ಸಾರಾಂಶ
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ, ಸಾಹಿತಿ ಡಾ. ನರೇಂದ್ರ ರೈ ದೇರ್ಲ ಸಂಪಾದಕತ್ವದ ‘ಅಜಾತಶತ್ರು’ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅಭಿನಂದನಾ ಗ್ರಂಥವನ್ನು ಮತ್ತು ವಿಜಯಕುಮಾರ್ ಹೆಬ್ಬಾರಬೈಲು ಸಂಪಾದಕ್ವತ ‘ಪೂವರಿ’ ತುಳು ಮಾಸಿಕ ಸಂಚಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಆರೋಗ್ಯಪೂರ್ಣ ಹಾಗೂ ಮೌಲ್ಯಾಧಾರಿತವಾಗಿ ಪರಿಪೂರ್ಣ ಬದುಕು ಸಾಗಿಸುವುದು ಸುಲಭಸಾಧ್ಯವಲ್ಲ. ಮಾನವೀಯತೆ ಮತ್ತು ಸಜ್ಜನಿಕೆಯ ಬದುಕಿಗೆ ಸಿದ್ಧಾಂತ ಬೇಕು. ಈ ಸಿದ್ಧಾಂತ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು. ಹಾಗಾದಾಗ ಪಾರದರ್ಶಕತೆಯ ಹಾಗೂ ಸ್ಪಷ್ಟತೆಯ ಬದುಕು ನಮ್ಮದಾಗುತ್ತದೆ. ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರು ಇಂತಹ ಬದುಕನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.ಅವರು ಶನಿವಾರ ಪುತ್ತೂರು ಕೊಂಬೆಟ್ಟು ಬಂಟರಭವನದ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನಡೆದ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ ನವತಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿದ್ದಾಂತ ಎಂಬುದು ಬದುಕಿನಲ್ಲಿ ಅವಿಭಾಜ್ಯ ಅಂಶವಾಗಿರುತ್ತದೆ. ೯೦ ಹರೆಯದಲ್ಲೂ ಸ್ವಾವಲಂಬಿಯಾಗಿ ಬದುಕುತ್ತಿರುವ ಅವರ ಜೀವನವು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶ್ರಮ ಮತ್ತು ಅಪೇಕ್ಷೆ ಇರಬೇಕು. ಬಂಟರ ನಿಗಮ ಸ್ಥಾಪನೆಗೆ ಮತ್ತಷ್ಟು ಪ್ರಯತ್ನ ನಡೆಸುತ್ತೇನೆ. ಈ ಬಾರಿ ಬಜೆಟ್‌ನಲ್ಲಿ ಬಂಟರ ನಿಗಮ ಸ್ಥಾಪನೆಯ ಕನಸು ಈಡೇರಿಲ್ಲ ಎಂಬ ನೋವಿದೆ. ಮುಂದಿನ ಹಂತದಲ್ಲಿ ನಿಗಮ ಸ್ಥಾಪನೆಗೆ ಪ್ರಯತ್ನ ಮುಂದುವರಿಸಲಾಗುವುದು. ತುಳು ಭಾಷೆಗೆ ರಾಜ್ಯದಲ್ಲಿ ಸ್ಥಾನಮಾನ ಸಿಗಬೇಕು ಎಂಬುವುದು ನಮ್ಮ ಕೂಗು. ಈ ಬಗ್ಗೆ ಬಹಳಷ್ಟು ಕೆಲಸವನ್ನು ಮೋಹನ್ ಆಳ್ವ ಅವರು ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುವತ್ತ ನಮ್ಮ ಪ್ರಯತ್ನ ನಡೆದಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ನವತಿ ಸಂಭ್ರಮಾಚರಣೆ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಅರಿಯಡ್ಕ ಚಿಕ್ಕಪ್ಪ ಅವರನ್ನು ಗೌರವಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಂಡಿದ್ದೇವೆ. ಬಂಟರ ನಿಗಮ ಸ್ಥಾಪನೆಗೆ ನೀವು ಪ್ರಯತ್ನ ಪಡಿ ಶಾಸಕರೇ ನಿಮ್ಮ ಜತೆಗೆ ನಾವು ಸದಾ ಇದ್ದೇವೆ ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಪಟ್ಲ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ, ಸಾಹಿತಿ ಡಾ. ನರೇಂದ್ರ ರೈ ದೇರ್ಲ ಸಂಪಾದಕತ್ವದ ‘ಅಜಾತಶತ್ರು’ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅಭಿನಂದನಾ ಗ್ರಂಥವನ್ನು ಮತ್ತು ವಿಜಯಕುಮಾರ್ ಹೆಬ್ಬಾರಬೈಲು ಸಂಪಾದಕ್ವತ ‘ಪೂವರಿ’ ತುಳು ಮಾಸಿಕ ಸಂಚಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು.ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರಿಗೆ ಸಂಭ್ರಮಾಚರಣಾ ಸಮಿತಿ ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಸಮಾಜಸೇವಾ ರತ್ನ ಬಿರುದು ನೀಡಿ ಗೌರವಿಸಲಾಯಿತು.
ಅರಿಯಡ್ಕ ಚಿಕ್ಕಪ್ಪ ನವತಿ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಸನ್ಮಾನ ಸಮಿತಿ ಕೋಶಾಧಿಕಾರಿ ನೋಣಾಲು ಜೈರಾಜ್ ಭಂಡಾರಿ ಸನ್ಮಾನ ಪತ್ರ ವಾಚಿಸಿದರು. ಸಮಿತಿ ಕಾರ್ಯದರ್ಶಿ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.