ಎಂಜಿನಿಯರ್ ಸುರೇಶ್‌ಗೆ ಬೆವರಿಳಿಸಿದ ಶಾಸಕ

| Published : Oct 19 2024, 12:36 AM IST

ಎಂಜಿನಿಯರ್ ಸುರೇಶ್‌ಗೆ ಬೆವರಿಳಿಸಿದ ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ನಗರಸಭೆ ಸಭೆಯಲ್ಲಿ ಮಹಿಳಾ ಸದಸ್ಯೆಯಾದ ತಮ್ಮನ್ನು ಅವಮಾನಿಸಲಾಗುತ್ತಿದೆ, ಅಗೌರದಿಂದ ನಡೆಸಲಾಗುತ್ತಿದೆ ಎಂದು ಸದಸ್ಯೆ ಜಯಮೇರಿ ಖಂಡಿಸಿ ಧರಣಿ ನಡೆಸಿ ಸಭಾತ್ಯಾಗ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನೀವು ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ದೊಡ್ಡ ಮಟ್ಟದ ನಗರಪಾಲಿಕೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ಪ್ರಾಮಾಣಿಕತೆಯಿಂದ ಅಲ್ಲಾದರೂ ಕರ್ತವ್ಯ ನಿರ್ವಹಿಸಿ, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆ ಇಲ್ಲದಿದ್ದರೆ ಹೇಗೆ, ನೀವು ಸಭೆಯಲ್ಲಿನ ಯಾವ ನಿರ್ಣಯಕ್ಕೆ ಅನುಪಾಲನಾ ವರದಿ ಸಲ್ಲಿಸಿದ್ದೀರಿ ಎಂದು ನಗರಸಭೆ ಎಇಇ ಸುರೇಶ್ ಅವರನ್ನು ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ತರಾಟೆ ತೆಗೆದುಕೊಂಡರು. ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಶಾಸಕರು, ಎಇಇ ಸುರೇಶ್ ಅವರ ಕಾರ್ಯವೈಖರಿಗೆ ಕೆಲವು ಸದಸ್ಯರಾದ ರಾಘವೇಂದ್ರ, ಶಾಂತರಾಜು, ಶಿವಕುಮಾರ್, ಜಯಂತ್ , ರಾಮಕೃಷ್ಣ, ಬಬ್ಬು ಸೇರಿದಂತೆ ಹಲವು ಸದಸ್ಯರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಗರಂಮ್ಮಾದ ಶಾಸಕರು ನಿಮಗೆ ಕಾಮನ್ ಸೆನ್ಸ್ ಇಲ್ಲ, ಯುಜಿಡಿ ನಿರ್ವಹಣೆಗಾಗಿ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೆ ನಿಮಗೆ ಆಸಕ್ತಿ ಇಲ್ಲ ಎಂದರೆ ಹೇಗೆ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಹೊರಟು ಹೋಗಿ, ಬೇರೆಯವರನ್ನು ಹಾಕಿಸಿಕೊಳ್ಳುವೆ ಎಂದು ಅಸಮಾಧಾನ ಹೊರಹಾಕಿದರು. ಇದೇ ವೇಳೆ ಕೆಲ ಕಾಮಗಾರಿಗೆ ಟೆಂಡರ್ ಕರೆಯುವುದಾಗಿ ಎಂಜಿನಿಯರ್ ಹೇಳುತ್ತಾರೆ, ಕೆಲಸ ಮಾಡಲ್ಲ ಎಂದು ನಗರಸಭಾ ಅಧ್ಯಕ್ಷೆ ರೇಖಾ, ಸದಸ್ಯ ಬಬ್ಬು ಇನ್ನಿತರರು ದೂರಿನ ಸುರಿಮಳೆಯನ್ನೆಗೈದು ಈ ಸಂಬಂಧ ಒಂದು ವಾರದೊಳಗಾದರೂ ಟೆಂಡರ್ ಪ್ರಕ್ರಿಯೆ ಕೈಗೊಳ್ಳಿ ಎಂದು ತಾಕೀತು ಮಾಡಿದರು.

4 ವರ್ಷದಿಂದ ಬೀದಿ ದೀಪ ಹಾಕಿಲ್ಲ:ಹಲವು ವಾರ್ಡ್‌ಗಳಲ್ಲಿ ಬೀದಿ ದೀಪ ಅಳವಡಿಸಿ ನಾಲ್ಕು ವರುಷ ಕಳೆದಿದೆ. ನನ್ನ ವಾರ್ಡ್‌ ಕೆಂಪನಪಾಳ್ಯ ರಸ್ತೆ, ಆಶ್ರಯ ಬಡಾವಣೆ ಕ್ರಮಿಸುವ ಹಿನ್ನೆಲೆಯಲ್ಲಿ ಕತ್ತಲೆ ಆವರಿಸಿದೆ. ಈ ಸಂಬಂಧ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ, ನನ್ನ ವಾರ್ಡ್‌ನಲ್ಲೆ ನಾಲ್ಕು ವರ್ಷದಿಂದ ದೀಪ ಹಾಕಿಲ್ಲ, ನಾವು ನಮ್ಮ ಹಣದಿಂದ ಕೆಟ್ಟು ಹೋದ ದೀಪ ಅಳವಡಿಸುವ ಕೆಲಸ ಮಾಡುತ್ತಿದ್ದೇವೆ, ಈ ಸಮಸ್ಯೆ ಶೀಘ್ರ ಬಗೆಹರಿಸಿ ಎಂದು ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರು ಈ ಸಮಸ್ಯೆ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಿ ವಾರ್ಡ್ ವಿಸ್ತಾರಕ್ಕನುಗುಣವಾಗಿ ಗುಣಮಟ್ಟದ ದೀಪ ಖರೀದಿಸಲು ಕ್ರಮವಹಿಸಿ ಎಂದು ಸೂಚಿಸಿದರು.

ಇದೇ ವೇಳೆ ಸದಸ್ಯರಾದ, ಪ್ರಕಾಶ್, ಪ್ರಶಾಂತ್, ರಾಘವೇಂದ್ರ, ಧರಣೀಶ್ ಮಾತನಾಡಿ, ಹೈಟೆನ್ಷನ್ ವೈರ್‌ನಿಂದ ಅಪಾಯವಾಗುವ ಸಂಭವವಿದೆ. ಪ್ಲಾಸ್ಟಿಕ್ ಬಳಸಿ ತಿಂಡಿ ನೀಡುತ್ತಿರುವುದರಿಂದ ತೊಂದರೆಯಾಗಲಿದೆ, ಹಾಗಾಗಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು, ಅದೇ ರೀತಿ ಪಟ್ಟಣದಲ್ಲಿ 20 ರಿಂದ 35ವರ್ಷ ವಯಸ್ಸಿನವರು ಇಲ್ಲಿನ ವಾತಾವರಣದಿಂದಾಗಿ ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ, ತಮಿಳುನಾಡಿನಿಂದ ಡ್ರಗ್ಸ್, ಗಾಂಜಾ ಸರಬರಾಜಾಗುತ್ತಿದೆ. ಕೆಲ ಯುವಕರು ಒಬ್ಬರು ಚುಚ್ಚಿಕೊಂಡ ಸಿರಿಂಜ್ ಅನ್ನೆ ಮತ್ತೊಬ್ಬರು ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇದಕ್ಕಾಗಿ ಎಚ್ಐವಿ ಪೀಡಿತರ ಪ್ರಮಾಣವು ಹೆಚ್ಚುತ್ತಿದ್ದು ಈ ಸಂಬಂಧ ಕ್ರಮವಾಗಬೇಕು ಎಂದರು. ಯುಜಿಡಿ ಅಧ್ವಾನವೂ ಸರಿಯಾಗಬೇಕು ಎಂದು ಮನವಿ ಮಾಡಿದರು. ಹನೂರಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಅಧಿಕ

ಹನೂರು ಭಾಗದಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ರೋಗ, ರುಜಿನ ಬರುವ ಸಂಭವವಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಗೆ ಕೊಳ್ಳೇಗಾಲ ವರ್ತಕರು ಮುಂದಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಗೋಪಾಲ್ ಹೇಳಿದರು. ಪ್ಲಾಸ್ಟಿಕ್ ಬಳಸದಂತೆ ನಗರಸಭೆ ತಂಡ ರಚಿಸಿದರೆ ನಾನು ಸಹ ಸಹಕರಿಸುವುದಾಗಿ ಆರೋಗ್ಯಾಧಿಕಾರಿ ಚೇತನ್ ಅವರು ಕಾರ್ಯಾಚರಣೆಗೆ ಸಿದ್ಧ, ಆದರೆ ನನಗೆ 3 ತಂಡಗಳ ರಚನೆಯಾಗಬೇಕು ಎಂದರು.

ಈವೇಳೆ ನಗರಸಭಾಧ್ಯಕ್ಷೆ ರೇಖಾ ಮಾತನಾಡಿ, ನಗರಸಭಾ ಸದಸ್ಯರಾರು ಈ ಕಾರ್ಯಾಚರಣೆಗೆ ಅಡ್ಡಿ ಪಡಿಸಬಾರದು, ದಂಡ ವಿಧಿಸುವ ವೇಳೆ ನಮ್ಮ ಕಡೆಯವರು ಬಿಟ್ಟು ಬಿಡಿ ಎಂದು ಒತ್ತಡತರಬಾರದು, ಎಲ್ಲಿ ಪ್ಲಾಸ್ಟಿಕ್ ದಾಸ್ತಾನು ಮಾಡಲಾಗಿದೆ ಆ ಬಗ್ಗೆಯೂ ನಿಗಾ ಇಡಬೇಕು ಎಂದರು. ಶಾಸಕ ಕೃಷ್ಣಮೂರ್ತಿ ಮಾತನಾಡಿ, ನಗರಸಭೆ ಆಸ್ತಿ ರಕ್ಷಣೆ ಮತ್ತು ಕೋರ್ಟ್ ಕಲಾಪಕ್ಕಾಗಿ 3 ಮಂದಿ ಹಂತದಲ್ಲಿ ವಕೀಲರನ್ನು ನೇಮಿಸಿಕೊಳ್ಳಬೇಕು, ಯಾವ ಯಾವ ಪ್ರಕರಣ ಇತ್ಯರ್ಥ ಹಂತದಲ್ಲಿದೆ, ಪೂರಕ ದಾಖಲೆಗಳು ಎಲ್ಲಿವೆ? ಎಂಬುದರ ಕುರಿತು ದಾಖಲೆಗಳನ್ನು ನಗರಸಭೆ ಆಸ್ತಿ ಸಂರಕ್ಷಿಸಿ, ವಕೀಲರ ನೇಮಿಸಿ ಇಡಬೇಕು. ಇದಕ್ಕಾಗಿ ನೌಕರರೊಬ್ಬರನ್ನು ನಿಯೋಜಿಸಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿ ತಾಲೂಕು, ಜಿಲ್ಲಾ ಮತ್ತು ಹೈಕೋರ್ಟ್‌ಗೆ ಸಂಬಂಧಿಸಿದಂತೆ, 3 ಮಂದಿ ವಕೀಲರನ್ನು ತಕ್ಷಣ ನೇಮಿಸಿಕೊಳ್ಳಿ ಎಂದು ತಾಕೀತು ಮಾಡಿದರು.

ಈ ವೇಳೆ ನಗರಸಭಾಧ್ಯಕ್ಷ ಮಾತನಾಡಿ, ಈಗಿನ ನಗರಸಭೆ ವಕೀಲರಿಗೆ ಐಡಿಎಸ್ ಎಂಡಿ ಪ್ರಕರಣ ನಿರ್ವಹಿಸುತ್ತಿದ್ದು ಪ್ರಕರಣ ಇತ್ಯರ್ಥವಾಗಿದೆ. ಅದಕ್ಕೆ ಸಂಬಂಧಿಸಿದ ಕಡತಗಳು ಅವರ ಬಳಿಯೇ ಇವೆ, ಅವರ ಶುಲ್ಕ ₹3.50 ಲಕ್ಷ ನೀಡಿ ಹಿಂಪಡೆಯಬೇಕಿದೆ ಎಂದರು.ಆಯುಕ್ತ ರಮೇಶ್, ಉಪಾಧ್ಯಕ್ಷ ಎ ಪಿ ಶಂಕರ್, ಸದಸ್ಯರಾದ ಸುಮ ಸುಬ್ಬಣ್ಣ, ಜಿ ಪಿ ಶಿವಕುಮಾರ್, ಮಂಜುನಾಥ್, ರಾಮಕೃಷ್ಣ, ಚಿಂತು ಪರಮೇಶ್, ಪವಿತ್ರ, ಸುಶೀಲ, ಕಲಿತ ರಾಜೇಶ್, ಪುಷ್ಪಲತಾ ಶಾಂತರಾಜು ಇನ್ನಿತರರಿದ್ದರು.

ಧಿಕ್ಕಾರ ಕೂಗಿ ಹೊರನಡೆದ ಮಹಿಳಾ ಸದಸ್ಯೆಮಹಿಳಾ ಸದಸ್ಯೆಯನ್ನು ನಗರಸಭಾಧಿಕಾರಿಗಳು ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ, ನನಗೆ ಅವಮಾನ ಮಾಡಿದ್ದಾರೆ. ಇಂತಹ ಮಹಿಳಾ ವಿರೋಧಿ ಸಭೆಗೆ ನನ್ನ ಧಿಕ್ಕಾರ ಎಂದು ಘೋಷಣೆ ಕೂಗಿದ ಬಿಎಸ್ಪಿ ಸದಸ್ಯೆ ಜಯಮೇರಿ ಕೆಲಕಾಲ ಸಭಾಂಗಣದಲ್ಲೆ ಕುಳಿತು ಪ್ರತಿಭಟಿಸಿ ನಂತರ ಸಭಾತ್ಯಾಗ ಮಾಡಿದ ಘಟನೆ ನಗರಸಭೆಯಲ್ಲಿ ನಡೆಯಿತು. 3 ತಿಂಗಳ ಹಿಂದೆ ಬಸ್ ನಿಲ್ದಾಣದ ಕಾಮಗಾರಿ ಸೇರಿದಂತೆ ಹಲವು ವಿಚಾರಗಳ ಕುರಿತು ನಾನು ನಗರಸಭೆ ಆಯುಕ್ತರನ್ನು ಮಾಹಿತಿ ಕೋರಿದ್ದೆ. ಅದಕ್ಕಾಗಿ ಲಿಖಿತ ಅರ್ಜಿ ಸಹಾ ಸಲ್ಲಿಸಿದ್ದೆ. ಮಾಹಿತಿ ನೀಡದೆ ಸತಾಯಿಸಿದರು. ನಾನು ನಗರಸಭೆಗೆ ಬಂದರೆ ಅಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಈ ವಿಚಾರ ಡೀಸಿ ಗಮನಕ್ಕೆ ತಂದ ಬಳಿಕ ಜಿಲ್ಲಾಧಿಕಾರಿ ಸಹ ಮಾಹಿತಿ ನೀಡಲು ಆಯುಕ್ತರಿಗೆ ಸೂಚಿಸಿದ್ದರು. ನನಗೆ ಮಾಹಿತಿ ನೀಡದೆ ಅಪಮಾನ ಮಾಡಿದ್ದಾರೆ. ಅಲ್ಲದೆ ಯುಜಿಡಿ, 24 ಗಂಟೆ ಕುಡಿಯುವ ನೀರಿನ ಯೋಜನೆಯಲ್ಲಿ ನನ್ನ ವಾರ್ಡ್‌ನಲ್ಲಿ ಸಾಕಷ್ಟು ಲೋಪವಾಗಿದೆ ಎಂದು ಶಾಸಕರು, ನಗರಸಭೆ ಅಧ್ಯಕ್ಷರು ಸೇರಿದಂತೆ ಹಲವರಿಗೆ ಪೋಟೊಗಳನ್ನು ಪ್ರದರ್ಶಿಸಿದರು. ಇದರಿಂದ ನನಗೆ ಅಪಮಾನ ಆಗಿದೆ ಎಂದು ಸಭೆಗೆ ದಿಕ್ಕಾರದ ಕೂಗಿದರು.

ನನಗೆ ಮಾಹಿತಿ ನೀಡದಿದ್ದರೆ ನಗರಸಭೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರೂ ಅಧಿಕಾರಿಗಳು ಜಗ್ಗಲಿಲ್ಲ, ಆದಾಗ್ಯೂ ನನಗೆ ಮಾಹಿತಿ ನೀಡುತ್ತಿಲ್ಲ, ನಾನು ಬಂದರೆ ಕಡೆಗಣಿಸಲಾಗುತ್ತಿದೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಾಸಕರು ನೀವು ಒಂಟಿ ಸಲಗ ಬಿಡಮ್ಮ ಎಂದರು. ಈ ಸಭೆಗೆ ನನ್ನ ದಿಕ್ಕಾರ ಎಂದು ಜಯಮೇರಿ ತೆರಳುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿ, ಸದಸ್ಯರು ಅವರನ್ನು ಸಭೆಯಿಂದ ತೆರಳದಂತೆ ತಡೆಯಲಿಲ್ಲ. ಬಸ್‌ ನಿಲ್ದಾಣ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಅಪೂರ್ಣವಾಗಿದೆ, ಹಾಗಾಗಿ ಯಾವುದೆ ಕಾರಣಕ್ಕೂ ಗುತ್ತಿಗೆದಾರರಿಗೆ ಬಿಲ್ ನೀಡಕೂಡದು, ಇಲ್ಲಿನ ಹಲವು ಅನುದಾನ ಸಮರ್ಪಕ ರೀತಿ ಬಳಕೆಯಾಗುತ್ತಿಲ್ಲ ಎಂದು ಇದೆ ವೇಳೆ ಸುದ್ದಿಗಾರರಿಗೆ ಜಯಮೇರಿ ತಿಳಿಸಿದರು.