ಸಾರಾಂಶ
ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದ ಕಾವೇರಿ ಜಾತ್ರೆಗೆ ಬಂದಿದ್ದ ಭಕ್ತರೊಬ್ಬರು ಕಾವೇರಿ ಆರತಿಯ ವೇಳೆ ಕಿರುಸೇತುವೆ ಮೇಲಿಂದ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದ ಕಾವೇರಿ ಜಾತ್ರೆಗೆ ಬಂದಿದ್ದ ಭಕ್ತರೊಬ್ಬರು ಕಾವೇರಿ ಆರತಿಯ ವೇಳೆ ಕಿರುಸೇತುವೆ ಮೇಲಿಂದ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ. ಆಯ ತಪ್ಪಿ ನದಿಗೆ ಬಿದ್ದ ಹೊದ್ದೂರು ಗ್ರಾಮ ಪಂಚಾಯತಿಯ ಕಬಡಗೇರಿ ವಾಸು ಎಂಬವರನ್ನು ಎಂ.ಆರ್. ಬಿಪಿನ್ ಹಾಗೂ ಸ್ಥಳೀಯರು ಹರಸಾಹಸದಿಂದ ರಕ್ಷಿಸಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.ಅಪಾಯಕಾರಿಯಾಗಿರುವ ಬಲಮುರಿಯ ಹಳೆ ಸೇತುವೆ ಮಳೆಗಾಲದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತದೆ. ಸೇತುವೆಗೆ ಯಾವುದೇ ರಕ್ಷಣಾ ಬೇಲಿ ಇಲ್ಲ. ಅಲ್ಲೇ ಸಮೀಪದಲ್ಲಿ ಕೆಳಗಡೆ ಕಾವೇರಿ ಆರತಿ ಆಗುತ್ತಿರುವ ಸಂದರ್ಧಲ್ಲಿ ಈ ಸೇತುವೆ ಮೇಲೆ ವಾಸು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ವಾಹನವೊಂದು ಬಂದಿದ್ದರಿಂದ ಸೇತುವೆ ಅಂಚಿಗೆ ಬಂದ ಅವರು ಆಯತಪ್ಪಿ ನದಿಗೆ ಬಿದ್ದರು. ಮಳೆಯಾಗಿದ್ದರಿಂದ ನದಿಯಲ್ಲಿ ಭಾರಿ ಪ್ರಮಾಣದ ನೀರಿತ್ತು. ನದಿಗೆ ಬಿದ್ದ ವಾಸು ತೇಲಿ ಹೋಗುತ್ತಿರುವುದನ್ನು ಗಮನಿಸಿದ ಅಲ್ಲಿ ನರೆದಿದ್ದ ಜನರು ಬೊಬ್ಬೆ ಹಾಕಿದ್ದಾರೆ.
ಸ್ಥಳೀಯರಾದ ಎಂ.ಆರ್. ಬಿಪಿನ್ ಕೂಡಲೇ ನದಿಗೆ ಹಾರಿದ್ದು, ನದಿ ನೀರಿನ ಸೆಳೆತಕ್ಕೆ ಸಿಲುಕಿದ್ದ ವಾಸು ಅವರ ತಲೆಕೂದಲು ಹಿಡಿದು ತೀರಕ್ಕೆ ಎಳೆದುತಂದಿದ್ದಾರೆ. ಅಂಗಾತ ಮಲಗಿಸಿ ಹೊಟ್ಟೆ ಸೇರಿದ್ದ ನೀರನ್ನು ಹೊರತೆಗೆದರು. ನಂತರ ಸ್ಥಳದಲ್ಲಿದ್ದ ಪೊಲೀಸರು ಚೇತರಿಸಿಕೊಂಡ ವಾಸು ಅವರರನ್ನು ಸಂಬಂಧಿಕರನ್ನು ಸಂಪರ್ಕಿಸಿ ಮನೆಗೆ ಕಳುಸಿದರು.ಬಿಪಿನ್ ಅವರ ಸಮಯಪ್ರಜ್ಞೆ ಮತ್ತು ಜೀವ ರಕ್ಷಿಸಿದಕ್ಕೆ ಶ್ಲಾಘನೆ ವ್ಯಕ್ತವಾಯಿತು.