ಮಂಜು ಮುಸುಕಿದ ನಂದಿಬೆಟ್ಟಕ್ಕೆ ಪ್ರಸಾಗರ ದಂಡು

| Published : Nov 10 2025, 12:15 AM IST

ಮಂಜು ಮುಸುಕಿದ ನಂದಿಬೆಟ್ಟಕ್ಕೆ ಪ್ರಸಾಗರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 5 ಗಂಟೆಯಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರಿಂದ ಬೆಳಗ್ಗೆ 6 ಗಂಟೆಗೆ ಪಾರ್ಕಿಂಗ್ ಲಾಟ್ ಹೌಸ್‌ಫುಲ್ ಆಗಿದ್ದರೂ ಪ್ರವಾಸಿಗರು ಬರುತ್ತಲೇ ಇದ್ದರು. ಅಲ್ಲದೇ ಪ್ರವೇಶ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಗಿ, ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು. ಸಾವಿರಾರು ಜನ ಪ್ರವಾಸಿಗರಿಗೆ 2 ಕೌಂಟರ್‌

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವೀಕೆಂಡ್ ಹಿನ್ನೆಲೆ ಎಂದಿನಂತೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ದಂಡು ಹರಿದು ಬಂದಿದ್ದು, ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪ್ರವಾಸಿಗರು ಪರದಾಡಿದರು. ತಾಲೂಕಿನ ನಂದಿಗಿರಿಧಾಮಕ್ಕೆ ವೀಕೆಂಡ್ ಹಿನ್ನೆಲೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಈ ಹಿನ್ನೆಲೆ ವಾಹನ ದಟ್ಟನೆಯಿಂದಾಗಿ ಗಿರಿಧಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರವಾಸಿಗರು ತೊಂದರೆ ಅನುಭವಿಸಬೇಕಾಯಿತು.

ಎರಡೇ ಕೌಂಟರ್‌ನಲ್ಲಿ ಟಿಕೆಟ್‌

ಬೆಳಗ್ಗೆ 5 ಗಂಟೆಯಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರಿಂದ ಬೆಳಗ್ಗೆ 6 ಗಂಟೆಗೆ ಪಾರ್ಕಿಂಗ್ ಲಾಟ್ ಹೌಸ್‌ಫುಲ್ ಆಗಿದ್ದರೂ ಪ್ರವಾಸಿಗರು ಬರುತ್ತಲೇ ಇದ್ದರು. ಅಲ್ಲದೇ ಪ್ರವೇಶ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಗಿ, ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು. ಸಾವಿರಾರು ಜನ ಪ್ರವಾಸಿಗರಿಗೆ 2 ಕೌಂಟರ್‌ನಲ್ಲಿ ಮಾತ್ರ ಟಿಕೆಟ್ ವಿತರಿಸಲಾಗಿತ್ತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಈ ಅವ್ಯವಸ್ಥೆಯ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಿಯುವ ಹಿಮವನ್ನೂ ಲೆಕ್ಕಿಸದೇ ಟಿಕೆಟ್‌ಗಾಗಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರೆನ್ನದೇ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದರು. ಸಾವಿರಾರು ಪ್ರವಾಸಿಗರ ಭೇಟಿ

ನಿನ್ನೆ ಎರಡನೇ ಶನಿವಾರ ಮತ್ತು ಕನಕ ಜಯಂತಿ ಇಂದು ಭಾನುವಾರ ರಜೆ ಹಿನ್ನೆಲೆಯಲ್ಲಿ ಜನರು ಪ್ರವಾಸದ ಮೂಡ್ ನಲ್ಲಿದ್ದರು. ಅದರಲ್ಲೂ ಬೆಂಗಳೂರಿಗೆ ಹತ್ತಿರದಲ್ಲಿರುವ ಪ್ರವಾಸಿತಾಣಗಳಿಗೆ ಬೆಳ್ಳಂ ಬೆಳಗ್ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೂ ಬೆಂಗಳೂರಿಗೆ ಕೂಗಳತೆ ದೂರಲ್ಲಿರುವ ಪ್ರೇಮಿಗಳು ಸ್ವರ್ಗ ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮಕ್ಕೆ ಬೆಳ್ಳಂ ಬೆಳಗ್ಗೆ ಜನರು ಲಗ್ಗೆ ಇಟ್ಟಿದ್ದಾರೆ. ಬಡವರ ಪಾಲಿನ ಊಟಿ ಎಂದೇ ಪ್ರಖ್ಯಾತಿ ಪಡೆದಿರು ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.

ಇನ್ನು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಬೇಕು ಸೂರ್ಯೋದಯ ನೋಡಬೇಕು ಅಂತ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಪ್ರವಾಸಿಗರು ನಂದಿಬೆಟ್ಟದ ಕ್ರಾಸ್‌ನಲ್ಲಿಯೇ ಉಳಿಯುವಂತಾಯಿತು. ಕೆಲವರು ಚಿಕ್ಕಬಳ್ಳಾಪುರ ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೇ ಇತ್ತ ವಾಪಾಸ್‌ ಬರಲಾಗದೇ ಗಂಟೆಗಟ್ಟಲೇ ರೋಡ್‌ನಲ್ಲಿಯೇ ಕಾಲ ಕಳೆಯುವಂತಾಗಿದೆ. ಗಂಟೆಗಟ್ಟಲೇ ಕಾದು-ಕಾದು ಕೆಲವರು ನಂದಿಬೆಟ್ಟಕ್ಕೆ ಹೋದರೆ ಬಹುತೇಕರು ಅಯ್ಯೋ ಸಾಕಪ್ಪ ಸಾಕು ನಂದಿಬೆಟ್ಟದ ಸಹವಾಸ ಅಂತ ವಾಪಾಸ್ಸಾಗುವಂತಾಯಿತು.

ಕೇವಲ ಒಂದು ದಿನದ ಟ್ರಿಪ್

ಚಿಕ್ಕಬಳ್ಳಾಪುರ ಜಿಲ್ಲೆ ಈಗ ಪ್ರವಾಸಿ ತಾಣಗಳ ಜಿಲ್ಲೆಯಾಗಿ ಮಾರ್ಪಟ್ಟಿದೆ. ಬೆಳ್ಳಂ ಬೆಳಗ್ಗೆ ನಂದಿಗಿರಿಧಾಮದಲ್ಲಿ ಸೂರ್ಯೋದಯ ನೋಡಿಕೊಂಡು ನಂತರ ನಂದಿ ಗ್ರಾಮದ ಭೋಗನಂದೀಶ್ವರ, ಆವಲಗುರ್ಕಿಯ 112 ಅಡಿಯ ಆದಿಯೋಗಿ ಪ್ರತಿಮೆ, ಗೌರಿಬಿದನೂರಿನ ವಿದುರಾಶ್ವತ್ಥ, ಚಿಂತಾಮಣಿಯ ಕೈವಾರದ ಕಾಲಜ್ಞಾನಿ ಯೋಗಿ ನಾರಾಯಣ ಯತೀಂದ್ರರ ಮಠ,ಗುಹಾಂತರ ದೇವಾಲಯ ಕೈಲಾಸಗಿರಿ ಮುಂತಾದ ಸ್ಥಳಗಳ ವೀಕ್ಷಣೆ ಮಾಡಬಹು ಎಂದು ಮುಂಜಾನೆಯೇ ಪ್ರವಾಸಿಗರು ಬರುತ್ತಾರೆ.

ಆದಿಯೋಗಿ ದರ್ಶನಕ್ಕೂ ಭೇಟಿ

ರಾಜಧಾನಿ ಬೆಂಗಳೂರಿನಿಂದ ಇಶಾ ಫೌಂಡೇಷನ್ ಕೇವಲ 64 ಕಿಲೋ ಮೀಟರ್ ದೂರ ಇದೆ, ಇಲ್ಲಿಗೆ ಬಂದು ಹೊಗುವುದಕ್ಕೆ ಒಂದೆರಡು ಗಂಟೆಯಷ್ಟೇ ಆಗುವ ಕಾರಣ ಒಂದು ದಿನದ ಟ್ರಿಪ್‌ ಅಂತಾ ಜನ ಕಾರು, ಬೈಕ್, ಬಸ್ ಗಳಲ್ಲಿ ಸಾಗರವಾಗಿ ಆದಿಯೋಗಿ ದರ್ಶನಕ್ಕೆ ಬರುತ್ತಿದ್ದಾರೆ.ಇದರಿಂದ ದಾರಿಯಲ್ಲಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗುತ್ತದೆ. ಆದರೂ ಆದಿಯೋಗಿ ದರ್ಶನ ಪಡೆದು ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸಾಲು ಸಾಲು ರಜೆ ಇದ್ದಾಗ ನಂದಿಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಇದು ಗೊತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ ಎಂಬುದು ಬೆಂಗಳೂರಿನಿಂದ ಬರುವ ಪ್ರವಾಸಿಗರ ಆರೋಪ.