿಫಾರಸು ಮಾಡಿದೆ ಎಂಬ ಅಂಶವ ಪತ್ರದಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರವು 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ರು. 53000 ಕೋಟಿಗಳ ಕೇಂದ್ರ ಸಹಾಯವನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸಹಾಯ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಗೆ ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ ಗುಪ್ತ ಬರೆದ ಪತ್ರದಲ್ಲಿ ವಿನಂತಿಸಲಾಗಿದೆ.

-------------

ಪೋಟೋ: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಜುಲೈ 31ರಂದು ದೆಹಲಿಯಲ್ಲಿ ಪ್ರಧಾನಿ ಭೇಟಿಯಾಗಿ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು.

--------

ಫೋಟೋ: 6 ಸಿಟಿಡಿ5

-----------

ಅಜ್ಜಂಪುರದ ಬಳಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಲಿಫ್ಟ್ ಮಾಡುತ್ತಿರುವುದು.

-------------

ಫೋಟೋ: 6ಸಿಟಿಡಿ6

--------

....ಕೋಟ್....

ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರು. ಘೋಷಿಸಲಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮದ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡವಂತೆ ಆಗಸ್ಟ್ 3ರಂದು ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ ಗುಪ್ತ ಕೇಂದ್ರ ಸರ್ಕಾರದ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಗೆ ಪತ್ರ ಬರೆದಿದ್ದಾರೆ.

-ಎಫ್.ಹೆಚ್.ಲಮಾಣಿ, ಮುಖ್ಯ ಇಂಜಿನಿಯರ್, ಭದ್ರಾ ಮೇಲ್ದಂಡೆ

(ಫೋಟೋ ಲಮಾಣಿ)

------------

.....ಕೋಟ್.....

ಭದ್ರಾ ಮೇಲ್ದಂಡೆಗೆ ಘೋಷಿತ 5300 ಕೋಟಿ ರು. ಅನುದಾನ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುವುದು ತರವಲ್ಲ. ರಾಜ್ಯ ಸರ್ಕಾರ ಎತ್ತಿನ ಹೊಳೆಗೆ ಕಾಮಗಾರಿಗೆ ಅನುದಾನ ವ್ಯಯಿಸಿದಂತೆ ಭದ್ರಾ ಮೇಲ್ದಂಡೆಗೆ ಕೊಡುತ್ತಿಲ್ಲ. ಈ ತರಹದ ತಾರತಮ್ಯ ನೀತಿ ಸರಿಯಲ್ಲ. ಕಾಮಗಾರಿಗೆ ವೇಗ ನೀಡದಿದ್ದರೆ ಹೋರಾಟ ಅನಿವಾರ್ಯ.

-ಬಿ.ಎ.ಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ

(ಪೋಟೋ: ಲಿಂಗಾರೆಡ್ಡಿ)

-------