ದಲಿತ ಸಮುದಾಯದ ಸಭೆ, ಸಮಾರಂಭಗಳಿಗಾಗಿ ಹಾಗೂ ಇತರ ಚಟುವಟಿಕೆಗಳ ಉದ್ದೇಶದಿಂದ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನವು ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.

ಪುರಸಭೆಯ ನಿಷ್ಕಾಳಜಿಗೆ ಹಾಳು ಕೊಂಪೆಯಾದ ಕಟ್ಟಡ । ದಲಿತ ಸಮುದಾಯದಿಂದ ಆಕ್ರೋಶ

ಕನ್ನಡಪ್ರಭ ವಾರ್ತೆ ಹಳಿಯಾಳ

ದಲಿತ ಸಮುದಾಯದ ಸಭೆ, ಸಮಾರಂಭಗಳಿಗಾಗಿ ಹಾಗೂ ಇತರ ಚಟುವಟಿಕೆಗಳ ಉದ್ದೇಶದಿಂದ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನವು ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಪುರಸಭೆಯ ನಿಷ್ಕಾಳಜಿಯೇ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.ವ್ಯವಸ್ಥೆ ಅಣಕಿಸುತ್ತಿರುವ ಭವನ:1998ರಲ್ಲಿ ನಿರ್ಮಿಸಲಾದ ಈ ಭವನ ಸದ್ಯ ಹಾಳು ಕೊಂಪೆಯಂತಾಗಿದ್ದು, ಭವನದಲ್ಲಿರುವ ಮೂರು ಕೊಠಡಿಗಳು ಈಗ ನಿರುಪಯುಕ್ತ ವಸ್ತುಗಳ ಸಂಗ್ರಹಣಾ ಕೊಠಡಿ ತಾಣವಾದಂತಿವೆ. ಭವನದ ಮುಂಭಾಗವು ಸಿಗರೇಟ್ ಹಾಗೂ ಎಲೆ ಅಡಿಕೆಯ ಕಸೂರಿಯಿಂದ ವರ್ಣರಂಜಿತವಾಗಿದ್ದು, ಈ ವರ್ಣ ಚಿತ್ರದ ಮೇಲೆ ಕಳೆ ನೀಡುವಂತೇ ಮದ್ಯದ ಬಾಟಲಿಗಳು ಬಿದ್ದು ಆಡಳಿತ ವ್ಯವಸ್ಥೆ ಅಣಕಿಸುತ್ತಿವೆ. ಇದೇ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಪುರಸಭೆಯು ಸಭಾಂಗಣ ನಿರ್ಮಿಸಿದ್ದು, ಈ ಮೊದಲು ಪುರಸಭೆಯೇ ಈ ಸಭಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನೂತನ ಕಟ್ಟಡಕ್ಕೆ ಪುರಸಭೆಯು ಸ್ಥಳಾಂತರವಾದ ನಂತರ ಈ ಸಭಾಂಗಣವನ್ನು ಉಪ-ನೋಂದಣಿ ಇಲಾಖೆಯು ಬಳಸಲಾರಂಭಿಸಿದೆ. ಈ ಭವನದ ಪಕ್ಕದಲ್ಲಿಯೇ ಪುರಸಭೆ ವಾಣಿಜ್ಯ ಮಳಿಗೆಗಳಿದ್ದು, ಇಲ್ಲಿಗೇ ವ್ಯಾಪಾರ ವಹಿವಾಟಿಗೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಅಂಬೇಡ್ಕರ್‌ ಭವನದ ಪಕ್ಕವೇ ಹಾಗೂ ಪ್ರವೇಶ ದ್ವಾರದಲ್ಲಿ ತಮ್ಮ ಎಲ್ಲ ಬರ್ಹಿದೆಸೆಯ ಚಟುವಟಿಕೆ ಕ್ರಿಯಾಕರ್ಮ ಮುಗಿಸುವುದರಿಂದ ಭವನದ ಸುತ್ತಮುತ್ತಲಿನ ವಾತಾವರಣ ದುರ್ಗಂಧಮಯವಾಗಿದೆ.

ಭವನದ ಆರ್ತನಾಧ:ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಪುರಸಭೆಯು ಯಾವುದೇ ವಿಧದಲ್ಲಿ ನಿರ್ವಹಣೆಯಾಗಲಿ, ಸ್ವಚ್ಛತೆಯಾಗಲಿ ಕೈಗೊಳ್ಳುತ್ತಿಲ್ಲ ಎಂಬುದಕ್ಕೆ ಭವನದ ಕಟ್ಟಡ, ಅಲ್ಲಿನ ವಾತಾವರಣವೇ ಸಾಕ್ಷಿಯಾಗಿದೆ.

ಪುರಸಭೆ ವಿರುದ್ಧ ಆಕ್ರೋಶ:

ಭವನದ ನಿರ್ವಹಣೆಯನ್ನು ಮಾಡದ ಪುರಸಭೆ ಆಡಳಿತದ ಬಗ್ಗೆ ದಲಿತ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೇ ದಲಿತ ಸಮುದಾಯದವರು ತಮ್ಮ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ಕಾರ್ಯಕ್ರಮಗಳನ್ನು ಈ ಭವನದಲ್ಲಿ ಆಯೋಜಿಸುತ್ತಿದ್ದರು. ತದನಂತರದ ವರ್ಷಗಳಲ್ಲಿ ಪುರಸಭೆಯವರು ಈ ಭವನವನ್ನು ತಾತ್ಕಾಲಿಕವಾಗಿ ತಮ್ಮ ಕಾರ್ಯಚಟುವಟಿಕೆಗಳಿಗೆ ಬಳಸಲು ಮೀಸಲಾಗಿಟ್ಟ ನಂತರ ದಲಿತ ಸಮುದಾಯದ ಕಾರ್ಯಕ್ರಮಗಳು ಅಲ್ಲಿಗೆ ನಿಂತವು. ಪುರಸಭೆಗೆ ನೂತನ ಕಟ್ಟಡ ನಿರ್ಮಾಣವಾದ ನಂತರ ಪುರಸಭೆಯವರು ಈ ಭವನವನ್ನು ತಮ್ಮ ಪುರಸಭೆಯ ಉಗ್ರಾಣವಾಗಿ ಬಳಸಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಇಲ್ಲಿನ ದಲಿತ ಮುಖಂಡರು ಆರೋಪಿಸಿದ್ದಾರೆ.