ಸಾರಾಂಶ
ಗಜೇಂದ್ರಗಡ: ಪ್ರಧಾನಿ ಮೋದಿ ಅವರ ಪಾರದರ್ಶಕ ಆಡಳಿತ ಹಾಗೂ ಜನಪರ ಕಾಳಜಿಯ ಪ್ರತೀಕವಾಗಿರುವ ಮೋದಿ ಗ್ಯಾರಂಟಿಗಳನ್ನು ಜನತೆಗೆ ತಿಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ರೋಣ ಮತಕ್ಷೇತ್ರದ ಫಲಾನುಭವಿಗಳ ಸಂಪರ್ಕ ಅಭಿಯಾನದ
ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಕಳೆದ ೧೦ ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಕೈಗೊಂಡಿರುವ ರಾಜತಾಂತ್ರಿಕ ನಿರ್ಧಾರಗಳು ಹಾಗೂ ಪಾರದರ್ಶಕ ಆಡಳಿತದಿಂದಾಗಿ ಭಾರತವು ವಿಶ್ವದ ಬಲಿಷ್ಠ ದೇಶಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ವಿಪಕ್ಷಗಳಿಗೆ ಸ್ವಚ್ಛ ಹಾಗೂ ದಕ್ಷ ಆಡಳಿತ ಹಿಡಿಸುತ್ತಿಲ್ಲ. ಹೀಗಾಗಿ ಸುಳ್ಳು ಆರೋಪಗಳನ್ನು ಕೇಂದ್ರದ ಮೇಲೆ ಹೊರಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಪರಿಣಾಮ ವಿವಿಧೆಡೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಅಭಿವೃದ್ಧಿ ವಿರೋಧಿ ನೀತಿಯಿಂದ ಬೇಸತ್ತ ಜನತೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠವನ್ನು ಕಲಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಸಹ ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬರಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಜಿಲ್ಲೆ, ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಪಕ್ಷದಲ್ಲಿನ ಕಾರ್ಯಕರ್ತರು ಅಧಿಕಾರಕ್ಕೆ ಅಲ್ಲ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ಬೆಂಬಲಿಸುವವರು. ಹೀಗಾಗಿ ಶಿಸ್ತಿನ ಪಕ್ಷದಲ್ಲಿನ ಕಾರ್ಯಕರ್ತರು ಚುನಾವಣೆಯಲ್ಲಿ ತಾವೇ ಅಭ್ಯರ್ಥಿಗಳೆಂಬಂತೆ ಕೆಲಸ ನಿರ್ವಹಿಸುತ್ತಿದ್ದು, ಕಾಂಗ್ರೆಸ್‌ನ ಜನ, ರೈತ ವಿರೋಧಿ ನೀತಿಗಳನ್ನು ಜನತೆಯ ಮುಂದೆ ಬಿಚ್ಚಿಡುವುದರ ಜತೆಗೆ ಬಿಜೆಪಿ ಸರ್ಕಾರದಲ್ಲಿ ಫಲಾನುಭವಿಗಳನ್ನು ಸಂಪರ್ಕ ಮಾಡಲು ನೀಡುವ ಸಲಹೆ ಹಾಗೂ ಸೂಚನೆಗಳಂತೆ ಕೆಲಸ ನಿರ್ವಹಿಸುವ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಗೆ ಜನತೆ ಕಟ್ಟಿಕೊಂಡಿರುವ ಕನಸನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದರು.ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ ಮಾತನಾಡಿ, ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಮೋದಿ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರಗಳು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಜನತೆಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಾ ಬರುತ್ತಿವೆ. ಹೀಗಾಗಿ ಬಿಜೆಪಿ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕ ಅಭಿಯಾನದ ಪೂರ್ವಭಾವಿ ಸಭೆಯು ಯಶಸ್ವಿಗೊಂಡಿದ್ದು ಅಭಿಯಾನವನ್ನು ಸಹ ಯಶಸ್ವಿಗೊಳಿಸಲು ಮುಂದಾಗಿ ಎಂದರು.
ಈ ವೇಳೆ ವಿವಿಧ ಮೋರ್ಚಾಗಳಿಗೆ ನೇಮಕವಾದ ಪದಾಧಿಕಾರಿಗಳಿಗೆ ನೇಮಕ ಆದೇಶಪತ್ರವನ್ನು ವಿತರಿಸಲಾಯಿತು.ಮುತ್ತಣ್ಣ ಕಡಗದ, ರವಿ ಕರಿಗಾರ, ಬಿ.ಎಂ. ಸಜ್ಜನರ, ಆರ್.ಕೆ.ಚವ್ಹಾಣ, ಫಕೀರೇಶ ರಟ್ಟಿಹಳ್ಳಿ, ಬಸವನಗೌಡ ಪಾಟೀಲ, ಸೋಮಶೇಖರ ಹಿರೇಮಠ, ಚಂದ್ರು ಕುರಿ, ರಾಜೇಂದ್ರ ಘೋರ್ಪಡೆ, ಅಶೋಕ ನವಲಗುಂದ ಸೇರಿ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಇದ್ದರು.