ಕಂಪ್ಲಿ: ಎಲ್ ನಿನೋ ಹವಾಮಾನ ವೈಪರೀತ್ಯದ ಪರಿಣಾಮದಿಂದ ಕಂಪ್ಲಿ ತಾಲೂಕಿನ ದೇವಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆ ಬೆಳವಣಿಗೆ ಕುಂಠಿತಗೊಂಡಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ನಿರಂತರ ಮೋಡ ಕವಿದ ವಾತಾವರಣ, ಬಿಸಿಲಿನ ಕೊರತೆ ಹಾಗೂ ಅತಿಯಾದ ತೇವಾಂಶದಿಂದ ಮೆಣಸಿನಕಾಯಿ ಸಸಿಗಳಲ್ಲಿ ಬೇರು ಕೊಳೆ ಸೇರಿದಂತೆ ವಿವಿಧ ಶಿಲೀಂಧ್ರ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ವೈಜ್ಞಾನಿಕ ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.
ತಾಲೂಕಿನಲ್ಲಿ ಸುಮಾರು 615 ಹೆಕ್ಟೇರ್ ಪ್ರದೇಶದಲ್ಲಿ ಹಸಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದ್ದು, ಈ ಭಾಗದ ಅನೇಕ ರೈತರಿಗೆ ಮೆಣಸಿನಕಾಯಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಸಾಮಾನ್ಯ ಮಳೆಯ ಮಾದರಿಯಲ್ಲಿ ಬದಲಾವಣೆ ಉಂಟಾಗಿರುವುದರಿಂದ ಹೊಲಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಸಿಲು ದೊರೆಯುತ್ತಿಲ್ಲ. ಇದರಿಂದ ಮಣ್ಣಿನಲ್ಲಿನ ತೇವಾಂಶ ಹೆಚ್ಚಾಗಿ ಉಳಿದು, ಬೆಳೆಯ ಬೆಳವಣಿಗೆ ನಿಧಾನಗತಿಯಾಗುತ್ತಿದೆ.ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಹಲವು ರೈತರು ನಿರಂತರವಾಗಿ ನೀರು ಹರಿಸುತ್ತಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮಣ್ಣಿನಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಬೇರುಗಳಿಗೆ ಅಗತ್ಯವಾದ ಗಾಳಿ ದೊರೆಯದೆ ಸಸಿಗಳು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲಾರಂಭಿಸಿರುವುದು ಕಂಡುಬಂದಿದ್ದು, ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.
ಶಿಲೀಂಧ್ರ ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ತಜ್ಞರ ಸಲಹೆಯಂತೆ ಕಾರ್ಬೆಂಡಜಿಮ್ ಶೇ. 12 ಹಾಗೂ ಮ್ಯಾಂಕೊಜೆಬ್ ಸಂಯೋಜಿತ ಶಿಲೀಂಧ್ರನಾಶಕ ಸಿಂಪಡಿಸಬೇಕು. ಅಗತ್ಯವಿದ್ದಲ್ಲಿ ಬೆಳೆ ಪರಿಶೀಲನೆಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ ಎಂದು ಸೂಚಿಸಲಾಗಿದೆ.ಎಲ್ ನಿನೋ ಪರಿಣಾಮದಿಂದ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಈ ಕುರಿತು ರೈತರು ಜಾಗ್ರತರಾಗಿದ್ದು, ಇಲಾಖೆಯ ತಾಂತ್ರಿಕ ಸಲಹೆಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್. ಚೇತನ್‌ಕುಮಾರ್ ನಾಯಕ್ ತಿಳಿಸಿದ್ದಾರೆ.