ಕಾನೂನು ಸೇವೆಗಳ ಬಗ್ಗೆ ಶೇ.90 ರಷ್ಟು ಜನಕ್ಕೆ ತಿಳಿದಿಲ್ಲ: ಜಿ.ಎನ್.ಸುಬ್ರಹ್ಮಣ್ಯ

| Published : Nov 14 2025, 02:00 AM IST

ಕಾನೂನು ಸೇವೆಗಳ ಬಗ್ಗೆ ಶೇ.90 ರಷ್ಟು ಜನಕ್ಕೆ ತಿಳಿದಿಲ್ಲ: ಜಿ.ಎನ್.ಸುಬ್ರಹ್ಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಜ್ಞಾನ ಇಲ್ಲವಾದಲ್ಲಿ ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರ ದುರ್ಬಲ ವರ್ಗದವರು, ಶೋಷಿತರಿಗೆ ಕಾನೂನು ಅರಿವು ಹಾಗೂ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಶಕ್ತರು, ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಲು ಕಾನೂನು ಸೇವೆಗಳ ಪ್ರಾಧಿಕಾರ ಸಹಾಯ ಮಾಡುತ್ತಿರುವ ವಿಚಾರ ಶೇ.90ರಷ್ಟು ಮಂದಿಗೆ ತಿಳಿದಿಲ್ಲ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ವಿಷಾದಿಸಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕಾನೂನು ಜ್ಞಾನ ಇಲ್ಲವಾದಲ್ಲಿ ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರ ದುರ್ಬಲ ವರ್ಗದವರು, ಶೋಷಿತರಿಗೆ ಕಾನೂನು ಅರಿವು ಹಾಗೂ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿದೆ ಎಂದರು.

ಡೀಸಿ ಡಾ.ಕುಮಾರ ಮಾತನಾಡಿ, ಅಧಿಕಾರಿಗಳು ಕಾನೂನಡಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮನದಟ್ಟು ಮಾಡಿಕೊಳ್ಳುವ ಜೊತೆಗೆ ಕಾನೂನು ರಕ್ಷಣೆ ಮಾಡಬೇಕು. ಪ್ರಾಧಿಕಾರ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕಾರ್ಯ ನಿರ್ವಹಿಸುತ್ತಿದೆ. ಕಾನೂನಿನ ನಿಯಮಗಳು ಉಲ್ಲಂಘನೆಗೊಳ್ಳದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಎಷ್ಟೋ ಜನಗಳಿಗೆ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಪಡೆಯಬಹುದು ಎಂಬುದು ತಿಳಿದೇ ಇಲ್ಲ. ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ನಾಮಫಲಕ ಅಳವಡಿಸುವ ಮೂಲಕ ಅರಿವು ಮೂಡಿಸಬೇಕು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಪ್ರಾಧಿಕಾರದಿಂದ ಮಕ್ಕಳು, ಮಹಿಳೆಯರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಚಿತವಾಗಿ ಕಾನೂನು ಸೇವೆ ಪಡೆಯಲು ಅವಕಾಶವಿದೆ. ಈ ಬಗ್ಗೆ ಅರಿವು ಮೂಡಿಸಲು ವಿಶೇಷ ಶಿಬಿರ ಆಯೋಜಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕ್ರಿಮಿನಲ್, ಸಿವಿಲ್ ಹಾಗೂ ಅರೆ ನ್ಯಾಯಾಲಯಗಳಲ್ಲೂ ಕೂಡ ಸೇವೆ ಪಡೆಯಬಹುದು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಮಕ್ಕಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಎಲ್ಲಾ ಜಾತಿ ವರ್ಗದ ಜನರಿಗೆ ಉಚಿತ ಕಾನೂನು ಸೇವೆ ಹಾಗೂ ಅರಿವು ನೀಡಲಾಗುತ್ತಿದೆ. ಜಿಲ್ಲೆ ಬಾಲ್ಯ ವಿವಾಹ, ಭ್ರೂಣ ಹತ್ಯೆ ಮುಕ್ತ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಅಪರ ಪೊಲೀಸ್ ಅಧೀಕ್ಷಕ ಗಂಗಾಧರ್‌ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.