ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮಹಾಸಾದ್ವಿ ಶ್ರೀಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ತತ್ವಾದರ್ಶ, ಸಿದ್ಧಾಂತ, ಸಂದೇಶಗಳನ್ನು ನಾವೇಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸೋಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು.ತಾಲೂಕಿನ ಮೆಟಗುಡ್ಡ ಗ್ರಾಮದ ಶ್ರೀ ಹೇಮ-ವೇಮ ಸಂಘ ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ಮೇಮ ನೂತನ ಸಭಾಭವನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೆಟಗುಡ್ಡ ಗ್ರಾಮದ ರೆಡ್ಡಿ ಸಮುದಾಯದವರು ಸರ್ಕಾರದ ಅನುದಾನ ಮತ್ತು ಖಾಸಗಿ ವ್ಯಕ್ತಿಗಳಿಂದ ದೇಣಿಗೆ ಪಡೆದು₹1.20 ಕೋಟಿ ವೆಚ್ಚದಲ್ಲಿ ದೇವಸ್ಥಾನ ಮತ್ತು ಸಭಾಭವನ ನಿರ್ಮಿಸಿರುವುದು ಸಮಾಜಕ್ಕೆ ಹೆಮ್ಮೆ ಮತ್ತು ಅಭಿಮಾನ ತರುವಂತದಾಗಿದೆ. ಸಮಾಜದ ರಚನಾತ್ಮಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸರ್ವರಿಗೂ ತಾವು ಅಭಿನಂದಿಸುವುದಾಗಿ ಹೇಳಿದರು.
ಈ ಹಿಂದಿನ ದಿನಮಾನದಲ್ಲಿ ಹೇಮರಡ್ಡಿ ಮಲ್ಲಮ್ಮಳನ್ನು ಕೇವಲ ಪ್ರತಿವರ್ಷ ಜ.19 ರಂದು ಮಾತ್ರ ನೆನಪಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಎರೆಹೊಸಳ್ಳಿ ಶ್ರೀಗಳ ಪರಿಶ್ರಮದಿಂದ ಪ್ರತಿಯೊಂದು ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿರುವುದರಿಂದ ಮನೆ ಮನೆಗೂ ಹೇಮರಡ್ಡಿ ಮಲ್ಲಮ್ಮನ ಮಹಿಮೆ ತಲುಪುವಂತಾಗಿದೆ ಎಂದರು.ಮಹಾಯೋಗಿ ವೇಮನರು ಜಗತ್ತು ಕಂಡ ಮಹಾನ್ ಯೋಗಿಯಾಗಿದ್ದಾರೆ. ಅವರ ಸಾಹಿತ್ಯ, ಸಂದೇಶ, ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತ ಸಮುದಾಯದ ಜೊತೆಗೆ ಇತರರಿಗೂ ಮಾದರಿಯಾಗಿ ಜೀವಿಸೋಣ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಮಲ್ಲಮ್ಮ ಮತ್ತು ವೇಮನರ ಬದುಕು ನಮಗೆಲ್ಲರಿಗೂ ದಾರಿದೀಪವಾಗಿದೆ. ಅವರಂತೆ ನಾವು ಬದುಕು ಸಾಗಿಸಬೇಕೆಂದು ಹೇಳಿ ಹೇಮ ವೇಮ ಶಾಲೆಗೆ ಸಮುದಾಯ ಭವನಕ್ಕೆ ಹಂತ ಹಂತವಾಗಿ ₹40 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.
ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ರೆಡ್ಡಿ ಸಮುದಾಯದವರು ಕೃಷಿ ಚಟುವಟಿಕೆ ಜೊತೆಗೆ ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆಂದು ಹೇಳಿದರು.ಮಾಜಿ ಸಚಿವ ಎಸ್.ಆರ್.ಪಾಟೀಲ ಸಾಂದರ್ಭಿಕವಾಗಿ ಮಾತನಾಡಿ, ತಾವು ವೈಯಕ್ತಿಕವಾಗಿ ₹2 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ವಿಪ ಸದಸ್ಯ ಪಿ.ಎಚ್.ಪೂಜಾರ ಇತರರು ಮಾತನಾಡಿದರು.
ಎರೆಹೊಸಳ್ಳಿಯ ವೇಮನಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದರು. ಹೇಮ-ವೇಮ ಸಂಸ್ಥೆಯ ಅಧ್ಯಕ್ಷ ಶಿವನಗೌಡ ನಾಡಗೌಡ ಅಧ್ಯಕ್ಷತೆವಹಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಬಿ.ಆರ್.ಯಾವಗಲ, ಮಾಜಿ ಶಾಸಕ ಆರ್.ವಿ.ಪಾಟೀಲ, ಎಸ್.ಟಿ.ಪಾಟೀಲ, ಆರ್.ಎಸ್.ತಳೇವಾಡ, ದಯಾನಂದ ಪಾಟೀಲ, ಎಲ್.ಆರ್.ಉದಪುಡಿ, ಕಲ್ಲಪ್ಪ ನಾಯಿಕ, ಡಾ.ತಿಮ್ಮಣ್ಣ ಅರಳಿಕಟ್ಟಿ, ತಮ್ಮಣ್ಣ ಅರಳಿಕಟ್ಟಿ, ಬಾಬು ನಾಯಿಕ, ಬಾಬು ಪಾಟೀಲ ಸೇರಿದಂತೆ ಇತರೆ ಗಣ್ಯರು ವೇದಿಕೆ ಮೇಲೆ ಇದ್ದರು.ಹೇಮ-ವೇಮ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ವ್ಹಿ.ಆರ್.ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ತುಬಾಕಿ ಸ್ವಾಗತಿಸಿದರು. ಶಿವಾನಂದ ಮರೇಗುದ್ದಿ ಮತ್ತು ರೇಣುಕಾ ಗಿರಡ್ಡಿ ನಿರೂಪಿಸಿದರು. ಎ.ವೈ.ಉದಪುಡಿ ವಂದಿಸಿದರು. ಹಣಮಂತ ಸೋರಗಾಂವಿ ತಂಡದವರು ರೈತಗೀತೆ ಹಾಡಿದರು.
----ಕೋಟ
ಹೇಮರಡ್ಡಿ ಮಲ್ಲಮ್ಮನ ಪ್ರೇರಣೆಯಿಂದ ಮಹಾಯೋಗಿ ವೇಮನ ನಿರೂಪಿತರಾದರು. ನಮ್ಮತನವನ್ನು ನೆನಪಿಸುವ ವೃತ್ತಿಯನ್ನು ಮರೆಯದೇ ನಮ್ಮ ಸಮಾಜ ಬೇರೆ ಬೇರೆ ರಂಗದಲ್ಲಿಯೂ ವಿಶೇಷ ಸಾಧನೆ ಮಾಡಿದೆ. ಅನ್ಯಾಯ ಕಂಡಲ್ಲಿ ಪ್ರತಿಭಟನೆಗೆ ನಮ್ಮ ಸಮುದಾಯ ಕೂಡಲೇ ಮುಂದಾಗುತ್ತದೆ. ವೇಮನರ ಚಿಂತನೆಯೊಂದಿಗೆ ನಾವೆಲ್ಲರೂ ಜೀವನದಲ್ಲಿ ಬದುಕಿ ಸುಂದರ ಜೀವನ ನಿರೂಪಿಸಿಕೊಳ್ಳೋಣ.-ಎಚ್.ಕೆ.ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ