ಪಾಲಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಕೆ.ಪಿ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ

ಕನ್ನಡಪ್ರಭ ವಾರ್ತೆ ಭಟ್ಕಳ

ಶಿಸ್ತುಬದ್ಧ ಜೀವನವೇ ಉತ್ತಮ ಭವಿಷ್ಯಕ್ಕೆ ಅಡಿಪಾಯ ಎಂದು ತೆರ್ನಮಕ್ಕಿಯ ಕೆ.ಪಿ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜೇಶ ನಾಯ್ಕ ಹೇಳಿದರು.

ಅವರು ಪಟ್ಟಣದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ೨೦೨೬-೨೭ನೇ ಸಾಲಿನ ಪಾಲಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರಂತರ ಅಧ್ಯಯನ, ನಿಯಮಿತ ಆಹಾರ, ವ್ಯಾಯಾಮದಿಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಬಹುದು ಎಂದರು.

ಬಿಕಾಂ ಪೂರ್ವ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ಪ್ರಜ್ವಲ್ ಗೋಲಿ ಮಾತನಾಡಿ, ಸಿಎ ಅಧ್ಯಯನದಿಂದ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಲೆಕ್ಕ ಪರಿಶೋಧನೆ, ತೆರಿಗೆ, ಹಣಕಾಸು, ಸಲಹಾ ಸೇವೆಗಳು ಸೇರಿದಂತೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ ಎಂದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ರಮೇಶ್ ಖಾರ್ವಿ ಮತ್ತು ಶ್ರೀಧರ್ ಶಾನಭಾಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶೈಕ್ಷಣಿಕ ವರ್ಷ ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.


ಮಹಾವಿದ್ಯಾಲಯದಲ್ಲಿ ಜರಗುವ ಪಠ್ಯ, ಪಠ್ಯೇತರ ಚಟುವಟಿಕೆ, ಹಾಜರಾತಿ, ನೇಮಕಾತಿ, ಯೂಯೂಸಿಎಂಎಸ್‌ ಮತ್ತು ಮಹಾವಿದ್ಯಾಲಯದಿಂದ ಕೊಡಮಾಡುವ ವಿದ್ಯಾರ್ಥಿ ವೇತನದ ಕುರಿತು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ವಿವಿಧ ವಿಭಾಗದ ಉಪ ಪ್ರಾಂಶುಪಾಲರು ನೀಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಆಶಾ ಡಿಸೋಜಾ ಅತಿಥಿಗಳನ್ನು ಪರಿಚಯಿಸಿದರು. ದೇವೇಂದ್ರ ಕಿಣಿ ಮತ್ತು ವಿಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿಶಾ ಗೋನ್ಸಾಲಿಸ್, ಉಪನ್ಯಾಸಕ ಶಾಂತರಾಯ ಗೊಂಡ ವಂದಿಸಿದರು.