ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 6 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 6 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಉತ್ತರ ವಲಯದ ಅಧಿಕಾರಿಗಳ ಜೊತೆಗೆ ಬುಧವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಚಳಿಗಾಲದ ಅಧಿವೇಶನ ವೇಳೆ ಎದುರಾಗುವ ಸಮಸ್ಯೆಗಳು, ಪ್ರತಿಭಟನೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಮಾಲೋಚನೆ ನಡೆಸಲಾಗಿದೆ. ಬೆಳಗಾವಿ ಪೊಲೀಸ್ ಕಮೀಷನರ್, ಬೆಳಗಾವಿ ಐಜಿ ಮತ್ತು ರಾಜ್ಯಮಟ್ಟದ ಎಡಿಜಿಪಿ ಜೊತೆಗೆ ಚರ್ಚೆ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ ಎಂದರು.

ಅಧಿವೇಶನದಲ್ಲಿ ಸಾಲು ಸಾಲು ಪ್ರತಿಭಟನೆ ನಡೆಯಲಿವೆ. ರೈತರ, ಎಂಇಎಸ್, ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಅಧಿವೇಶನ ವೇಳೆ ಎದುರಾಗುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ನಿಯೋಜನೆ ಮಾಡುತ್ತಿದ್ದೇವೆ. ನಮ್ಮ ಸಿಬ್ಬಂದಿ ಊಟ, ವಸತಿ ಸೇರಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ನಮ್ಮ ಸರ್ಕಾರ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಆಂತರಿಕ ಮೀಸಲಾತಿ ಕಾರಣಕ್ಕೆ ನೇಮಕಾತಿ ವಿಳಂಬವಾಗಿತ್ತು, ಈಗ ಆ ಸಮಸ್ಯೆ ನಿವಾರಣೆಯಾಗಿದೆ. 545 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕ ಆಗಿ, ತರಬೇತಿ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ 600 ಖಾಲಿ ಇರುವ ಪಿಎಸ್ಐಗಳ ಹುದ್ದೆಗೆ ನೇಮಕಾತಿ ಮಾಡಲಾಗುವುದು. ನಮ್ಮಲ್ಲಿ 15 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿಯಿವೆ. ಅವುಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲಾಗುವುದು ಎಂದರು.ಕಾನಸ್ಟೇಬಲ್‌ ನೇಮಕಕ್ಕೆ ಎರಡು ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ. 70 ಸಾವಿರದವರೆಗೂ ಖಾಲಿ ಹುದ್ದೆಗಳ‌ ಭರ್ತಿ ಪ್ರಕ್ರಿಯೆ ಸರ್ಕಾರದಲ್ಲಿ ಆರಂಭವಾಗಿದೆ. ಕಬ್ಬು, ಮೆಕ್ಕೆಜೋಳ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸುತ್ತೇವೆ ಎಂದರು.

ಗ್ಯಾಂಬ್ಲಿಕ್, ಮಟ್ಕಾ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

-------------

ಕೋಟ್‌....

ಪರಮೇಶ್ವರ ಮುಂದಿನ ಸಿಎಂ ಘೋಷಣೆ

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ, ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿರುವ ನಡುವೆಯೇ ಬೆಳಗಾವಿ ನಗರಕ್ಕೆ ಬುಧವಾರ ಆಗಮಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರ ಅಭಿಮಾನಿಗಳು ಪರಮೇಶ್ವರ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ ಘಟನೆ ಜರುಗಿತು.

ಖಾಸಗಿ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಶಿವಬಸವ ನಗರಕ್ಕೆ ಪರಮೇಶ್ವರ ಅವರು ತೆರಳಿದ್ದರು. ಈ ವೇಳೆ ಅವರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಜೊತೆಗೆ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಪರಮೇಶ್ವರ ಎಂದು ಘೋಷಣೆ ಕೂಗಿ, ಅವರ ಮೇಲೆ ಹೂವಿನ ಮಳೆ ಸುರಿದರು.