ರಕ್ತದಲ್ಲಿ ಕೊಹ್ಲಿ ಭಾವಚಿತ್ರ ಬಿಡಿಸಿದ ಅಭಿಮಾನಿ

| Published : May 23 2024, 01:09 AM IST / Updated: May 23 2024, 12:22 PM IST

Virat Kohli

ಸಾರಾಂಶ

ಸ್ಪೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ ಕೌಶಲ್ಯಯುತ ಆಟ ಮತ್ತು ನಾಯಕತ್ವಕ್ಕೆ ಮಾರು ಹೋಗಿರುವ ಶಿಕ್ಷಕ ತನ್ನದೇ ರಕ್ತದಲ್ಲಿ ಭಾವಚಿತ್ರ ಬಿಡಿಸಿದ್ದಾನೆ.

 ಮಹಾಲಿಂಗಪುರ : ಅಭಿಮಾನದ ಅಮಲಿನಲ್ಲಿ ತಮ್ಮ ಹೀರೋಗಳಿಗಾಗಿ ಅಭಿಮಾನಿ ಬಳಗ ಹಲವಾರು ತ್ಯಾಗಗಳಿಗೆ ಸಿದ್ಧರಿರುತ್ತಾರೆ ಎನ್ನುವುದಕ್ಕೆ ಈ ಅಭಿಮಾನಿಯೇ ಸಾಕ್ಷಿ. ಇತ್ತೀಚೆಗೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವಿನ ಪಂದ್ಯದಲ್ಲಿ ಕೊನೆಯ ರೋಚಕ ಘಟ್ಟದಲ್ಲಿ ಬೆಂಗಳೂರು ಗೆಲುವು ಸಾಧಿಸಿತು. ಆಗ ಅಭಿಮಾನಿಗಳು ತಡರಾತ್ರಿವರೆಗೂ ಪಟಾಕಿ ಸಿಡಿಸಿ, ಬಣ್ಣ ಎರಚಿ ಮತ್ತು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಸ್ಪೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ ಕೌಶಲ್ಯಯುತ ಆಟ ಮತ್ತು ನಾಯಕತ್ವಕ್ಕೆ ಮಾರು ಹೋಗಿರುವ ಈ ಶಿಕ್ಷಕ ತನ್ನದೇ ರಕ್ತದಲ್ಲಿ ಭಾವಚಿತ್ರ ಬಿಡಿಸಿದ್ದಾನೆ. ನಾಲ್ಕು ಗಂಟೆಗಳ ಸತತ ಪ್ರಯತ್ನದಿಂದ ವಿರಾಟ್ ಕೊಹ್ಲಿ ಭಾವಚಿತ್ರವನ್ನು ಬಿಡಿಸಿ ತಮ್ಮ ಅಭಿಮಾನವನ್ನು ಕೊಹ್ಲಿಗೆ ಸಮರ್ಪಿಸಿದ್ದಾನೆ. ಆರ್‌ಸಿಬಿ ಜೆರ್ಸಿಯಲ್ಲಿ ಬ್ಯಾಟ್‌ ಹಿಡಿದು ಅಭಿಮಾನಿಗಳಯತ್ತ ತೋರುತ್ತಿರುವ ವಿರಾಟ್‌ ಕೊಹ್ಲಿ ಭಾವಚಿತ್ರವನ್ನು ರಕ್ತದಲ್ಲಿ ಬಿಡಿಸಿದ್ದಾರೆ.

ಶಿಕ್ಷಕ ಶಿವಾನಂದ ನೀಲನ್ನವರ ಮಹಾಲಿಂಗಪುರ ಪಟ್ಟಣದ ಎಸ್‌ಸಿಪಿ ಸಂಸ್ಥೆಯ ಕೆಎಲ್ಇ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಹೇಳುವಂತೆ 17ವರ್ಷಗಳಿಂದ ನಮ್ಮ ಮೆಚ್ಚಿನ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ತಮ್ಮ ನಿಷ್ಠೆ ಮೆರೆದಿದ್ದಾರೆ.

ಈ ವರ್ಷ ಒಂದು ಹಂತದಲ್ಲಿ ಸತತ ಸೋಲಿನಿಂದ ಐಪಿಎಲ್‌ನಿಂದಲೇ ತಂಡ ಹೊರ ಹೋಗುವ ಅನಿವಾರ್ಯತೆ ತಲೆದೋರಿತ್ತು. ಇದರಿಂದ ಅಭಿಮಾನಿ ಬಳಗದಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು. ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಪಟ್ಟ ಶ್ರಮ ದಿಟ್ಟ ನಿರ್ಧಾರಗಳು ನಿರಂತರ ಗೆಲುವಿಗೆ ಕಾರಣವಾಗಿವೆ. ಈ ವರ್ಷ ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಿತು. ಯಶಸ್ಸಿಗೆ ಇದೊಂದು ಸಾಂಘಿಕ ಹೋರಾಟ ಮತ್ತು ವಿರಾಟ್ ಕೊಹ್ಲಿ ಅವರ ಶ್ರಮಕ್ಕೆ ಫಲಸಿಕ್ಕಂತಾಗಿದೆ.ಕೋಟ್‌

ಈ ಯಶಸ್ಸು ಕರ್ನಾಟಕ ಹಾಗೂ ವಿಶ್ವದ ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಸಂತಸ ತಂದಿರುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಪಂದ್ಯಗಳಲ್ಲಿಯೂ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈ ಸಾರಿ ಕಪ್ ನಮ್ಮದೆ. ತಂಡದ ಗೆಲುವಿಗಾಗಿ ಆರ್‌ಸಿಬಿ ತಂಡಕ್ಕೆ ಹಾರೈಸುತ್ತೇನೆ.

ಶಿವಾನಂದ ನೀಲನ್ನವರ, ಕೊಹ್ಲಿ ಅಭಿಮಾನಿ