ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ವೇದಾವತಿ ಬಡಾವಣೆಯ ಎ.ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿ ಕೂರಿಸಿದ ಶ್ರೀಕೃಷ್ಣ ಪ್ರತಿಮೆಯ ಅದ್ಧೂರಿ ಮೆರವಣಿಗೆಗೆ ಶನಿವಾರ ಚಿತ್ರದುರ್ಗದ ಗೊಲ್ಲಗಿರಿ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಪ್ರತಿಮೆ ಕೂರಿಸಿ ನಿತ್ಯವು ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದು ಶನಿವಾರ ಭವ್ಯ ಮೆರವಣಿಗೆ ನಡೆಸಲಾಯಿತು.
ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆ ನೂರು ಅಡಿ ರಸ್ತೆಯ ಮೂಲಕ ಚಳ್ಳಕೆರೆ ರಸ್ತೆ, ಅಂಬೇಡ್ಕರ್ ವೃತ್ತ, ತಾಲೂಕು ಕಚೇರಿ ಮುಂಭಾಗದಿಂದ ನಗರ ಪ್ರವೇಶಿಸಿತು. ಅಲ್ಲಿಂದ ಗಾಂಧಿ ವೃತ್ತದ ಮೂಲಕ ಆಸ್ಪತ್ರೆ ವೃತ್ತ, ಚರ್ಚ್ ರಸ್ತೆ, ಹುಳಿಯಾರು ರಸ್ತೆ ಮೂಲಕ ಅದೇ ಮಾರ್ಗದಲ್ಲಿ ಹಿಂದಿರುಗಿ ಶ್ರೀಕೃಷ್ಣ ದೇವಸ್ಥಾನ ತಲುಪುವ ಮೂಲಕ ಬೃಹತ್ ಮೆರವಣಿಗೆಗೆ ತೆರೆ ಎಳೆಯಲಾಯಿತು.ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದ ಜನರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಯಕ್ಷಗಾನದ ಚಿತ್ರ ಹೋಲುವ ಗೊಂಬೆಯಾಟ, ಉರುಮೆವಾದ್ಯ, ತಮಟೆ ವಾದ್ಯ, ಚಂಡಿ ಮದ್ದಾಳೆ, ಡೊಳ್ಳು ಕುಣಿತ ಮುಂತಾದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜತೆಗೆ ನೂರಾರು ಯುವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಚಿಕ್ಕ ಚಿಕ್ಕ ಮಕ್ಕಳು ಸೇರಿದಂತೆ ಮಹಿಳೆಯರು ಸಹ ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಭವ್ಯ ಮೆರವಣಿಗೆ ಮತ್ತು ನಗರದ ವಾರದ ಸಂತೆಯ ಪ್ರಯುಕ್ತ ಮೆರವಣಿಗೆ ಆರಂಭಗೊಂಡ ತಕ್ಷಣವೇ ನಗರದೊಳಕ್ಕೆ ವಾಹನಗಳ ಪ್ರವೇಶ ನೀಷೇಧಿಸಲಾಯಿತು. ಇದರಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ನಗರದೊಳಕ್ಕೆ ಹೋಗಲು ಪರದಾಡುವಂತಾಗಿತ್ತು.ಈ ವೇಳೆ ಸಂಸದ ಗೋವಿಂದ ಕಾರಜೋಳ, ನಗರಸಭೆ ಸದಸ್ಯೆ ಶಿವರಂಜನಿ, ಮಾಜಿ ಸದಸ್ಯರಾದ ಶಿವಣ್ಣ, ಜಿ.ಪ್ರೇಮ್ ಕುಮಾರ್, ತಾಲೂಕು ಗೊಲ್ಲ ಸಂಘದ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್, ಕರಿಯಣ್ಣ, ಆಲೂರು ತಮ್ಮಣ್ಣ, ಕೆ.ಅಭಿನಂದನ್, ಡಾಬಾ ಚಿಕ್ಕಣ್ಣ, ಪ್ರಭು ಯಾದವ್, ಹೇಮಂತ್ ಯಾದವ್ ಹಾಗೂ ಶ್ರೀಕೃಷ್ಣ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸೇರಿ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ಹಾಜರಿದ್ದರು.